ಡಾ ಅನ್ನಪೂರ್ಣ ಹಿರೇಮಠ ನೀ ಬಂಧುವಾಗಿ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ನೀ ಬಂಧುವಾಗಿ

ನೀ ಮರೆಯದ ಬಂಧುವಾಗಿ
ನನ್ನ ಕಣ್ಣ ಬಿಂಬವಾಗಿ
ಉಳಿದುಬಿಡು ಎಂದೆಂದೂ
ನನ್ನ ಪ್ರಿಯ ಗೆಳೆಯನಾಗಿ
ಬಾಳ ಜೋತೆಗಾರನಾಗಿ
ಪಯಣದಲೊಂದಾಗಿ//

ಮಾಸದ ಬೆಳಕಾಗಿ
ನಿದಿರೆಯ ಹೊನಲಾಗಿ
ನೈದಿಲೆ ಬೆಳಕಾಗಿ
ಇದ್ದು ಬಿಡು ಎದೆ ದಡ
ಒಡೆದು ದಾಟದಂತೆ
ಹೃದಯದೊಳಗೆ//

ಹೂವ ಸೌಗಂಧವಾಗಿ
ಜೇನ ಮಕರಂದವಾಗಿ
ಗಾಳಿ ಗಂಧದಲಿ ಇದ್ದು ಬಿಡು
ಕಾನನದ ಸುಮವಾಗಿ
ಮಾನಸದ ದೊರೆಯಾಗಿ
ನಿಂತು ಬಿಡು ಮನದಂಗಳದಿ//

ತುಟಿಯಂಚ ಸುಧೆಯಲಿ
ಕಣ್ಣಂಚ ಮಿಂಚಲಿ
ಉಳಿದುಬಿಡು ನಿಧಿಯಾಗಿ
ಭಾವ ಬಿತ್ತಿಯಲಿ
ಜೀವದುಸಿರಿನಲಿ
ಇದ್ದುಬಿಡು ಉಸಿರಾಗಿ//

ರಂಗೋಲಿಯ ಚುಕ್ಕಿಯಲಿ
ಗಗನದಾ ತಾರೆಯಲಿ
ಚಂದಿರನಾಗಿರು, ತಂಪಾಗಿ
ಛಲ ಬಲದ ಸೆಲೆಯಾಗಿ
ನಗುವಿನ ಹೊನಲಾಗಿ
ಇದ್ದು ಬಿಡು ಗರಿಕೆಯಂತೆ//

ಕಂಗೊಳಿಪ ಗರಿಯಂತೆ
ಮೋಹಕ ಝರಿಯಂತೆ
ನಲಿವ ನೀಡುತಿರು ನಿತ್ಯ
ಚಪ್ಪರದ ತಳಿರಾಗಿ
ಹಂದರದ ಹಸಿರಾಗಿ
ನಿಶೆಯ ಮದಿರೆಯಾಗಿರು ನನ್ನೊಳಗೆ//


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top