ಉತ್ತಮ ಎ. ದೊಡ್ಮನಿಯವರ ಕಥೆ “ಕತಲ್ ರಾತ್ರಿ”

ಕಥಾ ಸಂಗಾತಿ

ಉತ್ತಮ ಎ. ದೊಡ್ಮನಿ

“ಕತಲ್ ರಾತ್ರಿ”

ಬೂದಿಹಾಳ ಒಂದು ಸಣ್ಣ ಹಳ್ಳಿ, ಎಲ್ಲಾ ಊರಿನಲ್ಲಿ ಇರುವಂತೆ ಅಲ್ಲಿಯೂ ಕೂಡ ಜಾತಿ ಧರ್ಮಗಳನ್ನು ಇನ್ನು ಉಳಿಸಿಕೊಂಡು, ಅದಕ್ಕೆ ಪೋಷಣೆ ಮಾಡುತ್ತಾ ಬಂದಿರುವ ಶಿವಲಿಂಗಯ್ಯ ಸ್ವಾಮಿ ಎಂಬ, ಗುಡಿಯ ಪೂಜಾರಿ. ಊರಿಗೆ ದೇವರ ಪೂಜಾರಿ ಆದರೂ, ಅಧಿಕಾರ ಮಾತ್ರ ಅಲ್ಲಿನ ಮಾಲಿಗೌಡನಾದ ನಿಂಗೆಗೌಡನ ಹತ್ತಿರ ಭದ್ರವಾಗಿತ್ತು.
         ನಗರದಿಂದ ಅಷ್ಟೇನೂ ದೂರನು ಅಲ್ಲ ಮತ್ತು ಹೇಳಿಕೊಳ್ಳುವಂತೆ ಹತ್ತಿರನು ಇಲ್ಲ. ಅಲ್ಲಿನ ಆಗುಹೋಗುಗಳಿಗೆ ಊರಿನ ಮಾಲಿಗೌಡನೇ ಅಂತಿಮ ಷರಾ.
       ಅಂದು ಮುಂಜಾವಿನ ಸೂರ್ಯನ ಕಿರಣಗಳು, ತಾಯಿ ಮಡಿಲು ಹೊರಹೊಮ್ಮುವ ಹೊತ್ತಿಗೆ, ಧೂಳೆಬ್ಬಿಸಿಕೊಂಡು ಬಿಳಿ ಬಣ್ಣದ ಕಾರುಗಳು ಭೀಮ್ ನಗರ, ಕನಕದಾಸ ಚೌಕ್ ಯಿಂದ, ಬಸವೇಶ್ವರ ವೃತ್ತ ದಾಟಿ ಊರು ಅಗಸ್ಯಾಗ ಕಣ್ಣ ಮುಚ್ಚಿ ತೆರೆದೂರ ಒಳಗೆ ಮರಿಯಾದವು.
        ಹುಲ್ಲಿನ ಹೊರಿ ತಲೆಯ ಮೇಲೆ ಹೊತ್ತುಕೊಂಡು, ಚಾ ಅಂಗಡಿ ಬಲ್ಲೆ ನಿಂತ್ತಿದ ಮಲ್ಲಪ್ಪನನ್ನು ಕೇಳಿದ, ಏನ್ ಮಲ್ಲಪ್ಪಣ್ಣ ಇವತ್ತು ಯಾಕೋ ಕಾರುಗಳು ಮುಂಜಮುಂಜಾನೆ ಊರಿಗೆ ಬರ್ತಾವಲ್ಲ, ಏನಾದರೂ ಲಪಡಾ ಆಗ್ಯಾದ ಹೇಗಂತ. ಹೇ ಅದು ನನಗೆನು ಗೊತ್ತಪ್ಪಾ, ನಾ ಈಗ ಶಿವಶಿವ ಅಂತ ಎದ್ದಿ ಬಂದೀನಿ. ನೀ ಯಾಕ ಅಟ್ಟು ಸಿಟ್ಟ ಮಾಡಕೊತಿ ಗೊತ್ತಿದುರ ಹೇಳು. ನಾ ಯಾಕ ಸಿಟ್ಟ ಮಾಡ್ಕೊಳ್ಳಿ. ನೀ ಮನಿಗ ಹೋಗಿ ಹುಲ್ಲಿನ ಹೊರಿ ಇಳಿಸಿ ಬಾ, ಅಲ್ಲಿತನ ಎಲ್ಲಾ ಗೊತ್ತಾತದ ಅಂತ ಮಲ್ಲಪ್ಪ.
    ಅಲ್ಲೇ ಕಟ್ಟಿ ಮೇಲೆ ಗಣೇಶ ಬೀಡಿ ಸೇದತ್ತ ಕುಂತಿದ ಭೀಮಣ್ಣ, ಕುಂಡಿ ಹೊಳ್ಳುಸಿ ಎ! ಹುಚ್ಚ, ಈಗ ಎಲೆಕ್ಷನ್ ಅವಾ ಗೊತ್ತಿಲ್ಲೇನು? ಅದಕ್ಕೆ ಹೇಳಿದ್ದು ನಿಮುಗೆ ಜರಾ ಮನಿ, ಮಠಾ ಬಿಟ್ಟಿ ಹೊರುಗ ಬರ್ರಿ ಅಂತ. ನೀವು ಯಾವಾಗ ನೋಡಿದ್ರೂ ಹೊಲ-ಮನಿ ಅಂತ ಸಾಯಿತಿರಿ. ಹೌದದು! ಅಂತ ಬಂಡಪ್ಪ, ಮಲ್ಲಪ್ಪ ಹುಬ್ಬೆರಿಸಿ ಹೇಳದುರು. ಏನ್! ಹೌದು? ಮನ್ಸ್ಯಾಗ ಜರಾ ಆದೂರು ರಾಜಕೀ ನಾಲೆಜ್ ಇರಬೇಕು. ಎಲ್ಲಿ ಏನಾತದ, ಏನಿಲ್ಲ ಅಂತ.
     ಭೀಮಣ್ಣ… ಮೊನ್ನೆನೆ ಮುಗಿತಲ್ಲ ಈ ಎಲೆಕ್ಷನ್. ಆಗಳ್ಗೆ ಮತ್ತೆ ಬಂತು. ಈಗ ಮತ್ತ ಜೋರಾದ ಅನ್ನು ಭೀಮಣ್ಣಂದು. ನಮ್ಮ ಕೈಯಿಗ ಹತ್ತಲ, ಈಗ ಲೀಡರ್ ಸಾಬೂರು.
ಹೌದದು! ಅಂತ ಖುಷಿಯಿಂದ ಗೋಣ ಹಾಕಿದರು ಹೋಟಲ ಮುಂದ ಕುಂತವರು. ಇದೆಲ್ಲ ಕೇಳಿ ಒಳುಗೊಳುಗೆ ಹಿಗ್ಗಿ ಹೀರೇಕಾಯಿ ಆದ ಭೀಮಣ್ಣ. ಅಲ್ಲಿದ್ದವರಿಗೆಲ್ಲ ಕಟಿಂಗ್ ಚಾ ಹೇಳಿದ. ಎಲ್ಲರೂ ಚಾ ಕುಡುಕೋತ ತಮ್ಮತಮುಗ ತಿಳಿದಂಗ ಮಾತಾಡಕೋತ ಕುಂತುರು ರಾಜ್ಕಿ.
      ಅವತ್ತೇ ಹೊತ್ತಮುಣಿಗ ಭೀಮಣ್ಣ ತಮ್ಮ ಕೇರಿ ಮಂದಿಯಲ್ಲ ಹಾಲ ಕಮಿಟ್ಟಿಯಲ್ಲಿ ಕರೆದಿದ್ದ. ಎಲ್ಲಾ ಕೇರಿ ಹಿರಿಯರು, ಹೆಣ್ಣ ಮಕ್ಕಳ ಸಂಘದವುರು ಊರ ಪರ್ಗೊಳು ಸೇರಿದರು.ಅಲ್ಲಿ ಬಂದವರೆಲ್ಲ ಗುಸುಗುಸು ಅಂತ ಮಾತಾಡ್ಕೋತ ಕುಂತಿರು.


