ಕಾವ್ಯ ಸಂಗಾತಿ.
ಇಮಾಮ್ ಮದ್ಗಾರ ಕವಿತೆ-
ವೀಕ್ಷಕ
ವಿಷ ಕುಡಿದೂ..
ಬದುಕಲು ನಾನು
ನೀಲಕಂಠನಲ್ಲ
ಬೆಂಕಿಯಲಿ ಬೆಂದೂ..
ಬದುಕಿರಲು ನಾನು
ಪ್ರಹ್ಲಾದ ನಲ್ಲ
ದೇಹದ ತುಂಬಾ..
ನೆಟ್ಟ ಬಾಣಗಳನೇ..
ಮಂಚವಾಗಿಸಿ
ಮಲಗಲು ನಾನು
ಪಿತಾಮಹ ಭೀಷ್ಮನೂ ಅಲ್ಲ
ಬಾಣಗಳ ಎದುರಿಸಿಯೂ..
ನಾನು ಬದುಕಬಲ್ಲೆ
ಎಂದು ಎದೆಯುಬ್ಬಿಸಲು
ನನಗೆ ಕರ್ಣನಂತೆ
ಕವಚವೂ ಇಲ್ಲ
ಕೈಚಳಕದ ಮೋಡಿಮಾಡಿ
ಮೋಸದ ದಾಳಹಾಕಿ
ನಿನ್ನನ್ನು ಸೋಲಿಸಲು
ನಾನು ಶಕುನಿಯೂ ಅಲ್ಲ
ನಿಮ್ಮ ಗೆಲುವನ್ನು
ಕಾಣಲು ಆತುರದಿಂದ
ಕಾಯುವ ನಾನೊಬ್ಬ
ವೀಕ್ಷಕ ಅಷ್ಟೇ..!!!
ಇಮಾಮ್ ಮದ್ಗಾರ