ಕಾವ್ಯಸಂಗಾತಿ
ಡಾ. ಸುನೀಲ್ ಕುಮಾರ್
ಗಜ಼ಲ್
ಪ್ರೀತಿಗೆ ಪುರಾವೆಗಳು ಬೇಡ ನಿನ ಸಂಕಷ್ಟಕೆ ಜನರೇ ಅತ್ತರು
ನೀತಿಗೆ ನಿರ್ದೇಶನಗಳು ಬೇಡ ನಿನ ನಡೆಗೆ ನರರೇ ಅತ್ತರು
ಚಾಂದಿನಿ ರಾತ್ರಿಯಲಿ ಮೈತ್ರಿಗೆ ಮೈಲಿಗೆ ಆಗದು ನಿನ ಖುಷ್ಬೂವಿನ್ನಿಂದ
ಕಂಬನಿ ಹನಿಗಳು ಚಂದ್ರಿಕೆಯಲಿ ಮಿಂದಿದನು ನೋಡಿದ ದಿಲ್ದಾರರೇ ಅತ್ತರು
ಗೋಡೆಯೇಕೆ ನಮ್ಮಿಬ್ಬರ ನಡುವೆ ತನುವಿನ ಕಣಕಣಗಳು ಕಂಕಣತೊಟ್ಟಿ ಕಣಕ್ಕಿಳಿದ ಮೇಲೆ?
ಘೋಡ ಸವಾರಿಗೆ ತಡೆಗೋಡೆಯಿಲ್ಲ ಒಲವ ನೋವುಂಡ ರಾವುತರೇ ಅತ್ತರು
ಬದನಸೀಬ್ ನಾನು ನಿನ ಬಣ್ಣಿಸುವ ಶಾಯರಿಯ ಹುಡುಕಾಡಿ ಸೋತೆ
ಅಮಲೇರಿತು ಮಹಲಿನಲಿ ಅನುರಾಗದ ನಶೆಗೆ ಸೈಯೆಂದ ಗಜ಼ಲ್ಕಾರರೇ ಅತ್ತರು
ಮೇಘ ಶ್ಯಾಮನಾದ ಕುಮಾರ ಬಾಸುರಿಯ ನುಡಿಸಿ ರಾಧೆಯ ತಣಿಸಿದ
ರಾಗ ಹಾಡಿ ಕುಣಿದಾಡಿ ಆಲಿಂಗಿಸಿದ ಮಧುವುಂಡ ಮಧುಕರರೇ ಅತ್ತರು
ಎರಡು ಅರ್ಥ ಕೊಡುವ ರಧೀಫ್ ‘ಅತ್ತರು’( ಕಣ್ಣೀರಾಕುವುದು, ಸುಗಂಧ)
-ಡಾ. ಸುನೀಲ್ ಕುಮಾರ್