    ಭೀಮಣ್ಣ ತನ್ನ ರಾಜಕೀಯ ಗತ್ತಿನಲ್ಲಿ ಬಂದು ತನುಗ ಕಾದಟ್ಟಿದ ಕುರ್ಚಿ ಮ್ಯಾಲ ಕುಂತಾ. ಮೆಲ್ಲುಗ ಅಲ್ಲಿದವರ ಸಮಾಚಾರ ತಿಳ್ಕೊಳತ್ತ. ಈಗ ಹೇಳ್ರಿ ನಿಮಗೇನೇನು ಪ್ರಾಬ್ಲಮ್ ಅವಾ, ಇದೇ ಸರಿಯಾದ ಟೈಮ್ ಅದ. ಆಮೇಲೆ ಎಲೆಕ್ಷನ್ ಮುಗಿದ ಮ್ಯಾಲ ನಮೂಗ ಯಾವ ನಾಯಿನು ಮೂಸ ನೋಡಲ್ಲ ಅಂತ ತನ್ನ ಕಂಚಿನ ಕಂಠದಿಂದ ಕೇಳ್ದ.
     ಮುಂಜಾನೆ ಬಂದಿದ ಕಾರಿನ ಬಗ್ಗೆ, ಕಾರು ಬಂದ ಹೋದ ಮೇಲ ಮಾಲಿಗೌಡ ಕರ್ದು ನಿಮ್ಕೇರಿ ಜವಾಬ್ದಾರಿ ನಿಂಗೆ ನೋಡಪ್ಪ ಭೀಮಣ್ಣ ಅಂತ ಅವನಿಂದ ಆಣೆ ಮಾಡಿಸಿಕೊಂಡು ಕಳಿಸಿದ್ದು ಹಾಗೆ ಒಂದು ಕ್ಷಣ, ಕಣ್ಣ ಮುಂದ ಮಿಂಚಿನ ಹಾಗೆ ಬಂದು ಹೋಯಿತು.
     ಬೂದಿಹಾಳ ಒಂದು ಮೀಸಲ ಕ್ಷೇತ್ರ. ಈ ಸಾರಿ TP ಮತ್ತ ZP ಎಲೆಕ್ಷನ್ ಎರಡು ಒಂದೇ ಸಾರಿ ಬಂದಿವು. ಹೇಗಾದರೂ ಮಾಡಿ ಈ ಸಾರಿನು ತಮ್ಮ ಕ್ಯಾಂಡೇಟ್ ಗೆದಿಬೇಕಂತ ಹೈಕಮಾಂಡ್ ತಾಕಿತ್ತ ಮಾಡಿ ಹೇಳಿ ಕಳಿಸಿದ್ರು. ಆದುರ ಈಗಂತ್ತು ಲೆಕ್ಕ ಇಲ್ದಟ್ಟು ಪಾರ್ಟಿಗಳು ಅವಾ, ಅದುರ ನಡಬರಕ ಇಂಡಿಪೆಂಡೆಂಟ್ ಕ್ಯಾಂಡೇಟ್ ಬ್ಯಾರೆ. ಅದರಲ್ಲಿ ಹೇಳಿಕೊಳ್ಳುವಂತ ಒಂದು ಮೂರು ನಾಲ್ಕು ಪಕ್ಷಕ ಜನರ ಒಲವು ಹೆಚ್ಚು.
      ಇತ್ತೀಚಿಗ ದಲಿತ ಸಂಘಟನೆಗಳಿಂದ ಸಾಲಿಕಲ್ಯಾ ಪರಗೋಳು ಹುಶ್ಯಾರ ಆಗ್ಯಾವ. ಎಲ್ಲದರಲ್ಲಿ ಜಾಗೃತಿ ಬೀಜ ಬಿತ್ತಿದಾರ. ಮಾಲಿ ಗೌಡ್ರು ಮಾತಿಗೆ ಈಗ ಊರಾಗ ಈ ಪರಗೊಳಿಂದ ಕಿಮ್ಮತ್ ಕಡಿಮೆ ಆಲತಿತ್ತು. ಆದುರು ಈ ಗೌಡೇನು ಕಡಿಮೆಯಿಲ್ಲ ಎಲ್ಲಾ ಆಟ ಆಡ್ತಾನ. ಹಲ್ಕಟ್ ಹನಂತ ಗೊತ್ತಿದ್ದರೂ, ಊರಾಗ ಅವುನ ಎದುರು ನಿಂತಿ ಮಾತಾಡೋ ಮಗ ಒಬ್ನು ಇಲ್ಲ. ಎಲ್ಲಾ ಅವನ ಅಣ್ತೆಯಂತೆ ಕೆಲಸ ಆತಿತ್ತು.ಆದರೂ ಈ ಸಾರಿ ಗುಪ್ತಚರ ಮಾಹಿತಿಯ ಪ್ರಕಾರ ತಮ್ಮ ಪಾರ್ಟಿ ಮನುಷ್ಯ ಗೆದ್ಯಾದು ತ್ರಾಸದ ಅಂತ ಇಂಫಾರ್ಮೇಷನ್ ಬಂದಿತ್ತು ಹೈ ಕಮಾಂಡಕ್ಕೆ.
