ಪ್ರಮೋದ ಜೋಶಿ ನನ್ನ ಮಗಾ ಅಮೇರಿಕಾದಲ್ಲಿ ಇದ್ದಾನೆ

ಕಾವ್ಯಸಂಗಾತಿ

ಪ್ರಮೋದ ಜೋಶಿ

ನನ್ನ ಮಗಾ ಅಮೇರಿಕಾದಲ್ಲಿ ಇದ್ದಾನೆ

ನನ್ನ ಮಗಾ ಅಮೇರಿಕಾದಲ್ಲಿ ಇದ್ದಾನೆ
ಸ್ಪುರದ್ರೂಪಿ ಗುಣವಂತ
ಕಾರು ಬಂಗಲೆ ಹೊಂದಿರುವ ಹಣವಂತ
ಅಲ್ಲೇ ಮದುವೆಯಾಗಿ ಉಳಿದ ಧೀಮಂತ

ನನ್ನ ಮಗಾ ಅಮೇರಿಕಾದಲ್ಲಿ ಇದ್ದಾನೆ

ಇಲ್ಲಿಯೇ ಬೆಳೆದು ಕಲೆತು
ವಲಸೆಹೋದ ವಿದ್ಯಾವಂತ
ತನ್ನ ತನ ಒತ್ತೆ ಇಟ್ಟು
ತನವನ್ನಷ್ಟೇ ಮನಸೊಳಿಟ್ಟ ಮಹಾಂತ

ಅವಾ ಅಮೇರಿಕಾದಲ್ಲಿ ಇದ್ದಾನೆ

ತಿಂಗಳಿಗೊಮ್ಮೆ ಬರುವುದು ಹಣ
ಆತ ಮಾತ್ರ ಬರುವುದೇಯಿಲ್ಲಾ
ಹೆತ್ತೊಡಲ ಕೂಲಿ ಕೂಳು ತಿಂದು
ಬದುಕಿದ್ದೇವೆ ಇನ್ನೂ ದಾರಿ ಕಾಯುತ

ಅವಾ ಅಮೇರಿಕಾದಲ್ಲಿ ಇದ್ದಾನೆ

ವಸಂತಗಳ ಮೇಲೆ ವಸಂತವೇ ಕಳೆದಿವೆ
ಒಂದು ಕಾಲು ಗೋರಿಯೊಳಗಿದೆ
ಬರುವಿಕೆ ಮರೀಚಿಕೆಯಾಗಿ
ಆತನ ಮುಖವೂ ಮಾಸಿದೆ

ಆತ ಅಮೇರಿಕಾದಲ್ಲಿ ಇದ್ದಾನೆ

ನೋಡಿ ಸಾಯುವೆವೊ ನೋಡಿದರೂ
ಗುರಿತಿಸಲಾಗದೆ ಇರುವೆವೊ
ಕಂದನ ಮುಖವಷ್ಟೆ ಮನದೊಳಗಿದೆ
ಹಾದಿ ಮಾತ್ರ ದೂರ ದೂರವೇ ಇದೆ

ಯಾಕೆಂದ್ರೆ ಆತ ಅಮೇರಿಕಾದಲ್ಲಿ ಇದ್ದಾನೆ

ಹೆತ್ತು ಹೊತ್ತು ದತ್ತು ಕೊಟ್ಟೇವಿ
ಆ ದೇಶದ ಮಡಿಲಿಗೆ
ಇಲ್ಲಿಯ ಋಣ ತೀರಿಸದಿದ್ದರೂ
ಅಲ್ಲಿ ತೀರಿಸುತ್ತಿದ್ದಾನೆ ಮಡಿಲಿಗೆ

ಋಣ ತೀರಿಸಲೆಂದು ಅಮೇರಿಕಾದಲ್ಲಿ ಇದ್ದಾನೆ

ಇಲ್ಲಿಯವನಾದರೂ ಆತ ಅಲ್ಲಿದ್ದಾನೆ
ವ್ಯಸ್ತ ವ್ಯಕ್ತಿಯಾಗಿ ಮರೆತಿದ್ದಾನೆ
ವಾಸ್ತವ ಸತ್ಯ ಅರಿತು ನಾವು
ಕೂಲಿ ಪಡೆದು ಜೀವ ನಡಸಲೇಬೇಕು

ಇರುವವ ಒಬ್ಬನೇ ಅಮೇರಿಕಾದಲ್ಲಿ ಇದ್ದಾನೆ

ಪ್ರಮೋದ ಜೋಶಿ

Leave a Reply

Back To Top