ಮೋಡದಲ್ಲಿ ಮರೆಯಾದ ಬೆಳ್ಳಿ ಚುಕ್ಕಿ “ತ್ರಿವೇಣಿ”ಜನ್ಮದಿನ ನೆನಪುಎಲ್. ಎಸ್. ಶಾಸ್ತ್ರಿ

ವಿಶೇಷ ಲೇಖನ

ಎಲ್. ಎಸ್. ಶಾಸ್ತ್ರಿ

ಮೋಡದಲ್ಲಿ ಮರೆಯಾದ ಬೆಳ್ಳಿ ಚುಕ್ಕಿ

“ತ್ರಿವೇಣಿ”ಜನ್ಮದಿನ ನೆನಪು

ಕೇವಲ ೩೪ ವರ್ಷಗಳ ಬದುಕು! ಆದರೆ ಕನ್ನಡ ನಾಡಿನಲ್ಲಿ ಅವರ ಹೆಸರು‌ ಅಜರಾಮರ. ಅನಸೂಯಾ ಶಂಕರ ಎಂದರೆ ಯಾರೂ ಅವರನ್ನು ಗುರುತಿಸಲಾರರು.     ” ತ್ರಿವೇಣಿ” ಎಂದರೆ ಸಾಕು ಎಲ್ಲರ ಕಣ್ಣು ಅರಳುತ್ತದೆ.
         ಬೆಳ್ಳಿಮೋಡ, ಶರಪಂಜರ, ಹಣ್ಣೆಲೆ ಚಿಗುರಿದಾಗ ಮೊದಲಾದ ಚಲನಚಿತ್ರಗಳನ್ನು ನೋಡದ/ ಮೆಚ್ಚದ ಕನ್ನಡಿಗರಾದರೂ ಯಾರಿದ್ದಾರೆ. ಕನ್ನಡಿಗರಷ್ಟೇ ಏಕೆ , ಹಿಂದಿ, ತಮಿಳು ತೆಲುಗು ಭಾಷಿಕರು ಸಹ ಈ ಚಿತ್ರಗಳನ್ನು ತಮ್ಮ ತಮ್ಮ ಭಾಷೆಯಲ್ಲಿ ನೋಡಿ ಮೆಚ್ಚಿದ್ದಾರೆ. ಅಂತಹ ಮರೆಯಲಾಗದ‌ ಕಾದಂಬರಿಗಳನ್ನು  ಕನ್ನಡಕ್ಕೆ ನೀಡಿದ ತ್ರಿವೇಣಿಯವರು ೧೯೨೮  ಸೆಪ್ಟೆಂಬರ್ ೧ ರಂದು ಮಂಡ್ಯದಲ್ಲಿ ಜನಿಸಿದರು. ಮೊದಲ ಹೆಸರು ಭಾಗೀರಥಿ. ತಂದೆ ಕೃಷ್ಣಸ್ವಾಮಿ ವಕೀಲರು. ತಾಯಿ ತಂಗಮ್ಮ. ಮಹಾರಾಣಿ ಕಾಲೇಜಿನಿಂದ ಮನ:ಶಾಸ್ತ್ರ ವಿಷಯದಲ್ಲಿ ಚಿನ್ನದ ಪದಕ ಸಹಿತ ಬಿ. ಎ. ಪದವಿ ಪಡೆದ ಪ್ರತಿಭಾವಂತೆ ಭಾಗೀರಥಿ ಎಸ್. ಎನ್‌ ಶಂಕರರ ಕೈಹಿಡಿದು ಅನಸೂಯಾ ಆದರು. ಮುಂದೆ ಕತೆ ಕಾದಂಬರಿಗಳ ಮೂಲಕ ತ್ರಿವೇಣಿಯಾದರು.
           ತ್ರಿವೇಣಿಯವರ ಕುಟುಂಬದ ಪರಂಪರೆಯೇ ಸಾಹಿತ್ಯಿಕ ಹಿರಿಮೆಯದು. ಕನ್ನಡದ ಕಣ್ವ ಬಿಎಂಶ್ರೀ ಯವರು ತ್ರಿವೇಣಿಯವರ ದೊಡ್ಡಪ್ಪ. ಖ್ಯಾತ ಕಾದಂಬರಿಕಾರ್ತಿ ವಾಣಿಯವರು ಚಿಕ್ಕಮ್ಮ. ಕತೆಗಾರ ಅಶ್ವಥ್ ಅವರು ಬಾವ. ಆರ್ಯಾಂಬ ಪಟ್ಟಾಭಿಯವರು ತಂಗಿ. ಅಪೂರ್ವ ವಲಯ!
           ಇನ್ನೋರ್ವ ಹೆಸರಾಂತ ಕಾದಂಬರಿಕಾರ್ತಿ ಎಂ. ಕೆ. ಇಂದಿರಾ ಅವರು‌ ತ್ರಿವೇಣಿ ಎಂಬ ಕಾವ್ಯನಾಮ ಕೊಟ್ಟವರು. ಪತಿ ಶಂಕರ ಅವರೂ ಪ್ರಾಧ್ಯಾಪಕರು. ಕತೆ ಕಾದಂಬರಿ ಬರೆಯಲು ಆರಂಭಿಸಿದ ನಂತರ ತ್ರಿವೇಣಿ ಯವರು ತಮ್ಮ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ಪೂರ್ತಿಯಾಗಿ ತಮ್ಮನ್ನು ಸಾಹಿತ್ಯ ರಚನೆಗೆ ತೊಡಗಿಸಿಕೊಂಡರು. ಅವರ ಮಗಳು ಮೀರಾ.


