ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಹೇಗೆ ಬದುಕಲಿ….?
ನಾನೇನು ನಿನ್ನ
ಬಾರೆಂದು ಕರೆದಿರಲಿಲ್ಲ
ನೀನಾಗಿಯೇ
ಬಂದಪ್ಪಿದೆಯಲ್ಲ….
ನಾನೇನು ನಿನ್ನ
ನೋಡೆನ್ನ ಎನಲಿಲ್ಲ
ನೀನಾಗಿಯೇ
ನಯನದಾಳಕಿಳಿಸಿ ಕೊಂಡೆಯಲ್ಲ…
ನಾನೇನು ಪ್ರೀತಿಸೆಂದು
ಅಂಗಲಾಚಲಿಲ್ಲ
ನೀನಾಗಿಯೆ ನಿನ್ನ ಹೃದಯ
ಮಂದಿರದಲೆನ್ನ
ಇರಿಸಿಕೊಂಡೆಯಲ್ಲ…
ಬೇಡುವ ಮೊದಲೇ
ಎಲ್ಲ ನೀಡುತ್ತ
ಮತ್ತೆ ಕಸಿಯುತಿರುವೆ
ಈಗೇಕೆ ಹೀಗೆ
ಕಾಡುತಿಹೆ ನೀನು..
ನಾನೇನು ಸ್ನೇಹದ
ಪರಿಧಿಯಾಚೆಗೆ
ಕೈ ಚಾಚಿರಲಿಲ್ಲ
ನೀನಾಗಿಯೇ ಬರಸೆಳೆದು
ಒಳಸೆಳೆದು ಕೊಂಡೆಯಲ್ಲ…
ನಾನೇನು ಬಿಳಿ
ಎದೆ ಹಾಳೆ ಮೇಲೆ
ಬರೆಯೆಂದೂ ಬಿನ್ನೈಸಲಿಲ್ಲ
ನೀನಾಗಿಯೇ ಭಾವ
ಬಿತ್ತಿ ಬೆಳೆದೆಯಲ್ಲ…
ಸಾವಿರ ಹಣ್ಣು ಕಾಯಿ
ಭಾರ ಹೊತ್ತ
ಹೆಮ್ಮರಕೆ
ಪುಟ್ಟ ಹೂವೊಂದು
ಭಾರವಾಗಿ ದೂರ
ಮಾಡಿದೆ ಏಕೆ?
ನಿತ್ಯ ಹನಿ ಹನಿ
ವಿಷವ ನೀಡಿ
ಇಂಚಿಂಚು ಕೊಲುವ
ಬದಲು ಒಮ್ಮೆಲೇ
ಕೊರಳ ಹಿಸುಗಬಾರದೇ..?
ಬದುಕಿ ಬಿಡೋಣ
ನಿಜ ಆದರೆ….
ಉಸಿರಿದ್ದೂ ಶವದಂತೆ
ಹೇಗೆ ಬದುಕಲಿ
ನೀನೇ ಹೇಳು..?
————–
ಇಂದಿರಾ ಮೋಟೆಬೆನ್ನೂರ.