ಇಂದಿರಾ ಮೋಟೆಬೆನ್ನೂರ ಕವಿತೆ ಯಾನ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಯಾನ

ನೂರು ಮನಸುಗಳ
ಸಾವಿರ ಕನಸುಗಳ
ನನ್ನುಡಿಯಲ್ಲಿ
ಹೊತ್ತು ತಂದಿರುವೆ
ನಿನಗಾಗಿ…

ನುಡಿಯಲಾರದ
ಮಾತುಗಳ ಮೌನದ
ಬೆಟ್ಟವನೇ ಎತ್ತಿ
ತಂದಿರುವೆ
ನಿನಗಾಗಿ…

ಬಿಡಿಸದ ಪದಬಂಧ
ಒಗಟುಗಳ
ಸರಮಾಲೆ ತೊಟ್ಟು
ಬಂದಿರುವೆ
ನಿನಗಾಗಿ…

ಸ್ಫುರಿಸಲಾಗದ ಭಾವ
ತೊಟ್ಟಿಲನ್ನು ಕಟ್ಟಿ
ಹಿಡಿ ಪ್ರೀತಿಗಾಗಿ
ತೂಗುತಲಿರುವೆ
ನಿನಗಾಗಿ..

ಬಚ್ಚಿಟ್ಟ ಭಾವಗಳ
ಬೆಳಕ ಬೆಟ್ಟವನೇ
ಮುಚ್ಚಿಟ್ಟು
ತಂದಿರುವೆ
ನಿನಗಾಗಿ…

ಮಿಡಿದೆದೆಯ
ರಾಗ ಭಾವ
ಸ್ನೇಹ ಸೆಲೆಯ
ಚಿಮ್ಮಿಸಿರುವೆ
ನಿನಗಾಗಿ

ಬೆಚ್ಚನೆ ಎದೆಗೂಡ
ಬಿಚ್ಚಿಡಲಾಗದ
ಹುಚ್ಚ ಪ್ರೀತಿಯ
ಹಚ್ಚೆಯಾಗಿಸಿಹೆ
ನಿನಗಾಗಿ….

ಮುಗಿಲೂರ ಚಂದಿರ
ನಿನ್ನ ಮನದಂಗಳದಿ
ನೆಲದಿಂದೆದ್ದು ನೇಹ
ನವಿರಾಗಿಹೆ
ನಿನಗಾಗಿ..

ತಿಂಗಳು ಪಯಣಿಸಿ
ತಿಂಗಳನಂಗಳದಿ
ನಗುವ ಶಶಿ ಮೊಗದಿ
ಕಂಗಳ ಚೆಂಬೆಳಕಾಗಿಹೆ
ಇಂದು ನಿನಗಾಗಿ…


ಇಂದಿರಾ ಮೋಟೆಬೆನ್ನೂರ.

2 thoughts on “ಇಂದಿರಾ ಮೋಟೆಬೆನ್ನೂರ ಕವಿತೆ ಯಾನ

  1. ಏಂಜಲೀನಾ ಮೇಡಂ….ಸವಿ ಸ್ಪಂದನೆಗೆ ಆತ್ಮೀಯ ಧನ್ಯವಾದಗಳು ತಮಗೆ…..

Leave a Reply

Back To Top