ಗಂಗಾಧರ್ ಬಿ.ಎಲ್ ನಿಟ್ಟೂರ್ ಕೊನೆಗೂ ಸಿಕ್ಕ ಸದ್ಗುರು

ವಿಶೇಷ ಲೇಖನ

ಗಂಗಾಧರ್ ಬಿ.ಎಲ್ ನಿಟ್ಟೂರ್

ಕೊನೆಗೂ ಸಿಕ್ಕ ಸದ್ಗುರು

ಶ್ರೀಯುತ ಕುಮಾರ್ ಸ್ವಾಮಿ ಹಿರೇಮಠದ್, ಮುಖ್ಯೋಪಾಧ್ಯಾಯರು, ಹಗರಿಬೊಮ್ಮನಹಳ್ಳಿ

ಬರೆಯುವ ಮುನ್ನ :

         ಅದೊಂದು ರೋಚಕ ಕ್ಷಣ … ಜೀವನದ ಮಹೋನ್ನತ ಘಳಿಗೆ … ಹಲವು ವರುಷಗಳ ಹಂಬಲಕ್ಕೆ ಅಂದು ಪ್ರತಿಫಲ ದೊರಕಿದ ಸಂತಸದ ದಿನವದು … ಆ ದಿವ್ಯ ಚೇತನದ ನೆಲೆ ಪತ್ತೆಯಾದ ಸಂಭ್ರಮದ ನನ್ನ ವೈಯಕ್ತಿಕ ಬದುಕಿನ ಅವಿಸ್ಮರಣೀಯ ಗಳಿಗೆ ಅದು.

ಆ ದಿನಗಳ ಮೆಲುಕು  :

     1992 – 93 ರ ಮಾತು. ನಾವಾಗ ಖಾಸಗಿ ಪ್ರೌಢಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದಾಗಿನ ಕಥೆಯಿದು. ವಿಜ್ಞಾನ ವಿಷಯ ಬೋಧಿಸಲು ಹೊಸ ಶಿಕ್ಷಕರೊಬ್ಬರ ಆಗಮನವಾಯಿತು. ಮೊದಲೇ ಹಳ್ಳಿ ಶಾಲೆ. ಹಳ್ಳಿ ಹುಡುಗರಾಗಿದ್ದ ನಮಗೆ ಅವರ ಮಾತು – ಕತೆ, ರೀತಿ – ನೀತಿ & ಎಲ್ಲಕ್ಕೂ ಮಿಗಿಲಾಗಿ ಅವರ ಸ್ಟೈಲ್ ಅತ್ಯಾಕರ್ಷಿಸಿತು. ಮೊದಲ ನೋಟದಲ್ಲೇ ವಿದ್ಯಾರ್ಥಿಗಳ ಮನ ಗೆದ್ದ ಅವರು, ಅಂದಿನಿಂದಲೇ ನಮ್ಮ ಪಾಲಿಗೆ ಸ್ಟೂಡೆಂಟ್ ಐಕಾನ್ ಆದರು.

 ಅವರು ಪಾಠ ಹೇಳುತ್ತಿದ್ದ ರೀತಿ, ಬೋಧಿಸುವ ಪರಿ, ಸದಾ ಹಸನ್ಮುಖತೆಯಿಂದಲೇ ಮನವರಿಕೆ ಮಾಡಿಸುತ್ತಿದ್ದ ಅವರ ತಾಳ್ಮೆ, ತಪ್ಪು ಮಾಡಿದಾಗ ಹೊಡೆಯದೆ – ಬೈಯದೇ, ಯಾರೊಬ್ಬರ ಮನಸ್ಸಿಗೂ ನೋವಾಗದಂತೆ ನಯವಾಗಿ ತಿದ್ದಿ – ತೀಡುತ್ತಿದ್ದ ತಾಯ್ಮಮತೆಯ ಅವರ ಅಂತಃಕರಣ, ಬೋರ್ ಎನಿಸಿದಾಗ ಹಾಡು ಹೇಳಿ ರಂಜಿಸಿ ಪಾಠ ಮುಂದುವರೆಸುತ್ತಿದ್ದ ಕ್ರಮ … ಥೇಟ್ ರಾಜ್ ಕುಮಾರ್ ವಾಯ್ಸಲ್ಲೂ ಒಮ್ಮೊಮ್ಮೆ ಮಾತಾಡಿ, ಹಾಡ್ಹೇಳಿ, ಜೋಕ್ಸೇಳಿ ನಕ್ಕು ನಗಿಸಿ ಬೋಧಿಸುತ್ತಿದ್ದ ಅವರ ಬಹುಮುಖಿ ಪ್ರತಿಭೆ,  ಕ್ರೀಡೆ – ಆಟೋಟದಲ್ಲೂ ವಿದ್ಯಾರ್ಥಿಗಳೊಂದಿಗೆ ತಾವೂ ಭಾಗವಹಿಸಿ ಹುರಿದುಂಬಿಸುತ್ತಿದ್ದ ಉತ್ಸಾಹ – ಉತ್ಸುಕತೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಾರ್ಷಿಕೋತ್ಸವ ಸಂದರ್ಭದಲ್ಲಿ ತಾವೇ ನೃತ್ಯ ನಿರ್ದೇಶನ ಮಾಡಿ ವಿದ್ಯಾರ್ಥಿಗಳೊಂದಿಗೆ ವೇದಿಕೆಯಲ್ಲಿ ತಾವೂ ಕೂಡ ಹೆಜ್ಜೆ ಹಾಕಿ ಹುರಿದುಂಬಿಸಿದ ಸ್ಪೂರ್ತಿ … ಹೀಗೆ ಒಂದೇ ಎರಡೇ ಎಲ್ಲವೂ ನಮ್ಮ ಪಾಲಿಗೆ ಅದ್ಭುತ – ಅಮೋಘ.

