ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ
ನೀನೊಂದು ಕಲ್ಲಾಗಿದ್ದರೆ ಎಷ್ಟೊ ಚೆನ್ನಾಗಿತ್ತು
ನೀನೊಂದು ಕಲ್ಲಾಗಿದ್ದರೆ ಎಷ್ಟೊ ಚೆನ್ನಾಗಿತ್ತು
ನಿನ್ನಂಥ ವಿಲಾಸಿ ಗಂಡಸನಿಗೆ ಹೆಂಡತಿ-ಮಕ್ಕಳು ಏಕೆ ಬೇಕಿತ್ತು ?
ಮಹಿಳೆಯ ದುಡಿತದ ಬೆವರಿನಿಂದಲೇ ಬರುವ ಹಣದಿಂದ
ಕುಡಿತದ ದಾಸನಾಗಿ ಮೈಮರೆಯುವ
ನೀನು ಏನು ಮಹಾ ಸಾಧಿಸಿದ್ದು ?
ಬೆಲೆಕಟ್ಟಲಾಗದ ಹೆಣ್ಣಿನ ಸೂಕ್ಷ್ಮ ಭಾವನೆಗಳು
ನಿನಗೆಲ್ಲಿ ಅರ್ಥವಾಗಬೇಕು ?
ನಿನ್ನಂಥ ಆಲಸಿಗೆ ಮದುವೆಯಾದರೂ ಏಕೆ ಬೇಕಿತ್ತು ?
ನಾನು ಗಂಡಸು ಎಂದು ತೋರಿಸಿಕೊಳ್ಳಲೋ ?
ಅಥವಾ ಕೋಪ-ತಾಪ-ತೀಟೆ ತೀರಿಸಿಕೊಳ್ಳಲು
ಒಂದು ಹೆಣ್ಣು ಜೀವ ಬೇಕಾಗಿತ್ತೋ ?
ಜವಾಬ್ಧಾರಿಯನ್ನು ಮರೆತ ನೀನು
ಅದು ಹೇಗೆ ಮಾನವನಾಗುತ್ತಿ ?
ಎದೆಯುದ್ಧ ಬೆಳೆದ ಮಗಳ ಮದುವೆ ಬಗ್ಗೆ
ಯೋಚಿಸದ ನೀನು ಅದು ಯಾವ ಅರ್ಥದಲ್ಲಿ ತಂದೆ ?
ಮಗನ ಮುಂದಿನ ಭವಿಷ್ಯದ ಬಗ್ಗೆ ಕಿಂಚಿತ್ತು ಚಿಂತಿಸದ ನೀನು
ಅದು ಹೇಗೆ ಮಗನಿಗೆ ಅಪ್ಪನಾಗಲು ಸಾಧ್ಯ ?
ನಿನ್ನಂಥ ಅಯೋಗ್ಯ ಗಂಡನಿಗೆ
ಹೆಂಡತಿಯೆನಿಸಿಕೊಳ್ಳುವ ಬದಲು
ನಾನೇ ನಿನ್ನನ್ನು ತಿರಸ್ಕರಿಸಿ ಬಿಡುತ್ತೇನೆ !
ಗಂಡನನ್ನು ಬಿಟ್ಟ ಸೊಕ್ಕಿನ ಹೆಣ್ಣೆಂದು
ಸಮಾಜ ಜರಿದರೂ ಚಿಂತೆಯಿಲ್ಲ ?
ನೀನು ಮಾತ್ರ ನನಗೆ ಬೇಡವೇ ಬೇಡ !
ನಿನ್ನ ಬದುಕು ನಿನಗೆ;ನನ್ನ ಬದುಕು ನನಗೆ !
ನನ್ನ ದುಡಿತದಿಂದಲೇ ಮಕ್ಕಳನ್ನು ಓದಿಸಿ ಒಂದು ನೆಲೆಗೆ ಹಚ್ಚಿ
ಜವಾಬ್ಧಾರಿಯೆಂದರೆ ಏನೆಂದು ತೋರಿಸಿ ಕೊಟ್ಟು
ಈ ಹೆಣ್ಣು ಜೀವ ಸಾರ್ಥಕಗೊಳಿಸಿಕೊಳ್ಳುವೆ !
ನಿನ್ನಂಥವನು ಈ ಭೂಮಿಗೆ ಭಾರವಾಗುವ ಬದಲು
ಒಂದು ಕಲ್ಲಾಗಿದ್ದರೆ ಎಷ್ಟೋ ಚೆನ್ನಾಗಿತ್ತು !!
ಪ್ರೊ. ಸಿದ್ದು ಸಾವಳಸಂಗ