ಅಂಗಸೋಂಕಿನ ಲಿಂಗತಂದೆಗಳ ವಚನ ವಿಶ್ಲೇಷಣೆ ಪ್ರೊ. ಜಿ ಎ ತಿಗಡಿ

ವಚನ ಸಂಗಾತಿ

ಅಂಗಸೋಂಕಿನ ಲಿಂಗತಂದೆಗಳ ವಚನ

ಪ್ರೊ. ಜಿ ಎ ತಿಗಡಿ

 ಅಂಗಸೋಂಕಿನ ಲಿಂಗತಂದೆಗಳ ವಚನ

ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ?
ಶಿಲೆಯೊಳಗಣ ದೀಪ್ತಿ
ಆ ಬೆಳಗ ತನ್ನ ತಾನೆ ಬೆಳಗಬಲ್ಲುದೆ?
ಆ ತೆರನಂತೆ ಕುಟಿಲನ ಭಕ್ತಿ, ಕಿಸಕುಳನ ವಿರಕ್ತಿ
ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು.
ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ
ನಿಶ್ಚಯವನರಿಯಬಾರದು,
ಗುರುವಾದಡೂ ಲಿಂಗವಾದಡೂ ಜಂಗಮವಾದಡೂ
ಪರೀಕ್ಷಿಸಿ ಹಿಡಿಯದವನ ಭಕ್ತಿ, ವಿರಕ್ತಿ,
ತೂತಕುಂಭದಲ್ಲಿಯ ನೀರು,
ಸೂತ್ರ ತಪ್ಪಿದ ಬೊಂಬೆ,
ನಿಜನೇತ್ರ ತಪ್ಪಿದ ದೃಷ್ಟಿ;
ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ?
ಇಂತು ಆವ ಕ್ರೀಯಲ್ಲಿಯೂ ಭಾವಶುದ್ಧಾತ್ಮನಾಗಿ ಆರೈಕೆ ಬೇಕು,
ಭೋಗಬಂಕೇಶ್ವರಲಿಂಗದ ಸಂಗದ ಶರಣನ ಸುಖ.
********

    ಕಟ್ಟಿಗೆ ಒಳಗಿನ ಬೆಂಕಿ ತನ್ನಷ್ಟಕ್ಕೆ ತಾನೇ ಉರಿಯಬಹುದೇ? ಎಂದಿಗೂ ಸಾಧ್ಯವಿಲ್ಲ.   ಶಿಲೆಯೊಳಗಿನ ಬೆಂಕಿ ತನ್ನಷ್ಟಕ್ಕೆ ತಾನೇ ಬೆಳಗಬಲ್ಲದೆ ?  ಇದು ಕೂಡ ಸಾಧ್ಯವಿಲ್ಲ.  
ಇದರಂತೆ ಮೋಸಗಾರನ ಭಕ್ತಿ, ಪಾಪಿಯ ವೈರಾಗ್ಯಗಳನ್ನು ಚೆನ್ನಾಗಿ ಪರೀಕ್ಷಿಸದೆ (ಸತ್ಯ –  ಮಿಥ್ಯವನರಿಯದೆ,)  ನಂಬಬಾರದು.   ಸತ್ಯವನ್ನಾಗಲಿ ಅಸತ್ಯವನ್ನಾಗಲೀ ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಲಾರದೆ ಯಾವುದೇ ನಿರ್ಧಾರಕ್ಕೆ ಬರಬಾರದು.   ಗುರುವಾಗಲಿ, ಲಿಂಗವಾಗಲಿ, ಜಂಗಮವಾಗಲಿ ಪರೀಕ್ಷಿಸದೆ ಪ್ರಮಾಣಿಸದೆ ನಂಬಿ,  ಅವರು ತೋರಿದ ಮಾರ್ಗದಲ್ಲಿ ನಡೆದು ಆಚರಿಸಿದ ಭಕ್ತಿ,  ವೈರಾಗ್ಯಗಳು ತೂತುಬಿದ್ದ ಮಡಕೆಯಲ್ಲಿ ತುಂಬಿದ ನೀರಿನಂತೆ,  ಸೂತ್ರ ಹರಿದ ಬೊಂಬೆಯಂತೆ,  ಸುದೃಷ್ಟಿ ಬಿಟ್ಟು ಕುದೃಷ್ಟಿಯನ್ನು ಆಶ್ರಯಿಸಿದಂತೆ,  ಎಲ್ಲವೂ ವ್ಯರ್ಥವಾಗಿ ಹೋಗುತ್ತದೆ.   ಅಷ್ಟೇ ಅಲ್ಲ ಸಸಿಯ ಬೇರನ್ನು ಮೇಲೆ ಮಾಡಿ ತುದಿ ಕೆಳಗಾಗಿಸಿ ಮಣ್ಣಿನಲ್ಲಿ ಹುಗಿದು ನೀರುಣಿಸಿದಂತೆ ಎಲ್ಲವೂ ನಿಷ್ಪಲವಾಗುತ್ತದೆ.    ಹೀಗೆ ನಮ್ಮ ಆತ್ಮದ ಭಾವವನ್ನು ಶುದ್ಧಿಯಾಗಿರಿಸಿಕೊಂಡು ಯಾವುದೇ ಕಾರ್ಯ ಮಾಡಿದರೂ ಭೋಗಬಂಕೇಶ್ವರ ಲಿಂಗದ ಸಂಪರ್ಕಕ್ಕೆ ಬಂದು ಆತನ ಸಂಗದಲ್ಲಿ ಸುಖವಾಗಿರುತ್ತೇನೆಂದು ಲಿಂಗ ತಂದೆಗಳು ಹೇಳುತ್ತಾರೆ.  

