ಶಂಕರಾನಂದ ಹೆಬ್ಬಾಳ ಕವಿತೆ ಅಮ್ಮನ ಸೀರೆ

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಅಮ್ಮನ ಸೀರೆ

ಅಜ್ಜ ಕೊಟ್ಟ ಸಿಲ್ಕ ಸೀರೆ
ಹಳೆ ಟ್ರಂಕಿನಲ್ಲಿ ಮಡಿ ಮಡಿ
ಇಸ್ತ್ರಿಯಿಲ್ಲದೆ ಹಾಗೆ ಕುಳಿತಿದೆ..!
ಜೀವವಿರದ ಗೊಂಬೆಯಂತೆ
ಬಾಡಿಹೋದ ಹೂವಂತೆ..
ಮುರಿದು ಹೋಗದ,
ಬಾಂಧವ್ಯ ಬೆಸೆಯುತ್ತಿದೆ…!!

ಒನಪಿನ ಮೈಗೆ ನುಣುಪಾಗಿ
ಮೆರೆದು, ಗತ್ತು ಗೈರತ್ತಿನಲ್ಲಿ
ಗಾಂಭಿರ್ಯ ತೋರಿ ಕೂತಿದೆ
ಈಗ ವಯಸ್ಸಾದ ಮುದುಕಿಯಾಗಿ…!
ಟ್ರಂಕಿನಲ್ಲಿ ಭದ್ರ ನೆನಪಿನ ಕುರುಹಾಗಿ..!!

ಬಣ್ಣ ಮಾಸಿತ್ತು,
ಗಿಡಕ್ಕೆ ಕಟ್ಟಿ ಜೋತಾಡುವ
ತೊಟ್ಟಿಲಾಯಿತು,
ಆಗಲೂ ನೆನಪಾಗುತ್ತಿತ್ತು,
ಇದೆ ಹಬ್ಬಕ್ಕಲ್ಲವೆ ಕಾಣಿಕೆ ಕೊಟ್ಟಿದ್ದು,….!
ತಂಟೆ ತಕರಾರುಗಳ ಬಲೆಯಲ್ಲಿ
ನಾನು ಉಟ್ಟು ಮೆರೆದದ್ದು..!
ಈಗಲೂ ಗಟ್ಟಿಯಿದೆ,
ಸಂಬಂಧದ ಕೊಂಡಿಯಂತೆ
ಕೊಟ್ಟ ಅಜ್ಜನಂತೂ ಇಲ್ಲ,
ಸೀರೆಯಿದೆ ಖಜಾನೆಯಲ್ಲಿ…!

ನೋಡಿದಾಗಲೊಮ್ಮೆ
ತವರುಮನೆ ನೆನಪು,
ಅಪ್ಪನ ನೌಕರಿ ಪ್ರಮೋಷನ್
ಇವೆಲ್ಲದರ ಗುರುತುಗಳು
ಒಮ್ಮೊಮ್ಮೆ ಎಲ್ಲವನ್ನು
ಮಿಂಚಿನಂತೆ ಹಾಯಿಸುತ್ತದೆ..!
ಆ ಸಮಯ ಮತ್ತೆ ಬರದು
ಬಂದಾಗ ಮನ ನೋಯಿಸುತ್ತದೆ…!!

ಕೊನೆಗೆ ಮಗುವಿನ ಹೊದಿಸುವ
ದುಪ್ಪಟ್ಟವಾಗಿ ಬೆಚ್ಚಗಿರಿಸಿದ್ದು,
ಮಗಳಿಗೆ ಚೂಡಿಯಾಗಿ,
ಮಿಡಿಯಾಗಿ ಜೀವತಳೆದ
ಗೊಂಬೆಯಂತೆ ಕುಣಿಯುತ್ತಿದೆ,…!

ಮನದ ಹಪಾಹಪಿ
ಅವ್ಯಕ್ತ ಭಾವಗಳ ಮೆರವಣಿಗೆ,
ಬರೆದರೆ ಕಥೆಯಾಗಬಹುದೇನೋ…!
ಹೇಳತೀರದ ಸಂಬಂಧ
ನನ್ನ ಆ ಸೀರೆಯ ಬಂಧ,
ದಿನಕಳೆದರೂ ಆಗಾಗ ಮಸ್ತಕದಲಿ
ಕನಸಿನಂತೆ ತೇಲಿ ಬರುತ್ತಿದೆ,…!!
ಇದೆ ಅಮ್ಮನ ಸೀರೆ…!


ಶಂಕರಾನಂದ ಹೆಬ್ಬಾಳ

Leave a Reply

Back To Top