     ಈ ಸಾರಿ…. ಭೀಮ್ ನಗರದಲ್ಲಿ ಎಲೆಕ್ಷನ್ ನಿಲ್ಲುಕ ತಯಾರಿ ನಡಸ್ಯಾನಂತ. ನಿಲ್ಲತನ ಅಂತ ಮಾಹಿತಿ. ಅಟ್ಟೆ ಇದ್ದೂರ ಪರವಾಗಿಲ್ಲ ಅವುನು ಚಲೋನೆ ಟಕ್ಕಪರ ತಗೋತಾನ ಅನ್ನೋದು. ಅವುನಿಗ ನಮ್ಮ ಊರಿನ ಈ ಎಲ್ಲಾ ಕೆಳ ಜಾತಿ ಮಂದಿ ಮತ್ತು ಗೌಡುಗ ಆಗಲ ಮಂದಿ ಒಂದಾಗಿ ಅವನಿಗೆ ಸಪೋರ್ಟ್ ಮಾಡ್ತೆವು, ನಿಮ್ಮ ರೊಕ್ಕ ರೂಪಾಯಿ ಏನು ಬೇಡ, ಆ ಗೌಡುನ ಮನುಷ್ಯ, ಸೋಲಬೇಕು, ಅವ ಸೋತುರ ಗೌಡನ ಸೋಕ್ಕ ಮುರಿತ್ತದ ಅಂತ ಬಾಬಾ ಸಾಹೇಬ, ಬಸವಣ್ಣ, ಕನಕದಾಸರು ಫೋಟೋ ಎದುರು ಪ್ರಮಾಣ ಮಾಡಿದು, ಇದೆಲ್ಲ ಕಿವ್ಯಾಗ ಬಿದ್ದಿತ್ತು.
       ಊರಿನ ಪರಿಸ್ಥಿತಿಯನ್ನು ಅರಿಯಲು ಗೌಡ ತನ್ನ ನಂಬಿಕಸ್ತರನ್ನು ಕರೆದಿದ್ದ. ರಾತ್ರಿ ಪಾರ್ಟಿಗ ಅವರಿಗೆಲ್ಲ ಗುಂಡು-ತುಂಡು ರೆಡಿ ಮಾಡಿದ. ಅವರ ಜೋಡಿ ಪೂಜಾರಿಗು ಕರೆಯದು ಮರೆಯಲಿಲ್ಲ.
     ಎಲ್ಲರೂ ಸರಿಯಾದ ಸಮಯಕ್ಕೆ ಗೌಡನ ತೋಟದ ಮನೆಗೆ ಹಾಜರಾದರು, ಹೇಳಿದ ಟೈಮಿಗಿಂತ ಮುಂಚೆ. ಅದು ಅವರಿಗೆಲ್ಲ ಮಾಮೂಲಿ ಪ್ಲೇಸ್ ಇತ್ತು. ಕೂಡಿಯೋದು ತಿನ್ನೋದು ಇದ್ದೂರ ಯಾರು ಲೇಟ್ ಮಾಡ್ತಿರಲಿಲ್ಲ. ಅಲ್ಲಿಗ ಬರವುರಿಗ ಎಲ್ಲಾ ಮೊದಲೇ ಗೊತ್ತಿತ್ತು, ಗೌಡ ಯಾಕ ಕರಿಸಿದ ಅಂತ. ಆದರೂ ಗೌಡ ಕೇಳಿದ ಕೂಡಲೇ ತಾವು ಏನು ಹೇಳಬೇಕು ಅಂತ ಮನಸ್ನ್ಯಾಗೆ ಎಲ್ಲರೂ ಡಿಸೈಡ್ ಮಾಡ್ತಾ ಇದ್ದರು ಒಂದೊಂದು ಉತ್ತರ. ಸುಮ್ನೆ ಗೌಡ ಒಂದು ಕೇಳದು ತಾವು ಒಂದು ಹೇಳೋದು ಆಬಾರದು ಅಂತ.
      ಹಾಗೆ ವಿಚಾರ ಮಾಡ್ಕೊಂತ ತೋಟದ ಮನಿಗ ಎಲ್ಲರೂ ಹೋದರು ಗುಡಿ ಪೂಜಾರಿ ಹಿಡಿದೆ. ಇವರು ಬರುವಕ್ಕಿಂತ ಮುಂಚೆ ಗೌಡ ಮಂಚುದ ಮ್ಯಾಲ ಕುಂತಿದ ಒಂದು ಕೈಯಲ್ಲಿ ಗಿಲಾಸ, ಇನ್ನೊಂದು ಕೈಯಾಗ ಬ್ರಿಸ್ಟಲ್ ಸಿಗರೇಟ್ ಹಿಡಿದು ವಿಚಾರ ಮಾಡ್ಕೋತಾ.
ನಿಂಗೆಗೌಡ ಕಂಡು ಕೂಡಲೇ, ಗೌಡ್ರೆ ನಮಸ್ಕಾರ ಅಂತ ನಮಸ್ಕಾರ ಮಾಡಿದ್ರು. ಒಟ್ಟು ಜನರ ಅವಜಿಗ ಗೌಡ ಒಮ್ಮೆಗೆ! ಹೌಹಾರಿ ಕೈಯಾಗಿನ ಗ್ಲಾಸ್ ಬಿಟ್ಟು ತಿರುಗಿ ನೋಡಿ, ಹೆದರಿಕೊಳ್ಳದಂತೆ ನಟಿಸಿ ಎಲ್ಲರಿಗೂ ಕೂಡಲು ಹೇಳಿದ.

