ಕಾವ್ಯ ಸಂಗಾತಿ
ಡಾ. ಬಸಮ್ಮ ಗಂಗನಳ್ಳಿ-
ನಾನು ಮತ್ತು ಕನ್ನಡಿ
ನನಗೂ ನಿನಗೂ ದಿನದಲಿ
ಎಷ್ಟು ಸಾರಿ ಮುಖಾಮುಖಿ
ಲೆಕ್ಕವಿಲ್ಲ ಅದಕೆ…
ಹೇಳು ನೀನು
ಹೇಗಿರುವೆ ನಾನು?
ನೀನು ತೋರಿದ ರೀತಿಯೆ?
ಇಲ್ಲ ನೀನು ಬೇರೆಯೇ
ಕಾಣುವ ರೂಪಿಗಿಂತ
ಕಾಣದ ಚಲುವುವೊಂದಿದೆ..
ಅದನು ಹುಡುಕು
ಮನ ಮುಕುರದಲಿ
ಶಬ್ದಾತೀತ ಪ್ರತಿಫಲನ..
ಶುಭ್ರ ಅತೀ ಶುಭ್ರ
ಭಾವ ಸ್ಖಲನ ಪ್ರಭೆ
ಧವಳಕಾಂತಿ ಕಿರಣ
ನನ್ನ ಹಾಗೆ ಬೇಗ
ಕಾಣಿಸದು ಆ ಕನ್ನಡಿ
ನಿನ್ನ ಬಿಟ್ಟು ಯಾರಿಗೂ..
ನಿನ್ನ ಜೊತೆಗೆ ಸದಾಕಾಲ
ಮಿಡಿವ ಮೃದಂಗನಾದ
ಸುನಾದದ ಸುಪ್ರಭೆಯು
ಅಂತರಂಗ ಸಂಗಾತಿ
ಜೀವ ಭಾವದೊಲುಮೆ
ಚೈತನ್ಯ ಚಿಲುಮೆ ಅದು..
ತೊಳಗಿ ಬೆಳಗುವ ಚಿಜ್ಜ್ಯೋತಿ
ಹೊಳೆ ಹೊಳೆವ ಪ್ರೇಮಗನ್ನಡಿ
ಪರಿಶುದ್ಧತೆಯ ಪ್ರತಿರೂಪ
ನಶಿಸದ, ಚೂರಾಗದ
ಪರಿಪೂರ್ಣ ರೂಪದ
ಪರಮಾನಂದದ ಕನ್ನಡಿ..
ನೋಡು ನೀ ದಿಟವಾಗಿ
ಮುಖ ಮನವ ಕೊಟ್ಟು
ಜೊತೆಗಾತಿಯ ಅನುದಿನ
ನೀನು, ನಾನು ,ತಾನು
ಎಲ್ಲ ಭಿನ್ನ ತೊರೆದು
ಲೀನವಾಗು ಅದರಲಿ..
ಡಾ. ಬಸಮ್ಮ ಗಂಗನಳ್ಳಿ