‘ಕೋಗಿಲೆ’ ಎಂಬ ಬಿರುದನ್ನಿತ್ತ ಪ್ರೇಮ ಟೀಚರ್ ಪ್ರಮೀಳಾ ರಾಜ್ ರವರ ಸಿಹಿನೆನಪು

ವಿಶೇಷ ಲೇಖನ

ಪ್ರಮೀಳಾ ರಾಜ್ ರವರ ಸಿಹಿನೆನಪು

‘ಕೋಗಿಲೆ’ ಎಂಬ ಬಿರುದನ್ನಿತ್ತ

ಪ್ರೇಮ ಟೀಚರ್

ನಾನು ಓದಿದ್ದು ಬಂಟ್ವಾಳ ತಾಲೂಕಿನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡುಪಡುಕೋಡಿಯಲ್ಲಿ. ಪ್ರತೀ ಶನಿವಾರ ಬಂದಾಗ ನಮ್ಮ ಶಾಲೆಯಲ್ಲಿ ಹಿಂದೂ ಮುಸ್ಲಿಂ, ಕ್ರೈಸ್ತ ರೆನದೆ ಶಾಲೆಯ ವೆರಾಂಡದಲ್ಲಿ ಕುಳಿತು ಭಜನೆ ಮಾಡುತ್ತಿದ್ದೆವು. ಆ ಸಂದರ್ಭದಲ್ಲಿ ನಮ್ ಕೋಗಿಲೆ ಎಲ್ಲಿ? ಅಂತ ಹುಡುಕಿ ಬರ್ತಾ ಇದ್ದವರು ನನ್ನ ಪ್ರೀತಿಯ ಶಿಕ್ಷಕಿ ಪ್ರೇಮಾ ಟೀಚರ್!!
ಅಂದು ಅವರು ಕರೆಯುತಿದ್ದ ಕೋಗಿಲೆ ಎಂಬ ಹೆಸರಿನಲ್ಲೇ ನಾನಿಂದು ಗುರುತಿಸಲ್ಪಡುತ್ತಿರುವುದು ನನಗೆ ತುಂಬಾ ಹೆಮ್ಮೆ ಅನಿಸುತ್ತದೆ.
ಪ್ರೇಮ ಟೀಚರ್ ಗಣಿತ ಪಾಠ ಮಾಡ್ತಾ ಇದ್ರು. ಯಾವಾಗ್ಲೂ ಮುಖದಲ್ಲಿ ಒಂದು ಚಂದದ ನಗು ಇರುತಿದ್ದ ನನ್ನ ಟೀಚರ್, ಗಣಿತ ಪಾಠ ಮಾಡುವಾಗ ತುಂಬಾ ಗಂಭೀರವಾಗಿ ಇರುತಿದ್ರು. ಆದ್ರೆ ತುಂಬಾ ಸ್ನೇಹಾಮಯಿ,ಮಮತಾಮಯಿ, ಲೆಕ್ಕ ಪಕ್ಕವಾಗಿ ನಮ್ಮ ತಲೆ ಹೊಕ್ಕುವವರೆಗೂ ಅವರಿಗೆ ಸಮಾಧಾನ ಇಲ್ಲ. ಗಣಿತ ಅಂದ್ರೆ ಮಾರು ದೂರ ಹೋಗುತ್ತಿದ್ದ ನನಗೆ ಗಣಿತದಲ್ಲಿನ ಮೋಜನ್ನು ಹೇಳಿಕೊಟ್ಟವರು ಇವರು. ತುಂಬಾ ತಾಳ್ಮೆಯಿಂದ ಗಣಿತವನ್ನು ಕಲಿಸುತಿದ್ದ ಅವರ ಬೋಧನೆಯು ನನಗೆ ಮಾದರಿ.ಇವತ್ತು ನಾನು ಓರ್ವ ಶಿಕ್ಷಕಿಯಾಗಿ ಗಣಿತ ವಿಷಯವನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದೇನೆಂದರೆ ಅದಕ್ಕೆ ಕಾರಣ ನನ್ನ ಪ್ರೇಮ ಟೀಚರ್.
ಕಲಿಕೆಯ ವಿಷಯದ ಜೊತೆಗೆ, ಜೀವನದ ಮೌಲ್ಯಗಳನ್ನು ನನ್ನೆದೆಯಲ್ಲಿ ಬಿತ್ತಿ, ಗುಡಿಸಲೊಳಗೆ ಜ್ಞಾನದ ಹಣತೆ ಹಚ್ಚುವಂತೆ ಮಾಡಿ, ನಾನೂ ಒಬ್ಬ ಶಿಕ್ಷಕಿ ಆಗಬೇಕು ಎಂಬ ಆಸೆ ಮೊಳೆಯುವಂತೆ ಮಾಡಿದ ನನ್ನ ಪ್ರೀತಿಯ ಗುರುಗಳಿಗೆ ನಾನೆಷ್ಟು ಧನ್ಯವಾದ ತಿಳಿಸಿದರೂ ಅದು ಕಡಿಮೆಯೇ.
. ಕಾಲ ಚಕ್ರ ತಿರುಗುತ್ತಾ ಬಹುದೂರ ಸಾಗಿದರೂ ಜೀವನದಲ್ಲಿ ನಾನಿಡುವ ಪ್ರತೀ ಹೆಜ್ಜೆಯಲ್ಲೂ ನನ್ನ ಶಿಕ್ಷಕಿಯ ನೆನಪಿನ ಛಾಯೆ ಇದೆ. ತಪ್ಪು ಮಾಡಿದಾಗ ನನಗರಿವಿಲ್ಲದೆ ನನ್ನ ಶಿಕ್ಷಕರ ಮಾತುಗಳು ಕಿವಿಯಲ್ಲಿ ಮಾರ್ದನಿಸಿ ಸರಿ ದಾರಿಯಲ್ಲಿ ನಡೆಯಲು ಶಕ್ತಿ ತುಂಬುತ್ತವೆ, ಮಾರ್ಗದರ್ಶಿಸುತ್ತವೆ.
. ನಾನಿಂದು ಎಷ್ಟು ಎತ್ತರಕ್ಕೆ ಬೆಳೆದರೂ, ನನ್ನ ಶಿರಗಳು ಸದಾ ಗುರುಗಳ ಚರಣಕ್ಕೆ ಬಾಗಿರುತ್ತವೆ.ವಿದ್ಯೆ ಕಲಿತ ಶಾಲೆಗೆ, ಕಲಿಸಿದ ಗುರುಗಳಿಗೆ ಸದಾ ಈ ಜೀವ ಋಣಿಯಾಗಿರುತ್ತದೆ.ಶಿಕ್ಷಕರ ದಿನದ ಸಂಭ್ರಮದ ಕ್ಷಣದಲ್ಲಿ
ಮಗದೊಮ್ಮೆ ನನ್ನ ಬಾಲ್ಯ ಹಾಗೂ ಬಾಲ್ಯದ ಗುರುಗಳು ಪ್ರೇಮ ಟೀಚರ್ ಅವರ ಜೊತೆಗಿನ ನೆನಪಿನ ಯಾನ ಖುಷಿ ನೀಡಿದೆ.


ಹ್ಯಾಪಿ ಟೀಚರ್ಸ್ ಡೇ ಮೈ ಡಿಯರ್ ಟೀಚರ್.!!


ಪ್ರಮೀಳಾ ರಾಜ್

Leave a Reply

Back To Top