ಡಾಕ್ಟರ ಲಕ್ಷ್ಮಣ ಕೌಂಟೆ ಅವರ “ಋಷ್ಯಶೃಂಗ ಕಾದಂಬರಿಯ ಒಂದು ಅವಲೋಕನ.

ಪುಸ್ತಕ ಸಂಗಾತಿ

ಡಾಕ್ಟರ ಲಕ್ಷ್ಮಣ ಕೌಂಟೆ ಅವರ

“ಋಷ್ಯಶೃಂಗ ಕಾದಂಬರಿಯ

ಅವಲೋಕನ

ನರಸಿಂಗರಾವ್ ಹೇಮನೂರ

ಕಲ್ಯಾಣ ಕರ್ನಾಟಕದ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾದ ಡಾಕ್ಟರ್ ಲಕ್ಷ್ಮಣ ಕೌಂಟೆಯವರು ಈ ಭಾಗದ ಶ್ರೇಷ್ಠ ಕಾದಂಬರಿಕಾರರು. ಈ ವರೆಗೆ ಅವರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಆವುಗಳಲ್ಲಿ  ಕಾದಂಬರಿಗಳದ್ದೆ ಸಿಂಹಪಾಲು. ಅವರ ಕಾದಂಬರಿಗಳ ಹರಹು ಹೆಚ್ಚಾಗಿ ಸಾಮಾಜಿಕ, ಐತಿಹಾಸಿಕ,ಪೌರಾಣಿಕ ಮಹಾಕಾವ್ಯಗಳ ಕುರಿತಂತಿದೆ.

ಇತ್ತೀಚೆಗೆ ಕಲಬುರಗಿ ವೀರಶೈವ ಕಲ್ಯಾಣ ಮಂಟಪದಲ್ಲಿ, ನೃಪತುಂಗ ಅಧ್ಯಯನ ಸಂಸ್ಥೆ, ಸೇಡಂ,  ದಿ.10.8.23ರಂದು ಆಯೋಜಿಸಿದ ಸಮಾರಂಭದಲ್ಲಿ ಅವರ 11 ಕಾದಂಬರಿಗಳು ಲೋಕಾರ್ಪಣೆ ಗೊಂಡವು. ಅಂದು ಬಿಡುಗಡೆಯಾದ ಅವರ “ಋಷ್ಯಶೃಂಗ’ ಕಾದಂಬರಿಯನ್ನು ಇಡಿಯಾಗಿ ಓದಿ ಮುಗಿಸಿದೆ. ಮುಗಿಸಿದೆ ಅಂದರೆ ಅದು ನನ್ನನ್ನು ಎಡೆಬಡದೇ ಓದಿಸಿ ಕೊಂಡು ಹೋಯಿತು. ಅದ್ಭುತ ಕಥಾ ವಸ್ತು; ಹಾಗೆಯೆ ಅದ್ಭುತವಾದ ಪಾತ್ರಗಳು ಮತ್ತು ಇಂಥ ಐತಿಹಾಸಿಕ ಕಥಾನಕವನ್ನು ಅತ್ಯಂತ ಕಲಾತ್ಮಕವಾಗಿ ನಿರೂಪಿಸಿದ ಅವರ ಅದ್ಭುತ ಶೈಲಿ. ವಿಭಾಂಡಕ, ಋಷ್ಯಶೃಂಗ, ರೋಮಪಾದ, ಹೇಮಪ್ರಭೆ, ಓಜಸ್ವತಿ ಇವರೆಲ್ಲರ ಪಾತ್ರಗಳಲ್ಲಿ ಒಳಹೊಕ್ಕು ಅವರ ಮನದಾಳದ  ತೊಳಲಾಟ, ತಳಮಳಗಳನ್ನು ಬಹು ಸಹಜವಾಗಿ ಚಿತ್ರಿಸಿದ ಕೌಂಟೆ  ಅವರ ಅಗಾಧ ಪ್ರತಿಭೆಗೆ ಶರಣು ಶರಣಾರ್ಥಿಗಳು. ಕ್ಕಾದಂಬರಿಯಲ್ಲಿ ನಿಸರ್ಗ ರಮಣೀಯ ದೃಶ್ಯಗಳನ್ನು ರಸವತ್ತಾಗಿ ಬಣ್ಣಿಸಿದ್ದಾರೆ. ಜೊತೆಗೆ ಸಂದರ್ಭಾನುಸಾರ ಸಂಸ್ಕೃತ ಸುಭಾಷಿತಗಳನ್ನು ಉಲ್ಲೇಖಿಸಿರುವರು. ಅವರದು ಅಪಾರವಾದ ಅಧ್ಯಯನ. ಕೌಶಕಿ ನದಿಯ ತಟದ ಕಾನನದಲ್ಲಿರುವ  ಪರ್ಜನ್ಯವಶಿಕನಾದ ಋಷ್ಯಶೃಂಗನನ್ನು ಚಂಪಾಪೂರ ಪ್ರದೇಶಕ್ಕಡರಿದ ಬರಮುಕ್ತಗೊಳಿಸಲು ಓಜಸ್ವತಿ ತನ್ನ ಮೋಹಜಾಲವನ್ನು ಬೀಸಿ ನಾಡಿಗೆ ಕರೆತಂದ ಪರಿಮಿತವಾದ ಕಥಾವಸ್ತುವನ್ನು  318 ಪುಟಗಳಲ್ಲಿ ವಿಸ್ತರಿಸುತ್ತಾ ಹೋದದ್ದು ಕಾದಂಬರಿ ಕ್ಷೇತ್ರದಲ್ಲಿ ಕೌಂಟೆಯವರ ಅನುಪಮ ಸಾಧನೆಗೆ ಸಾಕ್ಷಿಯಾಗಿದೆ.

ಕಾದಂಬರಿಯ ಪ್ರಾರಂಭದ ತಮ್ಮಎರಡು ಮಾತುಗಳಲ್ಲಿ ಅವರು ಯಾವ ಭಿಡೆಯಿಲ್ಲದೆ ಬರೆದ ಧಿಟ್ಟ ನುಡಿಗಳೂ ಅವರು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದ ಸ್ವಾಭಿಮಾನದ  ಸಂಕೇತವಾಗಿದ್ದು ತುಂಬಾ ಹಿಡಿಸಿದವು. ಡಾಕ್ಟರ್ ಕ್ಕೌಂಟೆ ಯವರು ಎಂದೂ ಯಾವ ಪ್ರಸಿದ್ಧಿ ಪ್ರಶಸ್ತಿಗಳಿಗೆ ಹಿಂದು ಬೀಳದೆ ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತೆ ಆಳಂದ ತಾಲೂಕಿನ ತಮ್ಮ ಊರು ಕೊರಲ್ಲಿಯಲ್ಲಿ ವಿಶ್ರಾಂತ ಜೀವನವನ್ನು ನಡೆಸುತ್ತಿರುವರು. ಅವರ ಅದ್ವಿತೀಯ ಸಾಧನೆಗೊಂದು ಸಲಾಂ.


ನರಸಿಂಗರಾವ್ ಹೇಮನೂರ

One thought on “ಡಾಕ್ಟರ ಲಕ್ಷ್ಮಣ ಕೌಂಟೆ ಅವರ “ಋಷ್ಯಶೃಂಗ ಕಾದಂಬರಿಯ ಒಂದು ಅವಲೋಕನ.

Leave a Reply

Back To Top