ಹಂಸಪ್ರಿಯ ಕವಿದ ಮೋಡ ಕರಗಿ

ಕಾವ್ಯಸಂಗಾತಿ

ಹಂಸಪ್ರಿಯ

ಕವಿದ ಮೋಡ ಕರಗಿ

ಉದಯರವಿ ದಯದಿಂದ ಲೋಕಬೆಳಗಿದಂತೆ
ಪದ – ಪದಗಳ ಬೆಸುಗೆಹಾಕಿ ಭಾವೈಕ್ಯಗೊಳಿಸಿ
ಅಜ್ಞಾನದ ಕತ್ತಲೆ ಕಳೆದು
ಸುಜ್ಞಾನದ ಕಿರಣಗಳ ಬೀರಿ
ಬಾಳದೀವಿಗೆ ಬೆಳಗುವ ಕವಿ
ರವಿಕಾಣ್ಕೆಗಿಂತ ಮಿಗಿಲು ಕವಿಕಾಣ್ಕೆ…./1/

ಮಧುರ ಸ್ಮೃತಿಗೆ ಶ್ರುತಿಯ ನೀಡಿ
ಸಹೃದಯ ಮನಕೆ ಮುದವ ನೀಡಿ
ಕಲ್ಪನೆಗಳ ವಿಕಲ್ಪವಾಗಿಸಿ
ಮಥಿಸಿ – ಮಥಿಸಿ ಭಾವ ಸೆಲೆಯ
ಸೃಜಿಸುವ ಕವಿ ಸತ್ಯನೆಲೆಯ…./2/

ಚಿಕ್ಕ ಅಕ್ಷಿಯಲ್ಲಿ ನಕ್ಷತ್ರಲೋಕ
ಚೊಕ್ಕವಾಗಿ ಸೆರೆಯಾದಂತೆ, ಕಾವ್ಯದಲ್ಲಿ
ಅಡಗಿಸುವ ಕವಿ ಕಲ್ಯಾಣಲೋಕ.
ಅಕ್ಷರಗಳಲಿ ಈಶ್ವರನ ತೋರುವ ಕವಿ
ಶಾಶ್ವತ ನೆಲೆಯಾಗುವ ಕಾವ್ಯದಲಿ…./3/

ದೇವ ಸೃಜಿಸಿದ ವಿಷಮ ಲೋಕ.
ಸೃಜಿಸುವ ಕವಿ ಸಮಲೋಕ.
ವಿಕಾರಭಾವಗಳಿಗೆ ಆಕಾರಕೊಟ್ಟು
ಸಾಕಾರಗೊಳಿಸುವ ಕವಿ
ಕರ್ತಾರನ ಕಮ್ಮಟದ ರುವಾರಿ…./4/.


      ಹಂಸಪ್ರಿಯ

Leave a Reply

Back To Top