      ಆತ್ಮಭಾವಶುದ್ದಿಯಿಂದ ಕಾಯಕ ಮಾಡಬೇಕು.   ಹಾಗೆ ಮಾಡಿದ ಸತ್ಕ್ರಿಯೆಗಳೆಲ್ಲವೂ ನಮ್ಮನ್ನು ಪರಮಾತ್ಮನತ್ತ ಕರೆದೊಯ್ಯುವಲ್ಲಿ ಸಹಕಾರಿಯಾಗುತ್ತವೆ.  ಹಾಗೂ ಆತನ ಸಂಗದಲ್ಲಿ ನಿರಂತರ ಸುಖಾನುಭವ ಪಡೆಯುತ್ತೇವೆಂದು ಲಿಂಗ ತಂದೆಯವರು ಹೇಳುತ್ತಾರೆ.   ಲೌಕಿಕದಲ್ಲಾಗಲಿ, ಪಾರಮಾರ್ಥಿಕದಲ್ಲಾಗಲಿ ವ್ಯವಹರಿಸುವಾಗ ಪ್ರತಿಯೊಂದನ್ನು ಸಾರಾಸಗಟಾಗಿ ನಂಬದೇ, ಪರೀಕ್ಷಿಸಿ ಪ್ರಮಾಣಿಸಿ ನೋಡಬೇಕು.   ಇದನ್ನು ಎರಡು ದೃಷ್ಟಾಂತಗಳ ಮೂಲಕ ವಚನಕಾರರು ಸ್ಪಷ್ಟಪಡಿಸುತ್ತಾರೆ.   ಮರದೊಳಗೆ, ಮತ್ತು ಕಲ್ಲಿನೊಳಗೆ ಬೆಂಕಿಯಿದ್ದರೂ ಅದು ತನ್ನಷ್ಟಕ್ಕೆ ತಾನೇ ಹೊತ್ತಿ ಉರಿಯಲಾರದು, ಬೆಳಕು ಚೆಲ್ಲಲಾರದು.   ಈ ಎರಡೂ ವಸ್ತುಗಳಲ್ಲಿ ಬೆಂಕಿ ಇದ್ದರೂ ಅದು ಹೊರಬರಲು ಮತ್ತೊಂದು ವಸ್ತುವಿನ ಸಂಯೋಗದ ಅವಶ್ಯಕತೆ ಇದೆ.   ಅದರಂತೆ ಮೇಲ್ನೋಟಕ್ಕೆ ಭಕ್ತಿ, ವೈರಾಗ್ಯಗಳು ಸರಿಯನಿಸಿದರೂ  ಚೆನ್ನಾಗಿ ಪರೀಕ್ಷಿಸದೆ, ಪ್ರಮಾಣಿಸದೆ ಒಪ್ಪಿಕೊಳ್ಳಬಾರದು.  ‘ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು’  ಎಂಬ ಗಾದೆಯಂತೆ ಸತ್ಯವಿರಲಿ, ಮಿಥ್ಯವಿರಲಿ ಚೆನ್ನಾಗಿ ಪರೀಕ್ಷಿಸಿ ನಂತರ ಒಂದು ನಿರ್ಧಾರಕ್ಕೆ ಬರಬೇಕು.  ಯಾಕೆಂದರೆ ಬಹಳಷ್ಟು ಭಕ್ತಿ ಮತ್ತು ವಿರಕ್ತಿಗಳು ತೋರಿಕೆಯ ಡಾಂಬಿಕ ಆಚರಣೆಗಳಾಗಿರುವ ಸಾಧ್ಯತೆಗಳೇ ಹೆಚ್ಚು.    ಇವುಗಳ ಮೂಲಕ ಮುಗ್ಧ ಜನರನ್ನು ಶೋಷಣೆಗೀಡು ಮಾಡುವ ಸಂಭವವಿದೆ.   ಹೀಗೆ ಇಂಥವರ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕೆಂದು ಲಿಂಗತಂದೆಗಳು  ಪದೇಪದೇ ಎಚ್ಚರಿಸುತ್ತಾರೆ.   ಭಕ್ತಿ, ವೈರಾಗ್ಯ, ಜ್ಞಾನ ಇತ್ಯಾದಿಗಳ ಸತ್ಯಾಸತ್ಯತೆಗೆ ಸಂಬಂಧಿಸಿದಂತೆ ಗುರು – ಲಿಂಗ – ಜಂಗಮರನ್ನು (ಅರಿವು , ಆಚಾರ,ಅನುಭಾವ) ಪರೀಕ್ಷೆಗೊಳಪಡಿಸುತ್ತಾರೆ.  (ಅಂದರೆ ನಮ್ಮ ಅರಿವು, ಆಚಾರ ಅನುಭವಗಳನ್ನು ಸ್ವತಹ ನಾವೇ ಪರೀಕ್ಷೆಗೊಳಪಡಿಸಬೇಕು.) ಗುರು, ಲಿಂಗ ಜಂಗಮರು ವೇಷಧಾರಿಗಳಾಗಿ ಕುಟಿಲರು ಸ್ವಾರ್ಥಿಗಳು ಮೋಸಗಾರರು ಆಗಿಬಿಟ್ಟಿದ್ದಾರೆ.  ಅವರಿಂದ ಮಾರ್ಗದರ್ಶನ ಪಡೆದವರ ಭಕ್ತಿ ವಿರಕ್ತಿಗಳು ವ್ಯರ್ಥವಾಗಿ ಬಿಡುತ್ತವೆ.   ತೂತು ಬಿದ್ದ ಮಡಿಕೆಯಲ್ಲಿ ನೀರು ತುಂಬಿದಂತೆ,  ಸೂತ್ರ ಹರಿದ ಬೊಂಬೆಯಂತೆ,  ಕೆಟ್ಟ ದೃಷ್ಟಿಯ ನೋಟದಂತೆ ಅವರುಗಳ ಸಾಧನೆ ಶೂನ್ಯವಾಗಿ ನಿಷ್ಪಲವಾಗುತ್ತವೆ.   ಇವರು ಮಾಡುವ ಭಕ್ತಿ ವಿರಕ್ತಿಗಳ ರೀತಿಯು , ಸಸಿಯ ಬೇರನ್ನು ಮೇಲೆ ಮಾಡಿ, ಅದರ ತುದಿಯನ್ನು ನೆಲದಲ್ಲಿ ಹೂಳಿ ನೀರು ಹಾಕಿ ಬೆಳೆಸುವವನ ಸ್ಥಿತಿಯoತಾಗುತ್ತದೆ.

