ವಿಮಲಾರುಣ ಪಡ್ದoಬೈಲ್-ಜಗದೊಡೆಯ

ಕಾವ್ಯ ಸಂಗಾತಿ

ವಿಮಲಾರುಣ ಪಡ್ದoಬೈಲ್-

ಜಗದೊಡೆಯ

ಕಾಪಾಡು ಕಾಪಾಡು
ಜಗದೊಡೆಯ ನೀನು
ಜಗಕಾಯೋ ದೇವ
ಕಾಪಾಡು ನೀನು
ಸೃಷ್ಟಿಯ ಸೊಬಗಿನಲಿ
ನಿನ್ನಿರವ ನಾ ಕಂಡೆ
ಕರ ಮುಗಿಯೆ ಪೊರೆಯುವೆಯೊ
ಕಾಪಾಡು ಶ್ರೀಕೃಷ್ಣ

ವೀಣೆಯಲಿ ವಾಣಿಯನು
ನುಡಿಸುವವನು ನೀನೇ
ಮನುಜನ ಮನದಲಿ
ಕಲ್ಮಶವ ತೊಳೆದು
ಹಸನಾದ ಬದುಕಿಗೆ
ನಿನ್ನ ದನಿಯೇ ಬಿಂದು

ನ್ಯಾಯದ ಬಾಗಿಲಿಗೆ
ಹಸಿರ ತೋರಣವ ಕಟ್ಟಿ
ಅರಿಶಿಣ ಕುಂಕುಮ ಗಂಧ ಚಂದನದಿ
ತಾಳೆ ಹೊಂಬಾಳೆಯ
ಸಿರಿಸಂಪದದಿ ಶೃಂಗರಿಸಿ
ನ್ಯಾಯಕೆ ನಿನ್ನದೇ ನಾಮವ ಇಟ್ಟೆ

ಪ್ರೀತಿ ವಾತ್ಸಲ್ಯದ ಹೃದಯ
ಜಗದೊಳಗೆ ತೆರೆದಿಟ್ಟೆ
ಕುದಿವ ಸೇಡು ದ್ವೇಷದ ವಿಷವ
ಮನದೊಳಗೆ ಅರಗಿಸಿದೆ
ನಿನ್ನೊಳಗಿನ ಸೃಷ್ಟಿಯ
ಬಾಯಲ್ಲಿ ಅಡಗಿಸಿ
ಕಣ್ಣಾದೆ ನೀನು ಈ ಜಗಕೆ

ನಂದ ಯಶೋದಾ ದೇವಕಿ ಸುತನೆ
ರಾಧಾ ರುಕ್ಮಿಣಿ ಪ್ರಿಯನೆ
ಪಾಂಡವರ ಮಾರ್ಗ ಜ್ಯೋತಿಯೇ
ಸರ್ವರ ಪಾಲಿನ ಕರುಣಾಸಾಗರನೇ
ಶರಣು ಶರಣೆನ್ನುವೆ
ನೀ ತೋರೋ
ಒಲವ ಮನದ ಅಸ್ಮಿತೆಗೆ

ಅರಿಯಲಾಗದು ನಿನ್ನ ಮನವ
ಒಳಿತಿಗೆ ನಿನ್ನ ಕೈಂಕರ್ಯ ಕೂಡಿಹುದು
ನೀ ಎಣಿಸಿದಂತೆ ನಡೆವುದು
ಕಾಲಗರ್ಭದೊಳಗೆ
ಶಾಂತಿಯ ನೀ ನೀಡು ತಂದೆ
ಜಪಿಸುವೆ ನಿನ್ನ ನಾಮ ಸ್ಮರಣೆ
ಅನುದಿನ ಚೈತನ್ಯದಿ
ನೀ ನಡೆಸು ಜಗವ

———————————————–

                - ವಿಮಲಾರುಣ ಪಡ್ದoಬೈಲ್

Leave a Reply

Back To Top