ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಹಸಿವೆಂಬ ತಹತಹಿಕೆಯೂ :

ಬದುಕೆಂಬ ಸೊಗಸು..

ಅವನು ನಸುಕಿನಲ್ಲಿಯೇ ಎದ್ದು, ದನಗಳಿಗೆ ನೀರು ಕುಡಿಸಿ, ಮೇವು, ಹಿಂಡಿ ಹಾಕುತ್ತಾನೆ. ನಂತರ ಕೊಟ್ಟಿಗೆಯ ಸ್ವಚ್ಚತೆ,ಹೊಲ ಗದ್ಧೆಗಳಿಗೆ ಹೋಗುವುದು..

ಇನ್ನೊಬ್ಬ  ಕೈಯಲ್ಲಿ ಪ್ಲಾಸ್ಟಿಕ್ ಚೀಲ ಹಿಡಿದು, ಓಣಿ ಓಣಿ ಸುತ್ತತ್ತಲೇ ಚಿಂದಿ ಆಯುವ ಕಾಯಕಕ್ಕೆ ತನ್ನ ಸಂಸಾರವನ್ನು ಕರೆದುಕೊಂಡು ಹೋಗುತ್ತಾನೆ..

ಒಬ್ಬ ಹುಡುಗ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಾ ಓದಿನಲೂ ಮುಂದೆ ಇದ್ದಾನೆ ಏನೋ ಸಾಧಿಸುತ್ತೇನೆ ಎನ್ನುವ ಛಲ ದೊಂದಿಗೆ ಮತ್ತು ಪರೀಕ್ಷೆಯಲ್ಲಿಯೂ ಕೂಡ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗುತ್ತಾನೆ

ಮೇಲಿನ  ಸನ್ನಿವೇಶಗಳು ಕಾಲ್ಪನಿಕವಲ್ಲ ವಾಸ್ತವ. ಒಂದು ತನ್ನ ಹಸಿವಿನ ಜೊತೆಗೆ ಇನ್ನೊಬ್ಬರ ಹಸಿವೆಗೆ ಬೆವರು ಸುರಿಸುವ ಪರಿ…ಇನ್ನೊಂದು ಬದುಕಿಗಾಗಿ ಹಪಾಹಪಿಸಿ ಹಸಿವೆಂಬ ಹೆಬ್ಬಾವು ಕೊಲ್ಲಲು ಚಿಂದಿ ಆಯುವುದೇ ಅನಿವಾರ್ಯ ಪರಿಸ್ಥಿತಿಯಾಗಿಸಿಕೊಂಡ ಕುಟುಂಬ…!!

ಓದುವ ಹಪಾಹಪಿ ಹಸಿವಾಗಬೇಕು. ಹಾಗಾದರೆ ಹಸಿವು ಎಂದರೇನು..? ಹಸಿವು ಎಂದರೆ ಕೇವಲ ಹೊಟ್ಟೆಯ ಹಸಿವು ಮಾತ್ರ ನಾ…?  ಅಲ್ಲವೇ ಅಲ್ಲ !!  ಹಸಿವು ಎಂದರೆ ಮಾನಸಿಕ, ದೈಹಿಕ, ಜೈವಿಕ, ಸಾಂಸ್ಕೃತಿಕ, ಸಾಹಿತ್ಯಿಕ…. ಹಸಿವಿರಬೇಕು.

ಹಾಗಾದರೆ ಆಯಾ ಕ್ಷೇತ್ರಗಳಲ್ಲಿ ಯಾವ ವ್ಯಕ್ತಿ ದೊಡ್ಡ ಪ್ರಮಾಣದಲ್ಲಿ ಸಾಧನೆ ಮಾಡುತ್ತಾನೆಯೋ ಆತನ ಮನಸ್ಸು ಆ ಕ್ಷೇತ್ರದ ಆಗುಹೋಗುಗಳ ಬಗ್ಗೆ ತಿಳುವಳಿಕೆ ಇರಬೇಕು. ಅದು ನನ್ನ ಅಗತ್ಯಕ್ಷೇತ್ರವೆಂದು ಅರಿತಾಗ ಮಾತ್ರ ಎಂತಹ ಕಷ್ಟ ಪ್ರಸಂಗಗಳಲ್ಲಿಯೂ  ಸವಾಲುಗಳಿಗೆ ಎದೆಯೊಡ್ಡುತ್ತಾನೆ. ಆಗ ಮಾತ್ರ ಒಬ್ಬ ಉತ್ತಮ ಸಾಧಕನಾಗಬಲ್ಲ..!!  

