ನಾಗಜಯ ಗಂಗಾವತಿ-ನಾ ಹಿಂಗ

ಕಾವ್ಯ ಸಂಗಾತಿ

ನಾಗಜಯ ಗಂಗಾವತಿ-

ನಾ ಹಿಂಗ

ನನ್ನವ್ವ ಬಲು ಜಾಣೆ , ಅಪಾರಮತಿಯ ಪ್ರತಿಮಾ ರೂಪ.
ನಾ… ಖಬರಗೇಡಿ . ಕೊಬ್ರಿ ಕೊಡ್ಟಾಗ ಕಿಸೆ ತುಂಬಿದ ಭೂಪ.
ಅವ್ವ ಮಗ್ಗಿ ಕಲಿಸಿದ್ಳು , ಕಾಲಗಳ ವ್ಯತ್ಯಾಸ ತಿಳಿದ್ಳು…
ಅಕೀಗೆ ಇಂಗ್ಲಿಷ್ ಬರತಿರಲಿಲ್ಲ ; ನನಗದು ತಿಳಿದ್ರೂ ಒಗ್ಗಲಿಲ್ಲ.

ಅವ್ವನ ಕನಸು ನಾ ಶ್ಯಾಣ್ಸಾ ಆಗಬೇಕು.
ನನ್ನ ಶ್ಯಾಣ್ಯಾ ಅಂತ ಯಾರೂ ಒಪ್ಪಲಿಲ್ಲ ,
ನಾ ಊಟ ಬಿಡಲಿಲ್ಲ ; ಸಾಹಿತ್ಯದ ಓದು ಹೊಟ್ಟಿ ತುಂಬಿತ್ತು
ಕವನ ಬರಿತಿದ್ದೆ ; ಅಣ್ಣ ಬೈತಿದ್ರೂ ಕಾವ್ಯದನಂಟು ಕೊಬ್ಬಿತ್ತು.

ನನ್ನವ್ವ ಬಲು ಜಾಣೆ , ‘ಸಿಟ್ಟು ಹೊಟ್ಟಿ ತುಂಬದಿಲ್ಲೋ ಅಂತಿದ್ಳು’
ಅವರಿವ ಸಿಟ್ಟು , ಬದುಕಿನಲ್ಲಿ ಸೋತಾಗಿನ ಸಿಟ್ಟು ಪಚನಾಗಿತ್ತು
ನಾ ಖಬರಗೇಡಿ ಸಿಟ್ಟಿನ ಶಕ್ತಿಯಿಂದ್ಲೇ ಬುದ್ದಿ ಬೆಳಿಸಿಗಂಡಿದ್ದೆ
ಸಿಟ್ಟು ಸುಟ್ಡ ಸುಣ್ಣಾಗಿತ್ತು ತಂಪಿನ ನೀರಿಗೂ ಮತ್ತ ಸುಡತಿತ್ತು ,

ನನ್ನ ಸುಡೋ ಸಿಟ್ಟನ್ನೆ ತಾಂಬೂಲಕ್ಕ ವ್ಯಂಜನ ಮಾಡಿಕೊಂಡ್ರು
ಅಗದೀ ಚಂದ ಅಗೆದು ಪಿಚಕಾರಿಹಂಗ ನನ್ನಂಗಕ್ಕ ಬಳದ್ರು
ನಾ ಅವರ ಅರ್ಥಕ್ಕೆ ಒತ್ತು ಕೊಟ್ಟು ನನ್ನ ‘ ಅರ್ಥ’ ಕಳಕಂಡೆ
ನಾ ಶ್ಯಾಣ್ಯಾನಾದ್ರೂ ದುಡಿದದ್ದು , ಅಪ್ಪ ಕೊಟ್ಟದ್ದೂ ಉಳಿಲಿಲ್ಲ

ವಯಸ್ಸೇನು ಪೂರಾ ಕಳೆದಿಲ್ಲ , ಮಾಗಿನಿ ಅಂತ ಅನಸಕತೈತಿ
ಬೆನ್ನಿಗಂಟಿದ್ದು ಎರಡು ಸಲ ಗಂಟಿ ಹೊಡದೈತಿ.
ಅದು ಕಾಣಂಗಿಲ್ಲ , ಯಾರನ್ನೂ ಬಿಡಂಗಿಲ್ಲ ಖರೆ…
ಮಾಡದೈತಿ , ಬದುಕು ದೊಡ್ಡದ ಐತಿ ನಾ ಸೊಲಂಗಿಲ್ಲ


ನಾಗಜಯ ಗಂಗಾವತಿ

One thought on “ನಾಗಜಯ ಗಂಗಾವತಿ-ನಾ ಹಿಂಗ

Leave a Reply

Back To Top