    ಕೂಡಿಯಲು ಹೇಳಿ ತಾನು ಒಂದು ಗ್ಲಾಸ್ ಎತ್ತಿದ ಮೇಲೆ ಮುಂದೆ ಬರುವ ಎಲೆಕ್ಷನ್ ಬಗ್ಗೆ ಹೈಕಮಾಂಡ್ ನಿಂದ ಬಂದ ಆದೇಶ ಎಲ್ಲವೂ ವಿವರಿಸಿದ. ಎಲ್ಲರೂ ತಮಗೆ ತೋಚಿದಂತೆ ಉಪಾಯಗಳನ್ನು ಹೇಳಿದರು. ಎದ್ರಿನ ಕ್ಯಾಂಡೇಟ್ ಗೆ ಹಣಕಾಸಿನ ಆಮಿಷ ಹೊಡ್ಡುವದು. ಅವರ ಜಾತಿಯಲ್ಲಿ ಮತ್ತೊಬ್ಬರನ್ನು ನಿಲ್ಲಿಸುವುದು, ಇಲ್ಲ ಹೆದರಿಸುವುದು. ಅವರವರ ನಡುವೆ ಜಗಳ ಹಚ್ಚುವುದು ಹೀಗೆ ಹಲವು ವಿಚಾರಗಳನ್ನು ವ್ಯಕ್ತಪಡಿಸಿದರು.