 ಅವರ ಅಭೂತಪೂರ್ವ – ಅಚ್ಛರಿದಾಯಕವೆನಿಸುವ ಕ್ರಿಯಾ ಶೀಲತೆ, ಸೃಜನಶೀಲತೆ, ಪ್ರತಿಭಾ ಸಂಪನ್ನತೆ,  ಹೃದಯವಂತಿಕೆ, ಕಳಕಳಿ – ಕಾಳಜಿ, ಕಾಯಕ ನಿಷ್ಠೆ ಸೇರಿದಂತೆ ಅವರ ಇಡೀ ವ್ಯಕ್ತಿತ್ವ ಎಂಥಾ ವಿದ್ಯಾರ್ಥಿಗಾದರೂ ಎಷ್ಟೇ ವರುಷಗಳಾದರೂ ಮರೆಯಲಾಗದಂತಹ ಛಾಪು ಮೂಡಿಸುವಂಥದ್ದು.

  ಹಾಗಾಗಿಯೇ ನಾವು ಅವರನ್ನ ಸದಾ ಸ್ಮರಿಸುತ್ತಲೇ ಇದ್ದೆವು.  ನಮ್ಮ  SSLC ಪರೀಕ್ಷೆ ಮುಗಿಯುತ್ತಿದ್ದಂತೆಯೇ  ಅವರು ಆ ಶಾಲೆಯಿಂದ ನಿರ್ಗಮಿಸಿ ಬಿಟ್ಟಿದ್ದರು. ಎಲ್ಲಿಗೆ ಹೋದರು, ಯಾವ ಊರಿನಲ್ಲಿ ಜಾಬ್ ಮಾಡುತ್ತಿದ್ದಾರೆ ಎಂಬ ಕುರಿತು ಆ ಶಾಲೆಯ ಸಿಬ್ಬಂದಿಯವರಿಗಾಗಲಿ ಅಥವಾ ಯಾವೊಬ್ಬ ವಿದ್ಯಾರ್ಥಿಗಾಗಲಿ ಮಾಹಿತಿ ಇರಲಿ ಸುಳಿವು ಸಹ ಸಿಗಲಿಲ್ಲ . ಫೋನ್ ಮೂಲಕವಾದರೂ ಪತ್ತೆ ಹಚ್ಚೋಣವೆಂದರೆ ನಮ್ಮದು ಆಗ ಫೋನೇ ಇಲ್ಲದ ಕಾಲ, ನಮ್ಮೂರಲ್ಲಿ ಆಗ ಯಾರ ಮನೆಯಲ್ಲೂ ಲ್ಯಾಂಡ್ ಲೈನ್ ಕೂಡ ಇರಲಿಲ್ಲ . ಅಂತೆಯೇ ನಮ್ಮ ಆ ಗುರುಗಳ ಬಳಿ ಕೂಡ .. ಹಾಗಾಗಿ Long Period  Communication Gap ಆಯ್ತು …  

   ಹೈಸ್ಕೂಲ್ ಮತ್ತು M.Phil ವಿದ್ಯಾಭ್ಯಾಸದ ನಡುವಣ ಪಯಣದಲ್ಲಿ ಹತ್ತು ಹಲವು ಮೇರು ಶಿಕ್ಷಕರ ದಿಗ್ದರ್ಶನವೂ ಆಯ್ತು. ಆದರೂ, ಸುಮಾರು 25 ವರ್ಷಗಳೇ ಕಳೆದರೂ ಅವರನ್ನು ಕಾಣುವ ತವಕ ಮಾತ್ರ ಮನದಲ್ಲಿ ಮನೆ ಮಾಡಿತ್ತು….

