ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ-
ತರಹಿ ಗಜಲ್
ತರಹಿ ಗಜಲ್
(ಶಮಾ ಅವರ ಮತ್ಲಾ ಕ್ಕೆ)
ಹೇಳಬೇಕಿದೆ ನಿನಗೆ ಕುದಿಯೆದ್ದ ಉಮ್ಮಳಗಳನು
ಕೇಳಬೇಕಿದೆ ನನಗೆ ನಿನ್ನೆದೆಯ ತಳಮಳಗಳನು
ಎದೆಗೂಡ ಸುಡುವ ಬೆಂಕಿಯ ಜ್ವಾಲೆಯಿದು
ಹೇಳಬೇಕಿದೆ ನಿನಗೆ ಭುಗಿಲೆದ್ದ ಭಾವದೀಪಗಳನು
ಎದೆ ಕೊರೆದ ನೋವ ಹೂವ ಸುಡುವ ಕಳವಳಗಳನು
ಹೇಳಬೇಕಿದೆ ನಿನಗೆ ನೀಡಿದ ಗಾಯಗಳ ಲೆಕ್ಕವನು
ಕಾಡುತ್ತಿರುವ ನಿನ್ನ ನೆನಪುಗಳ ಕಪ್ಪು ಕಾವಳವನು
ಹೇಳಬೇಕಿದೆ ಮೌನದಿ ಕೊಲುವ ನಿನ್ನ ಪ್ರೀತಿಯ ರೀತಿಯನು
ನನ್ನ ಎದೆಯಾಳದ ಕುದಿದು ಎಸರಾದ ಬೇಗುದಿಗಳನು
ಹೇಳಬೇಕಿದೆ ನಿನಗೆ ಬಿತ್ತಿದ ಭಾವ ತೆನೆಯಾದುದನು
ನೆನಪಿಸಿ ಆಣೆ ಭಾಷೆಯ ಕದಡಬೇಕಿದೆ ಎದೆಗೊಳವನು
ಹೇಳಬೇಕಿದೆ ಆಂತರ್ಯದ ಕೋಲಾಹಲ ಕಲರವಗಳನು
ಚಿತ್ತ ಭಿತ್ತಿಯ ಮೇಲೆ ಬಿತ್ತಿದ ಒಲವು ಕೆತ್ತಿದ ನಕ್ಷೆಯಿದು.
ಹೇಳಬೇಕಿದೆ ನೀ ಬರೆದು ಅಳಿಸಿ ಒರೆಸಿದ ಮಾತುಗಳನು
ನಿಟ್ಟುಸಿರು ಬಿಸಿ ಉಸುರಿದ ಪಿಸು ಮಾತುಗಳನು
ಹೇಳಬೇಕಿದೆ ಹೃದಯದಿ ಅಚ್ಚಾದ ಕಂಬನಿ ಕಥೆಗಳನು
ನಿದಿರೆ ಇರದ ಇರುಳ ಕನವರಿಕೆಗಳ ಕಹಿ ತಳುಕುಗಳನು
ಹೇಳಬೇಕಿದೆ ಕರಗಿದ ಕನಸುಗಳ ನೆನೆಗುದಿ ನರಳಾಟಗಳನು
ಜೀವಾವಧಿ ಶಿಕ್ಷೆಗಿಂತ ಗಲ್ಲಿಗೇರಿಸಿದ್ದರೇ ನೆಮ್ಮದಿಯಿತ್ತು
ಹೇಳಬೇಕಿದೆ ಕ್ಷಣಕ್ಷಣ ಕಣಕಣ ಸಾಯುವ ಯಾತನೆಗಳನು
ಶಶಿ ಬರೆದ ಬಿಸಿಯುಸಿರ ಬರೆಯೆಳೆದ ಹಸಿ ಗಾಯಗಳನು
ಇಂದುವಿನ ಕಾದೊಲುಮೆ ಕುಲುಮೆ ಕಿಡಿಹಿಡಿ ನೆನಪುಗಳನು
ಇಂದಿರಾ ಮೋಟೆಬೆನ್ನೂರ.