      ಆದರೆ ಅಲ್ಲಿ ಕುಂತಿದ ಪೂಜಾರಿ ಮಾತ್ರ ಎಲ್ಲರ ಮಾತನ್ನು ಆಲಿಸಿ, ಕೊನೆಗೆ ತನ್ನ ಉತ್ತರವನ್ನು ತಿಳಿಸಿದ. ಅದನ್ನು ಕೇಳಿ ಗೌಡುಗ ಹಿಡುದು ಎಲ್ಲರಿಗು ಕುಡದಿದ ನಿಶಾ ಇಳಿದು ಹೋಯಿತು. ಎಲ್ಲರ ತಕರಾರು ಇದರಿಂದ ನಮ್ಮ ಪಾರ್ಟಿ ಇಮೇಜ್ ಮತ್ತು ಈ ಮಂದಿ ಕೋಬ್ಬ ಹೆಚ್ಚಾಗುತ್ತೆ ಅಂತ. ನೀನು ಅವರಂತೆ ಮಾತಾಡ್ತೀಯಾ ಅಂತ ಪೂಜಾರಿ ಮೇಲೆ ಎಲ್ಲರೂ ಸೀಟ್ ಮಾಡ್ಕೊಂಡರು.

     ಆದರೆ ಅವನು ಒಳ ಮರ್ಮ ಯಾರಿಗೂ ಅರ್ಥವಾಗದೆ ಒಬ್ಬರ ಮುಖ ಒಬ್ಬರು ಮಂದ ಬೆಳಕಿನಲ್ಲಿ ನೋಡುತ ಕುಂತರು. ಪೂಜಾರಿ ಎಲ್ಲರನ್ನ ಒಪ್ಪಿಸಿ ತನಗೆ ಇಷ್ಟದಂತೆ ಕೂ, ತಿಂದು ಮತ್ತೆ ಚಿಲದಲ್ಲಿ ತಗೆದು ಕೊಂಡು ಹೋಗುವದು ಮರೆಯಲಿಲ್ಲ. ಗೌಡನಿಗೆ ಪೂಜಾರಿ ಹೇಳಿದು ಸರಿ ಅನಿಸಿತ್ತು.

   ಬೆಳಗ್ಗೆ ಎದ್ದು ಗೌಡ ಊರಿನ ಮುಖಂಡರಿಗೆ ಮತ್ತು ಅಲ್ಲಿನ ಸಣ್ಣಪುಟ್ಟ ಲೀಡರ್ ಗಳಿಗೆ ಎದುರಿನ ಕ್ಯಾಂಡೇಟ್ ಕಡೆಯ ಜನರಿಗೆ ಹಾಗೂ ಹುಡುಗರಿಗೆ ಕರೆಸಿದ. ನಾನು ನಿಮ್ಮ ಜೊತೆ ಇರ್ತೀನಿ ಬೇರೆ ಊರಿನವರು ಗೆಲ್ಸೋಕಿಂತ ನಮ್ಮ ಊರಿನವನಿಗೆ ಗೆಲ್ಸೋದು ಒಳ್ಳೆಯದು ಅಂತ ನಾವೆಲ್ಲರೂ ಡಿಸೈಡ್ ಮಾಡಿದ್ದೇವು, ನಿಮಗೆ ಏನು ಸಹಾಯ, ಸಹಕಾರ ಬೇಕು ಕೇಳಿ ಅಂತ ಊರಿನ ಜನರ ಎದುರು ಗೌಡ ಮಾತು ಕೊಟ್ಟ.