‌  ‌   ತ್ರಿವೇಣಿ ಮನ:ಶಾಸ್ತ್ರ ವಿಷಯದಲ್ಲಿ ಆಸಕ್ತರಾದ್ದರಿಂದ ಅವರ ಬಹಳಷ್ಟು ಕತೆಕಾದಂಬರಿಗಳು ಮನೋವಿಜ್ಞಾನದ ಹಿನ್ನೆಲೆಯಲ್ಲೇ ರೂಪುಗೊಂಡವು. ಪುಟ್ಟಣ್ಣ ಕಣಗಾಲರಂತಹ ಮಹಾನ್ ಪ್ರತಿಭಾವಂತರ ಗಮನ ಸೆಳೆದ ಅವರ ಬೆಳ್ಳಿ ಮೋಡ, ಶರಪಂಜರ , ಕಾದಂಬರಿಗಳು ಚಲನಚಿತ್ರವಾಗಿ ಬೆಳ್ಳಿ ತೆರೆಯಲ್ಲಿ ವಿಜೃಂಭಿಸಿದವು. ಅಪಾರ ಜನಪ್ರಿಯತೆ ಪಡೆದವು. ಹಣ್ಣೆಲೆ ಚಿಗುರಿದಾಗ, ಮುಕ್ತಿ , ಹೂವು ಹಣ್ಣು ಸಹ ಸಿನೆಮಾ ಆದವು. ಬೆಕ್ಕಿನ ಕಣ್ಣು ಕಾದಂಬರಿ ಸಹ ಕಣಗಾಲರಿಂದ ಸಿನೆಮಾ ಆಗಬೇಕಿತ್ತು. ತಪ್ಪಿತು. ಆದರೆ ಅದನ್ನೇ ಅವರು ಮಲೆಯಾಳದಲ್ಲಿ ” ಪೂಚಕಣ್ಣಿ” ಎಂಬ ಹೆಸರಿನಿಂದ ನಿರ್ದೇಶಿಸಿದರು. ಕೆಲವು ಕಿರುತೆರೆ ಧಾರಾವಾಹಿಗಳಾದವು. ಹಿಂದಿ , ಇಂಗ್ಲಿಷ  ತೆಲುಗು ಭಾಷೆಗಳಿಗೂ ಅನುವಾದವು.
         ಕಾಶಿಯಾತ್ರೆ ದೂರದ ಬೆಟ್ಟ, ಹೃದಯಗೀತೆ, ಕೀಲುಗೊಂಬೆ, ಅಪಸ್ವರ, ಮುಚ್ಚಿದ ಬಾಗಿಲು, ಸೋತುಗೆದ್ದವಳು, ಕಂಕಣ, ಎರಡು ಮನಸ್ಸು, ಸಮಸ್ಯೆಯ ಮಗು, ವಸಂತಗಾನ ಮೊದಲಾದ ಕಾದಂಬರಿಗಳನ್ನೂ ಅವರು ಬರೆದಿದ್ದಾರೆ. ಮೂರು ಕಥಾಸಂಕಲನಗಳು ಬಂದವು. ಅವಳ ಮನೆ ಕೃತಿಗೆ ರಾಜ್ಯಪ್ರಶಸ್ತಿ , ಸಮಸ್ಯೆಯ ಮಗು ಕೃತಿಗೆ ದೇವರಾಜ‌ಪ್ರಶಸ್ತಿಗಳು ಬಂದವು.
        ಕನ್ನಡ ಓದುಗರ ದುರ್ದೈವದಿಂದ ತ್ರಿವೇಣಿಯವರಿಂದ ಇನ್ನೂ ಬಹಳಷ್ಟನ್ನು ನಿರೀಕ್ಷಿಸುತ್ತಿರುವಾಗಲೇ ತಮ್ಮ ೩೪ ನೆಯ ವಯಸ್ಸಿನಲ್ಲಿ   ಅವರು ಕಣ್ಮರೆಯಾಗಿಬಿಟ್ಟರು. ಆ ಅಲ್ಪಾವಧಿಯಲ್ಲೇ ಅವರು ತಮ್ಮ ವಯಸ್ಸಿಗಿಂತ ಹೆಚ್ಚು ಕಾದಂಬರಿ ಬರೆದಿದ್ದು ವಿಶೇಷ.

——————————————-


               ಎಲ್. ಎಸ್. ಶಾಸ್ತ್ರಿ

Leave a Reply

Back To Top