ವಿಮಲಾರುಣ ಪಡ್ಡoಬೈಲ್ ಕವಿತೆ-ಪಯಣ

ಕಾವ್ಯಸಂಗಾತಿ

ವಿಮಲಾರುಣ ಪಡ್ಡoಬೈಲ್ ಕವಿತೆ

ಪಯಣ

ಒಂಟಿ ಬಾಳ ಪಯಣದಿ
ಜೊತೆಯಾದೇ ನೀನು
ಇರಿಸು ಮುರಿಸು ತಳಮಳ ತಲ್ಲಣ
ಬದುಕ ಬಾಗಿಲುಗಳಿಗಾದವು ತೋರಣ
ನಿನ್ನೀ ಬೆಚ್ಚನೆಯ ಪ್ರೀತಿಯಾಋಣ
ಬೇನೆ ಮರೆಸಿ
ಬೆಸೆದೆ ನಾ ನಿನ್ನ ಒಡಲಾಳದಿ

ಬಡತನದ ಬೇಗೆ
ಹಸಿವಿನ ವೇದನೆ
ತೂತು ಬಿದ್ದ ಹಂಚಿನಲ್ಲಿ
ನೀರು ಹನಿಹನಿ ತೊಟ್ಟಿಕ್ಕುವಂತೆ
ನಮ್ಮ ಕಾರ್ಪಣ್ಯದ ಕಂಬನಿ
ಹೂವಿನ ಮೇಲಿನ ಇಬ್ಬನಿ
ನಾನು ನೀನು ಪತ್ರ ಮಿಳಿತದ ಹನಿ

ಅರಳಿದ ಪುಷ್ಪಕೇನೂ
ಭೇದ ಭಾವವಿಲ್ಲ
ದೇವರ ಶಿರದಲ್ಲಿ ನಕ್ಕು
ಸಾವಿನ ಮನೆಯಲ್ಲಿ ಬಿಕ್ಕಿ
ಸಾರ್ಥಕತೆ ಬಯಸಿ
ಸಂಜೆಗೆ ಬಾಡಿ ತೊರೆವುದು ಲೋಕವ.

ನಮ್ಮ ಬದುಕೇ ಹೂವು
ಬಡತನವ ಮೀಟಿ
ನೋವು ಒಳಬೇಗುದಿಗಳ ದಾಟಿ
ಪ್ರೇಮಗಂಧದಲಿ
ಬದುಕರಥ ಎಳೆಯುತ
ಬಿಕ್ಕುವ ಹೂವ ಬಗಲಲಿರಿಸಿ
ನಡೆವ ನಾವು ಪ್ರೇಮದೊಲುಮೆಯಲಿ!


ವಿಮಲಾರುಣ ಪಡ್ಡoಬೈಲ್

Leave a Reply

Back To Top