    ಎಲೆಕ್ಷನ್ ಪ್ರಚಾರ ಜೋರಾಗಿ ನಡೆಯಿತು. ಎಲ್ಲರೂ ಒಂದಾಗಿ ಪ್ರಚಾರ ಮಾಡುಕ ಸ್ಟಾರ್ಟ್ ಮಾಡಿದರು. ಬೇಗಿನ ಬೇಗ ಪ್ರಚಾರ ರಾತ್ರಿ ಗುಂಡು ತುಂಡುಗಳ ಸೇವನೆಗೆ ಕಡಿಮೆಯಾಗದ ಹಾಗೆ ಗೌಡನೆ ಎಲ್ಲಾ ಜವಾಬ್ದಾರಿ ತೆಗೆದುಕೊಂಡ. ಎಲ್ಲರಿಗೂ ಒಂದು ಕಡೆ ಸೇರಿಸಿ ಪ್ರಚಾರದ ಮಾತುಕತೆ, ಮುಂದಿನ ಪ್ಲಾನ್ ಗಳು ರೂಪುರೇಷೆಗಳು ಹಾಕಲೆಂದೆ ಒಂದು ಶಡ್ಡನ್ನು ಕಿರಾಯಿ ತೆಗೆದುಕೊಂಡರು. ಅದೇ ಎಲ್ಲರ ಅಡ್ಡ. ಕುಂದು ಕೊರತೆಗಳನ್ನು ಆಗದಂತೆ ನೋಡಿಕೊಳ್ಳಲು ಭೀಮಣ್ಣನಿಗೆ ಸಂಪೂರ್ಣ ಜವಾಬ್ದಾರಿ ಕೊಟ್ಟ.

     ಇದು ನಮ್ಮೂರಿನ ಮಾನದ ಪ್ರಶ್ನೆ ಇದೆ ಎನ್ನುತ್ತಾ ಖುದ್ದಾಗಿ ತಾನೇ ಮನೆ ಮನೆ ಪ್ರಚಾರ ಶುರು ಮಾಡಿದ. ಇದೆಲ್ಲ ನೋಡಿ ನಾಗಪ್ಪ ಫುಲ್ ಖುಷ್, ಈಗ ಗೆದ್ದವನಂತೆ ಆರಾಮಾಗಿ ಕನಸು ಕಾಣುತ್ತಾ ತಿರುಗುತ್ತಿದ್ದ. ಆದರೂ ಮನದ ಒಂದು ಮೂಲಿಯಲ್ಲಿ ಅಳಕು. ಎಲೆಕ್ಷನ್ ಏನೂ… ಇನ್ನೂ ನಾಲ್ಕೈದು ದಿನ ಅವಾ? ಅನ್ನರದಾಗ ಮತ್ತಷ್ಟು ಪ್ರಚಾರ ಜೋರು.

    ಎದುರಿನ ಪಾರ್ಟಿ, ಮನುಷ್ಯ ಕೂಡ ಏನು ಕಡಿಮೆ ಇರಲಿಲ್ಲ. ಅವನಿಗೆ ತನ್ನದೆ ಆದ ಪಾರ್ಟಿ ಸಪ್ಪೋರ್ಟ್ ಇತ್ತು. ಹಗಲು ರಾತ್ರಿ ಎನ್ನದೆ ಪ್ರಚಾರಗಳ ಸುರಿಮಳೆ, ಹಾದಿಯಲ್ಲಿ ಸಿಕ್ಕ ಸಿಕ್ಕವರ ಕೈಕಾಲು ಬೀಳುವುದು ಆಸೆಯ ಆಮಿಶಗಳು ಒಡ್ಡುವುದು ಯಾವುದೂ ಪಾರ್ಟಿವರು ಕಡಿಮೆ ಮಾಡಲಿಲ್ಲ. ಬಾರ, ಧಾಬ್,.ಚಾ ಹೋಟೆಲ್ ಎಲ್ಲ ಫುಲ್. ಹೀಗೆ ಪ್ರಚಾರದ ಕೊನೆಯ ದಿನ ಬಂದೇಬಿಟ್ಟಿತು.