ಮರೆಯಲಾಗದ ದಿನ :

   ಆ ತವಕಕ್ಕೆ ಪ್ರತಿಯಾಗಿ ಫಲ ಎಂಬಂತೆ ಆ ಸಂಕ್ರಾಂತಿಯ ದಿನದಂದು  ಅವರ ಇರುವಿಕೆಯ ಮೂಲದ ಮಾಹಿತಿ ಲಭಿಸಿತ್ತು. ದಿನಾಂಕ : 13/01/2018 ರಂದು  ಸಂಕ್ರಾಂತಿಗೆಂದು ಹಂಪಿ – ಹೊಸಪೇಟೆಯ ಕಡೆ ಸ್ನೇಹಿತರೊಂದಿಗೆ ಪ್ರಯಾಣ ಬೆಳೆಸಿದ್ದೆ. 2 ದಿನ ಅಲ್ಲಿಯೇ ತಂಗಿದ್ದ ನಾವು 15/01/2018 ರಂದು ವಾಪಸ್ ಊರಿಗೆ ಬರುತ್ತಿದ್ದಾಗ ನಮ್ಮ ಮಿತ್ರರೊಬ್ಬರ ಬಳಿ ಆಕಸ್ಮಾತ್ ಆಗಿ ನಮ್ಮ ಆ ಗುರುವಿನ ಬಗ್ಗೆ ಪ್ರಸ್ತಾಪಿಸಿದೆ. ಅದಕ್ಕವರು – ಅಯ್ಯೋ ನೀವು ಇಷ್ಟು ದಿನ ಹುಡುಕುತಿದ್ದ ನಿಮ್ಮ ಗುರುಗಳು ಅಲ್ಲೇ ಹಗರಿಬೊಮ್ಮನಹಳ್ಳಿಯ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಇದಾರಂತೆ, ಅಷ್ಟು ಮಾತ್ರ ನನಗೆ ಗೊತ್ತು. ಆದರೆ ಪಕ್ಕಾ ಅಡ್ರೆಸ್  ಅಥವಾ ಫೋನ್ ನಂಬರ್ ಆಗಲಿ ನಂಗೊತ್ತಿಲ್ಲ … ಆನ್ ದಿ ವೇ ಬರ್ತಾ ಪತ್ತೆ ಹಚ್ಕೊಂಡು ಬನ್ನಿ ಎಂದರು….

    ಅದೇ ಜಾಡು ಹಿಡಿದು ಅಲ್ಲಿಗೆ ಹೋದ್ವಿ . ಕೆಲವರನ್ನು ಕೇಳಲಾಗಿ ಗೊತ್ತಿಲ್ಲ ಎಂಬ ಉತ್ತರ. ಇನ್ನೇನು ನಿರಾಸೆಯಿಂದ ಹೊರಡುವ ಹೊತ್ತಿಗೆ ಕೊನೆಯ ಪ್ರಯತ್ನವೆಂಬಂತೆ ಒಂದು ಪ್ರಾವಿಜನಲ್ ಸ್ಟೋರ್ನಲ್ಲಿ ವಿಚಾರಿಸಿದಾಗ – ”  1 ವರ್ಷದ ಹಿಂದೆ ಅವರು ಇಲ್ಲೇ ಪಕ್ಕದ ಕೇರಿಯಲ್ಲಿ ಇದ್ರು. ಈಗ ಎಲ್ಲಿದ್ದಾರೋ ಗೊತ್ತಿಲ್ಲ ” ಅಂದು ಬಿಟ್ಟಾಗ ನಿಜಕ್ಕೂ  ಮತ್ತೇ ಬೇಸರ…. ತುಂಬಾ ಹೊತ್ತು  ಮೌನವಾಗಿ ಅಲ್ಲೇ ನಿಂತು ಬಿಟ್ಟೆವು.

    ಸ್ವಲ್ಪ ಹೊತ್ತಿನ ಬಳಿಕ ಅವರ ಫೋನ್ ನಂಬರ್ ಏನಾದ್ರೂ ಇದ್ರೆ ಕೊಡ್ತಿರಾ ಸರ್ ಎಂದೆವು. ಇಲ್ಲ ಎಂದ ಅವರು ಕೊಂಚ ಬಳಿಕ,,, ಮ್ .. ಅವರ ಅಳಿಯನ ನಂಬರ್ ಇದೆ ಕೊಡ್ತಿನಿ, ಬೇಕಾದ್ರೆ ಅವರ ಬಳಿ ವಿಚಾರಿಸಿ ನೋಡಿ ಎಂದರು.