      ಹೀಗೆ ಭಾವಶುದ್ಧಾತ್ಮನಾಗಿ ಪರಮಾತ್ಮನ ಸ್ಮರಣೆ ಮಾಡುತ್ತಾ ಕಾರ್ಯಪ್ರವೃತ್ತನಾದರೆ ಆತನಿಗೆ ಭೋಗ ಬಂಕೇಶ್ವರ ಲಿಂಗದ ಸಂಗ ದೊರೆತು ಸದಾ ಸುಖಿಯಾಗುತ್ತಾನೆಂದು ಲಿಂಗತಂದೆಯವರು  ಹೇಳುತ್ತಾರೆ.   ಒಟ್ಟಿನಲ್ಲಿ ನಾವೆಲ್ಲರೂ  ಸುಖ ಜೀವನ ನಡೆಸಬೇಕೆಂಬುದು ಲಿಂಗತಂದೆಯವರ ಆಶಯವಾಗಿದ್ದು, ಅದಕ್ಕಾಗಿ ನಮ್ಮಿಂದ ಸದಾಕಾಲ  ಸತ್ಕ್ರಿಯೆಗಳು ಜರುಗಬೇಕು.   ಪ್ರತಿಯೊಂದನ್ನು ಚೆನ್ನಾಗಿ ಪರೀಕ್ಷಿಸಿ ಪ್ರಮಾಣಿಸಿ ಸ್ವೀಕರಿಸಬೇಕು.   ದುಡುಕಿ ಒಪ್ಪಿ ಕಷ್ಟಕ್ಕೀಡಾಗಬಾರದೆಂಬುದು ಲಿಂಗತಂದೆಯವರ ಆಶಯವಾಗಿದೆ

———————————————-

ಪ್ರೊ. ಜಿ ಎ ತಿಗಡಿ

Leave a Reply

Back To Top