   ಅಲ್ಲಿನ ಯುವಕರು ಗೌಡನ ಕಿತಾಪತಿ ಅರೀತಿದ್ದರಿಂದ ತಮ್ಮ ಕೇರಿಯ ಜನರೆಲ್ಲರನ್ನು ಕರೆಸಿ ತಿಳಿ ಹೇಳಿದರು.ಗೌಡ ಪ್ರಚಾರದ ನೆಪದಲ್ಲಿ ತನ್ನ ಎದುರಿನ ಪಾರ್ಟಿಗೆ ಸಪೋರ್ಟ್ ಮಾಡುತ್ತಿದ್ದಾನೆ ಅವನನ್ನು ನಂಬಬೇಡಿ ಎಂದು. ಆದರೆ ಅಲ್ಲಿನ ಲೀಡರ್ ಗಳು, ಗೌಡನ ಚಮಚಗಳು ಈ ಹುಡುಗರ ಮಾತಿಗೆ ಕಿಮ್ಮತ್ತು ಕೊಡದೆ ಬೈದು ಕಳಿಸಿದರು.

     ಎಲ್ಲರೂ ಕಾತೂರಿಂದ ಕಾಯುವ ದಿನ ಬಂದೇಬಿಟ್ಟಿತು, ಬೆಳಗ್ಗೆ ಎಲ್ಲರೂ ಗೌಡನ ಆದೇಶದಂತೆ ಎಲೆಕ್ಷನ್ ನಡೆಯುವ ಸ್ಥಳದ ಎದುರು ಟೆಂಟುಗಳು ಹಾಕಿದರು. ಓಟ ಹಾಕಲು ಬಂದ ಜನರಿಗೆ ಆಲು ಬಾತ್ ತಿನ್ನಲು, ಕುಡಿಯಲು ನೀರಿನ ವ್ಯವಸ್ಥೆ ಎಲ್ಲವೂ ಮಾಡಿದರು. ಕುದ್ದಾಗಿ ಗೌಡ ಬರುವರಿಗೆ ಕೈ ಮುಗಿಯುತ್ತಾ ನಿಂತಿದ. ಇದನ್ನು ನೋಡಿದ ನಾಗಪ್ಪ ಗೆದ್ದಿತಿನೆಂಬ ಖುಷಿಯಿಂದ ಬಂದ ಜನರಿಗೆ ಕೈ ಮುಗಿದು, ಒಂದು ಸಾರಿ ತಮ್ಮ ಸೇವೆ ಮಾಡಲು ಅವಕಾಶ ಕೇಳುತ್ತಿದ್ದ.

     ಎಲ್ಲರೂ ಕಾತುರದಿಂದ ಕಾಯುತ್ತಿದ್ದ ರಿಜಾಲ್ಟ್ ದಿನಾ ಬಂದೆ ಬಿಟ್ಟಿತು, ಎಲ್ಲವೂ ಉಲ್ಟಾ. ಎಲೆಕ್ಷನ್ ನಲ್ಲಿ ನಾಗಪ್ಪ ಬಹಳ ಅಂತರದಿಂದ ಸೋಲಿಗೆ ಶರಣಾಗಿದ.ಪೂಜಾರಿಯ ಒಳ ಆಟ ಈಡೇರಿತು. ಗೌಡನ ಆಸೆ ಫಲಸಿತು.ಇದರ ಒಳ ಮರ್ಮವನ್ನು ಅರಿಯದೆ ಹೋದರು ಅಲ್ಲಿನ ಜನರು. ಮತ್ತೊಮ್ಮೆ ಗೌಡನಿಗೆ ಶರಣಾದರು.

    ಇದೆಲ್ಲವೂ ನಡದಿದೆ ಎಲೆಕ್ಷನ್ ಹಿಂದಿನ ದಿನ, ಅದೇ “ಕತ್ತಲ್ ರಾತ್ರಿ”. ಇದು ಕೇವಲ ಒಂದು ಊರಿನ ಕಥೆಯಲ್ಲ, ಒಬ್ಬ ನಾಗಪ್ಪನ ಸೋಲಲ್ಲ. ಅಂದಿನ ಹಿಡಿದು ಇಂದಿನವರೆಗೂ “ಕತ್ತಲ್ ರಾತ್ರಿ” ಪ್ರತಿ ಹಳ್ಳಿಯಿಂದ, ದಿಲ್ಲಿತನ ನಡಿತಾ ಬಂದಿರುವುದು. ಈ ಕತ್ತಲ್ ರಾತ್ರಿಗೆ ಬಲಿಯಾಗುವರಿಗೆ ಲೆಕ್ಕವಿಲ್ಲ. ಆ ಜನರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡ ಗೌಡ, ತಮ್ಮವರಂತೆ ನಟನೆ ಮಾಡುವ ಭೀಮಣ್ಣ, ಪೂಜಾರಿ ಇರುವರಿಗೂ ಗೋಳು ತಪ್ಪಿದ್ದಲ್ಲ.

