ಸಂತೆಬೆನ್ನೂರು ಫೈಜ್ನಟ್ರಾಜ್ ನನ್ನಯ ಹಕ್ಕಿ

ಕಾವ್ಯ ಸಂಗಾತಿ

ಸಂತೆಬೆನ್ನೂರು ಫೈಜ್ನಟ್ರಾಜ್

ನನ್ನಯ ಹಕ್ಕಿ

ದಿನಾಲೂ ಅಷ್ಟೇ,
ಕಿಟಕಿ ಗಾಜಿನ ಸರಳಿಗೆ ಬಂದು ಕೂತ
ತಿಳಿಕಂದು ಚಿಟಗುಬ್ಬಿ
ಗಾಜಿಗೆ ನಿರಂತರ ಕುಕ್ಕಿ ಕೊಕ್ಕು ನೋಯಿಸಿಕೊಳ್ಳುತ್ತಿದೆ!

ಎಡೆಬಿಡದೇ ಬಡಿವ ರೆಕ್ಕೆ
ಕುಕ್ಕುತ್ತಲೇ ಹಾಕುವ ಶಿಳ್ಳೆಯಂತಹ ಕೇಕೆ
ಹಾರಿ ಹಾರಿ ಏನನ್ನೋ ಹುಡುಕುತ್ತದೆ!

ಎಷ್ಟು ಸಾರಿ ಸಂಧಾನ ರ‍್ವ ತಿರುತಿರುವಿ ಹಾಕಿದರೂ
ಯುದ್ಧ ರ‍್ವಕ್ಕೆ ದಾಟಲಾಗುತ್ತಿಲ್ಲ; ಹಕ್ಕಿ ಕೊಕ್ಕಿನ ಶಬುದ
ಕಿವಿಗೆ ಭೀಮಗದಾಲಾಪ!
ಬೆಳ್ಳಂಬೆಳಿಗ್ಗೆಯ ದಿನಂಪ್ರತಿಯ
ಚರಿತಾಕೃತಕೃತ್ಯವಿದು
ಸುತ್ತಲ ಮನುಜ ಭಾಷೆಯ ಅರಿಯದೇ
ಅಗಣಿತ ಬಂಧಗಳಿಗೆ ತಿಲಾಂಜಲಿಯಿತ್ತವ ನಾನು
ಈ ಹಕ್ಕಿ ಭಾಷೆ ಅರಿಯುವೆನೇ?

ಹಿಡಿಯ ಹೋದರೆ ಹಕ್ಕಿ ಪರಾರಿ
ಸುಮ್ಮನಿದ್ದರೆ ನಿಲ್ಲದ ಕೊಕ್ಕಿನ ಅವಾಜ್!

ದೂರದ ಊರಲ್ಲಿ ಓದೋ ಮಗ ಒಮ್ಮೆ ಮನೆಗೆ
ಬಂದ.. ..ತಿರುವಿ ಹಾಕೋ ಮಹಾಭಾರತ
ಅವನೂ
ನೋಡುವಾಗಲೇ ಹಕ್ಕಿ ಹಾಜರು;
ಅಚ್ಚರಿಪಟ್ಟು ಕಿಟಕಿ ಗಾಜ ಸರಿಸಿ ಪುಟ್ಟ ಬಟ್ಟಲಲ್ಲಿ
ಒಂದಿಷ್ಟು ಕಾಳು ಹಿಡಿದ, ಹಕ್ಕಿ ಬಟ್ಟಲು ಕುಕ್ಕಿ
ನಾಲ್ಕು ಕಾಳು ತಿಂದು ಹಾರಿ ಹೋಯಿತು!

ಅಯ್ಯೋ,
ಒಳಕುಳಿತ ನಾನು ಗಾಜ ಸರಿಸಲಿಲ್ಲ
ಹೊರಗಿದ್ದ ಹಕ್ಕಿ ಒಳ ಬರಲಿಲ್ಲ
ಮಗ ತೆರೆದಿದ್ದು ಕಿಟಕಿಯ ಗಾಜೋ, ನನ್ನ ಕಣ್ಣೋ ….. ಗೊತ್ತಿಲ್ಲ
ನನ್ನಯ ಹಕ್ಕಿ
ಬಿಟ್ಟೆ ಬಿಟ್ಟೆ ಅನ್ನುವಂತೆ
ನಾಳೆ ಬಂದಿತೋ ಇಲ್ಲವೋ…
ಮಗ ಮಾಡುತ್ತಿದ್ದ ಕೆಲಸ ನಾ ಮಾಡಲು
ಕಾಯುತ್ತಿದ್ದೇನೆ ;
ಹಕ್ಕಿಯೆಂಬುದು ಇಲ್ಲಿ ಬರಿದೆ ಸುಮ್ಮನೆ!


ಸಂತೆಬೆನ್ನೂರು ಫೈಜ್ನಟ್ರಾಜ್

Leave a Reply

Back To Top