    ನಿಟ್ಟುಸಿರು ಬಿಟ್ಟ ನಾವು ಕೂಡಲೇ ನಂಬರ್ ಪಡೆದು ಫೋನಾಯಿಸಿದರೆ ನಮ್ಮ ಗುರುಗಳೂ ಸಹ ಅವರೊಟ್ಟಿಗೆಯೇ ಇದ್ದರು … ಸಂತಸಕ್ಕೆ ಪಾರವೇ ಇರಲಿಲ್ಲ. ಪರಿಚಯ ಹೇಳಿಕೊಂಡೆ …ಒಂದಷ್ಟು ಕುಶಲೋಪರಿಯೂ ಆಯಿತು.. “ಎಂಥಾ ಕೆಲಸ ಆಯ್ತಲ್ಲ, ನಾವೀಗ ಸಂಕ್ರಾಂತಿ ಪ್ರಯುಕ್ತ ಹೊರ ಸಂಚಾರ ಬಂದಿದ್ದೇವೆ . ವಾಸ ಹಗರಿಬೊಮ್ಮನಹಳ್ಳಿಯಲ್ಲೇ. ಇನ್ನೊಮ್ಮೆ ಈ ಕಡೆ ಬಂದಾಗ ಮನೆಗೆ ಬಾ. ಖುದ್ದು ಭೇಟಿಯಾಗೋಣ ಗಂಗಾಧರ್.” ಎಂದ್ಹೇಳಿ ತಮ್ಮ ಮೊಬೈಲ್ ನಂಬರ್ ಕೊಟ್ಟು ಅಡ್ರೆಸ್ ಹೇಳಿ ಫೋನ್ ಮೂಲಕವೇ ಬೀಳ್ಕೊಟ್ಟರು…., ಮುಖಭೇಟಿಯಾಗದಿದ್ದರೂ ಮತ್ತೊಮ್ಮೆ ಸಿಗುವ ಭರವಸೆಯೊಂದಿಗೆ ಅಲ್ಲಿಂದ ಸೀದಾ ಊರಿಗೆ ತೆರಳಿದೆವು …

  ಈಗ ನೆನಪಾದಲೆಲ್ಲಾ ಫೋನ್ ಮಾಡುತ್ತೇವೆ. ಆ ದಾರಿಯಲ್ಲಿ ಪ್ರಯಾಣಿಸಿದಾಗಲೆಲ್ಲಾ ಭೇಟಿಯಾಗಿ   ಬರುತ್ತೇವೆ .

    ನಮ್ಮ ಮನೋ ಮಂದಿರದ ಆ ಗುರುಗಳ ಹೆಸರು ” ಶ್ರೀಯುತ ಕುಮಾರ್ ಸ್ವಾಮಿ ಹಿರೇಮಠದ್ “

  ಕೊನೆಯ ಮಾತು :

  ತಿಂಗಳ ಸಂಬಳ ಸಿಕ್ಕರೆ ಸಾಕು ನಮ್ಮ ಬದುಕಿನ ಬಂಡಿ ಸಾಗೀತು ಎಂಬ ಧಾವಂತ ಮತ್ತು ಅನಿವಾರ್ಯತೆಯ  ಉದ್ಯೋಗಕ್ಕೆ ಜೋತುಬಿದ್ದು , ಹೊಟ್ಟೆ – ಬಟ್ಟೆಗಾಗಿ ಶಿಕ್ಷಕ ವೃತ್ತಿ ಆಯ್ದುಕೊಂಡು ಗೊಣಗುತ್ತಲೇ ಕಾಲ ತಳ್ಳಿ ನಿವೃತ್ತರಾಗುವ ಬಹುತೇಕರ ನಡುವೆ, ವೃತ್ತಿ ಪ್ರೇಮವೊಂದನ್ನೇ ಗುರಿಯಾಗಿಸಿಕೊಂಡು ಬೋಧಿಸುವ ಇಂತಹ ಶಿಕ್ಷಕರ ಸಂಖ್ಯೆ & ಸೇವೆ ವಿರಳವೇ ಸರಿ …    

ತಸ್ಮೈ ಶ್ರೀ ಗುರುವೇ ನಮಃ …


ಗಂಗಾಧರ್ ಬಿ.ಎಲ್ ನಿಟ್ಟೂರ್

Leave a Reply

Back To Top