     ಅದಕ್ಕಾಗೇ ಇತ್ತೀಚಿಗೆ ಯುವಕರು, ಪ್ರಜ್ಞಾನವಂತ ಜನತೆ ರಾಜಕೀಯ ಅಂದ್ರೆ ಮಾರುದ್ದ ದೂರ ಒಡ್ತಾರ.ಅಲ್ಲೊಬ್ಬ ಇಲ್ಲೊಬ್ಬ ಬದಲಾವಣೆ ಬಯಸುವ ನಾಗಪ್ಪುನಂತ ಪ್ರಜ್ಞಾವಂತರು ಬಂದ್ರೆ, ಈ ರಾಜಕೀಯ ಕುತಂತ್ರಕೆ ಬಲಿಯಾತರ. ಧ್ವನಿ ಇಲ್ಲದವರ ಪರವಾಗಿ ಸಮಾಜದಲ್ಲಿ ಧ್ವನಿ ಎತ್ತಲು ಬರುವ ಜನರಕಿಂತ ಹಣ, ಮೋಜು, ಮಸ್ತಿಗಾಗಿ ಬರೋರೆ ಅಧಿಕ.

    ಅದರಕಿಂತ್ತ ಮುಖ್ಯವಾಗಿ ರಾಜಕೀಯ ಜ್ಞಾನವೇ ಇಲ್ಲದವರೆ ಹೆಚ್ಚು ರಾಜಕಾರಣದಲ್ಲಿ. ಇದೆಲ್ಲವೂ ಗೊತ್ತಿದ್ದರೂ ನಾಗಪ್ಪ ಸಮಾಜದ ಬದಲಾವಣೆ ಬಯಸಿ ಬಂದು, ಗೌಡ, ಕುಲಕರ್ಣಿ,ಪೂಜಾರಿ, ತನ್ನವನೆಯಾದ ಭೀಮಣ್ಣನಂತ ವಂಚಕರು ಹಣಿದ ಜಾಲದಲ್ಲಿ ಸಿಲುಕಿ ಬಿಟ್ಟನು.

      ಅರಳೆ ಗಿಡದ ಕೆಳಗೆ ಇದ್ದ ಬುದ್ಧನ ಕಣ್ಣಲ್ಲೇ ಕಣ್ಣು ಇಟ್ಟು ನೋಡುತ್ತಾ ಕುಂತ್ತಿದ ನಾಗಪ್ಪ. ತನಗೆ ಅರಿವಿಲ್ಲದಂತೆ ಕಣ್ಣೀರಿನ ಹನಿ ಬುದ್ಧನ ಪಾದ ಸೇರುತ್ತಿದ್ದವು. ಎದುರು ಗಡೆ ಇದ್ದ ಬಾಬಾ ಸಾಹೇಬರ ಮೂರ್ತಿವು ಅದಕ್ಕೆ ಸಾಕ್ಷಿಯಾಗಿತ್ತು.

    ಕಲ್ಲು ಬಂಡಿಯೇ ಅಡ್ಡಾದರೇನೂ ? ಕೂಡಿ ಎತ್ತಿದ್ದರೆ ಚಕ್ರ ನಿಲ್ಲವುದೇನೂ???
ಎಂಬ ಹಾಡು ನಾಗಪ್ಪನ ಕಿವಿಗೆ ಬೀಳುತ್ತಿತ್ತು…ಅಲ್ಲಲ್ಲೆ ಇದ್ದ ಮಂದಿ ಗುಡ್ಡವೇ ಎದುರಾದರೂ ಮುಂದಿನ ಹಾದಿ ಸೇರಲೇಬೇಕೆಂಬ ನೋಟ ಹರಿಸುತ್ತಿದ್ದರು.


ಉತ್ತಮ ಎ. ದೊಡ್ಮನಿ

One thought on “ಉತ್ತಮ ಎ. ದೊಡ್ಮನಿಯವರ ಕಥೆ “ಕತಲ್ ರಾತ್ರಿ”

  1. ಕಥೆಯ ವಿಷಯಾಂಶ ತುಂಬಾ ಉತ್ತಮವಾಗಿ ಮೂಡಿ ಬಂದಿದೆ ಸರ್.

Leave a Reply

Back To Top