ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ ಕವಿತೆ
ಅತೃಪ್ತ ಆತ್ಮಗಳು..!
ತಮ್ಮೆದುರಿಗೆ ಬಂಗಾರದ ತಟ್ಟೆಯಿದ್ದರೂ
ಪಕ್ಕದವರ ಮುಂದಿನ ಬಾಳೆಯೆಲೆ ಮೇಲೆ
ಕಣ್ಣು ಹಾಕಿ ಕೈಹೊಸಕಿಕೊಳ್ಳುವರೇ ಹೆಚ್ಚು.!
ತಮ್ಮ ತಟ್ಟೆಯ ಮೃಷ್ಟಾನ್ನ ಭಕ್ಷ್ಯಗಳಿಗಿಂತ
ಪಕ್ಕದ ತಟ್ಟೆಯವನ ತುಂಡು ರೊಟ್ಟಿಗೇ
ಹಲ್ಲುಗಿಂಜುತ ಅಂಗಲಾಚುವ ಹುಚ್ಚು.!
ಅದು ರಾಶಿ ರಾಶಿ ಅಮೃತವೇ ಆಗಿರಲಿ
ಒಂದೆರಡು ಹನಿ ಅಂಬಲಿಯೇ ಆಗಿರಲಿ
ತಮ್ಮ ತಟ್ಟೆಗೇ ಹರಿಯಬೇಕೆನ್ನುವ ಕಿಚ್ಚು.!
ತಟ್ಟೆಯಲಿ ಎಲ್ಲವಿದ್ದರು ತೀರದ ಹಂಬಲಿಕೆ
ಎಷ್ಟಿದ್ದರೂ ಮತ್ತಷ್ಟಕೆ ನಿತ್ಯ ಹಪಹಪಿಕೆ
ಅಕ್ಕಪಕ್ಕ ನೋಡಿದಷ್ಟೂ ದಾಹ ಚಡಪಡಿಕೆ.!
ತಮ್ಮ ತಟ್ಟೆಯ ಗಮನಿಸುವುದಕಿಂತಲೂ
ಪರರ ತಟ್ಟೆ ನೋಡಿ ಜೊಲ್ಲು ಸುರಿಸುತ
ಹಾಗೇ ಉರಿದು ಹೋಗುವರು ನಖಶಿಖಾಂತ.!
ಇವರಿಗೆ ಹೊಟ್ಟೆ ತುಂಬಿಸಿಕೊಳ್ಳುವುದಕಿಂತ
ಸದಾ ತಟ್ಟೆ ತುಂಬಿಸಿಕೊಳ್ಳುವುದರಲ್ಲೇ ಆಸಕ್ತಿ
ತುಂಬಿ ತುಳುಕುತ್ತಿದ್ದರೂ ಆಗದೆಂದು ತೃಪ್ತಿ.!
ಇವರೆಂದೆಂದು ತಿಂದು ತೇಗುವುದಕ್ಕಿಂತಲೂ
ತಟ್ಟೆ ತುಂಬಿಸಿಕೊಳ್ಳುವುದರಲ್ಲೇ ಸದಾಸಕ್ತರು
ಸತ್ತು ಗೋರಿಯಲ್ಲು ಮಿಸುಕಾಡುವ ಅತೃಪ್ತರು.!
ಎ.ಎನ್.ರಮೇಶ್.ಗುಬ್ಬಿ.