ಕಾವ್ಯ ಸಂಗಾತಿ
ಶರತ್ ಹೆಚ್ ಎಸ್ ಸಂತೇಬೆನ್ನೂರು ಕವಿತೆ
ಎದೆ ಕಡಲ ಮುತ್ತು
ಬರೀ “ಮಿಸ್ ಯೂ”
ಯೆಂಬೆರಡು ಪದಗಳು
ನೀ ಜೊತೆಯಿರದ ವೇದನೆಯ ಹೇಳಿಬಿಡುತ್ತವ?!
ಅದೊಂದು ಅಂದಾಜಾಗದ
ಅತ್ಮ ಇರಿವ ನೋವು…
ತೀರ ಕೆರೆಯನ್ನೆ ಕಾಣದ ನಾ
ಕಡಲಾಳವನು ಹೊಕ್ಕು
ಹೆಕ್ಕಿ ತಂದ ಅಪರೂಪದ
“ಮುತ್ತು” ನೀನು….!
ಇಡೀ ಪ್ರೇಮ ಶರಧಿಯನೆ
ಎದೆಯಾಳದಿ ಅಡಗಿಸಿ,
ನಿನ್ನ ಕಡಲತಡಿಗೆ
ತಲೆಯಿಟ್ಟ ನನ್ನ…
ನಮ್ಮಿಬ್ಬರ ಕನಸಿನ ಉಸಿರಲೆ
ಸವರುತ್ತಿದ್ದೆ.
ನಿನ್ನ ಬಿಸಿ ಮುತ್ತುಗಳಿಗೆ ಈಗೀಗ
ನನ್ನ ಹುಸಿ ನಿದ್ದೆ…
ಹೀಗೆ..ಒಲವ ಅಲೆಗಳ ಮೇಲೆ
ಸೇರಲೆಂದೇ ಈಜುತ್ತಿದ್ದವರ,
ಏನೋ ಅವಸರಕ್ಕೆ ಬಿದ್ದವರಂತೆ
ದೂರಿ, ದೂರಾಗಿಸಿದವರು..
ಈಗ, ಇಡೀ ಕಡಲ ಒಡಲನೇ
ಹುಡುಕಿದ್ದಾರೆ,
ಅದೆಷ್ಟೊ ಚಿಪ್ಪುಗಳ ತಡಕಿ,ಬೆದಕಿ.
ಊಹುಂ..
ನೀನಿರಲಿ.. ನಿನ್ನಂತವರು ಸಿಕ್ಕಿಲ್ಲ
ಸಿಗುವುದೂ ಇಲ್ಲ ಬಿಡು.
ಅವರಿಗೆ ನಿನ್ನ ಸಂತಾಪವಿರಲಿ!
ಎದೆಯಲ್ಲಿ ಹುಟ್ಟುವ
ನಮ್ಮಿಬರ ನೆನಪುಗಳ ಸುಳಿಗಾಳಿ..
ಕಣ್ಗಡಲ ನುಗ್ಗಿ,
ಸಂಕಟದ ಸುನಾಮಿಯೆಬ್ಬಿಸಿ,
ಕಂಬನಿಯ ಅಲೆಗಳು
ಕೆನ್ನೆಗಳ ಕಿನಾರೆಯಾಚೆ ಚಿಮ್ಮಿವೆ.
ಮತ್ತೀಗಲೂ… ನಿನ್ನ ಸೇರಲು
ನಾ ನದಿಯಾಗ ಬೇಕೆಂದಿದ್ದೆ,
ಆದರೆ ನೀನಿಗ..
ಸಪ್ತ ಸಾಗರಗಳನೂ ದಾಟಿ
ಸುಪ್ತ ಸಾಗರದೀ ಲೀನ…..ಏನು ಮಾಡಲಿ?
ಶರತ್ ಹೆಚ್ ಎಸ್ ಸಂತೇಬೆನ್ನೂರು
Superb