ಕಾವ್ಯಸಂಗಾತಿ
ಸುಧಾ ಪಾಟೀಲ
ಉತ್ತರವಿರದ ಪ್ರಶ್ನೆಗಳು
ಮನಸಿನ ಮೂಲೆಯಲಿ
ಹಗಲಿರುಳು ಕಾಡುವ
ಬೆಚ್ಚನೆ ಹೊದಿಕೆಯಲ್ಲಿ
ಬೆಚ್ಚಿಬೀಳುವ
ಕತ್ತಲೆಯ ರಾತ್ರಿಯಲಿ
ಅಂಜಿಸಿ ನಗುವ
ಉತ್ತರವಿರದ ಪ್ರಶ್ನೆಗಳು
ಕೊರೆಯುವ ಚಳಿಯಲ್ಲೂ
ಬೆವರಿಳಿಸುವ
ಹಿಂದೆ ಬಂದು ಗಕ್ಕನೆ
ಹಿಡಿದುಕೊಳ್ಳುವ
ಮಾತಾಡುತ್ತಲೇ ತಬ್ಬಿಬ್ಬಾಗುವ
ಉತ್ತರವಿರದ ಪ್ರಶ್ನೆಗಳು
ಸಂಶಯದ ಪಿಶಾಚಿಯಂತೆ
ಸದಾ ತಲೆಯಲ್ಲೇ
ಸುಳಿಯುತ್ತಿರುವ
ನಂಬಿಗೆಯ ಬುಡಮೇಲು
ಮಾಡುವ
ಉತ್ತರವಿರದ ಪ್ರಶ್ನೆಗಳು
ಯಾವತ್ತೂ ಬಿಡಿಸಿಕೊಳ್ಳಲಾರದೆ
ದೂರ ಓಡಿಹೋಗಲಾಗದೆ
ಜೇಡರ ಬಲೆಯಲ್ಲಿ ಸಿಕ್ಕು
ಗಿರಗುಟ್ಟುತ್ತಿವೆ
ಉತ್ತರವಿರದ ಪ್ರಶ್ನೆಗಳು
ತಡಕಾಡಿ ಹುಟ್ಟುಹಾಕುತ್ತಿವೆ
ಇಲ್ಲಸಲ್ಲದ ಅಪವಾದಗಳನು
ತಿರುಗುಣಿಯಲಿ ತಿರುಗುತ್ತಿವೆ
ಗೊತ್ತು ಗುರಿಯಿಲ್ಲದೆ
ಅನವಶ್ಯಕವಾಗಿ
ಉತ್ತರವಿರದ ಪ್ರಶ್ನೆಗಳು
ಜವಾಬ್ದಾರಿಯ ಮರೆಸಿ
ತಿಳುವಳಿಕೆಯ ಮೀರಿ
ಸಂದಿ ಗೊಂದಿಯಲಿ
ಕೇಕೆ ಹಾಕಿ ನಗುತ್ತಿವೆ
ಉತ್ತರವಿರದ ಪ್ರಶ್ನೆಗಳು
ಸುಧಾ ಪಾಟೀಲ್