ನಮ್ಮಲ್ಲಿ ‘ಹಸಿವು’ ಎನ್ನುವ ಪದವನ್ನು ಸೀಮಿತ ಅರ್ಥದಲ್ಲಿ ಬಳಸಿರುವ ವಾಡಿಕೆಯುಂಟು, ಕೇವಲ ಹೊಟ್ಟೆ ತುಂಬಿಕೊಳ್ಳುವುದಷ್ಟೇ ಹಸಿವು ಅಲ್ಲ..!  ನಮ್ಮ ಮನಸ್ಸು, ಬುದ್ಧಿ, ತಾರ್ಕಿಕತೆ, ಕ್ರಿಯಾಶೀಲತೆ ಎಲ್ಲವನ್ನು ನಮ್ಮೊಳಗಾಗಿಸಬೇಕೆಂದರೆ ಅದು ನಮ್ಮೊಳಗಿನ  ಮನಸ್ಸು ಹಸಿವಿನಿಂದ ಬಳಲಬೇಕು..! ಆಗ ಮಾತ್ರ ಆಯಾ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ.  ನಮ್ಮ ಭಾರತೀಯ ಸಂಸ್ಕೃತಿಕ ಪರಂಪರೆಯಲ್ಲಿಯಾಗಲಿ, ಜಾಗತಿಕ ಸಾಂಸ್ಕೃತಿಕ ಪರಂಪರೆಯಲ್ಲಾಗಲಿ ದೊಡ್ಡ ದೊಡ್ಡ ಸಾಧನೆ ಮಾಡಿದವರೆಲ್ಲರೂ ಅವರು, “ಆ ಕ್ಷೇತ್ರ ನನಗೆ ತುಂಬಾ ಅಗತ್ಯ ಆ ಕ್ಷೇತ್ರಕ್ಕೆ ನಾನು ದೊಡ್ಡ ಸಾಧನೆಯನ್ನು ಮಾಡುವುದರ ಮೂಲಕ ಯಾರು ಮರೆಯಲಾರದ  ಕಾಣಿಕೆಯನ್ನು ನೀಡಬೇಕು, ಅದು ಜನರ ಸಾಮಾಜಿಕ ಬದುಕನ್ನು ಬದಲಾಯಿಸಬೇಕು”  ಎನ್ನುವ ತುಡಿತದೊಂದಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.  ಆಗ ಮಾತ್ರ ಹಸಿವೆಂಬ ತಹತಹಿಕೆಗೆ ನಿಜವಾದ ಅರ್ಥವನ್ನು ಪಡೆದುಕೊಳ್ಳುತ್ತದೆ.

 ಒಬ್ಬ ಯುವ ಸಾಹಿತಿಯಾದವನು ತನಗನಿಸಿದನ್ನು, ತನಗೆ ದಕ್ಕಿದ ಅನುಭವವನ್ನು  ಕೇವಲ ಗೀಚುತ್ತ ಕೂಡುವುದು ಅಷ್ಟೇ ಅಲ್ಲ..! ಆತನಿಗೊಂದಿಷ್ಟು ಓದುವ ಹಂಬಲವಿರಬೇಕು, ಸುತ್ತಮುತ್ತಲಿನ ಪರಿಸರದ ಅರಿವಿರಬೇಕು, ಸಾಮಾಜಿಕ ಪ್ರಜ್ಞೆ ಇರಬೇಕು, ಸಾಮಾಜಿಕ ಆಗುಹೋಗುಗಳಿಗೆ ಪ್ರತಿಸ್ಪಂದಿಯಾಗಿರಬೇಕು, ಯಾವ ವ್ಯಕ್ತಿಗೆ ಸಮಾಜಿಕ ಬದ್ಧತೆ ಇರುತ್ತದೆಯೋ ಆ ವ್ಯಕ್ತಿ ಒಬ್ಬ ಉತ್ತಮ ಬರಹಗಾರನಾಗಬಲ್ಲ ಎಂಬ ಅರಿವಿದ್ದಾಗ ಮಾತ್ರ ಬರೆದ ಬರಹಕ್ಕೆ ಬೆಲೆ ಬರುತ್ತದೆ.

 ಹಾಗೆಯೇ ಒಬ್ಬ ಕ್ರಿಯಾಶೀಲ ಕೃಷಿಕ ಹಗಲು, ರಾತ್ರಿ, ಮಳೆ, ಚಳಿ ಎನ್ನದೆ ವೈಜ್ಞಾನಿಕ ಅವಿಷ್ಕಾರಗಳನ್ನು ಬಳಸಿಕೊಂಡು ಕೃಷಿಯನ್ನು ಮಾಡಿದ್ದೆಯಾದರೇ  ಆತ ಉತ್ತಮವಾದ ಪ್ರಗತಿಪರ ರೈತನಾಗಬಲ್ಲ.  

ಒಬ್ಬ ಕ್ರೀಡಾಪಟು ಹಗಲು ರಾತ್ರಿಯನ್ನದೆ ಸರಿಯಾಗಿ ಅಭ್ಯಾಸ (ಪ್ರಾಕ್ಟೀಸ್) ವನ್ನು ಮಾಡಿದರೆ, ಉತ್ತಮ ಕ್ರೀಡಾಪಟುವಾಗಬಲ್ಲ.

ಸಮಾಜಮುಖಿ ಕೆಲಸಗಳಿಗೆ ಜನರನ್ನು ಸದಾ ಸ್ಪಂದಿಸುವ ವ್ಯಕ್ತಿ ಉತ್ತಮ ರಾಜಕಾರಣಿಯಾಗಬಲ್ಲ. ಜನರು ತನ್ನ ಬಳಿಗೆ ಸಮಸ್ಯೆಯನ್ನು ಹೇಳಿಕೊಂಡು  ಒಬ್ಬ ಅಧಿಕಾರಿಯ ಬಳಿ ಹೋದಾಗ, ತನ್ನ ಅಧಿಕಾರದ ದರ್ಪತೋರದೆ ಅದು “ತನ್ನ ಕರ್ತವ್ಯ” ಎಂದು ಭಾವಿಸಿಕೊಂಡು ಅವರ ಸಮಸ್ಯೆಗಳನ್ನು ಬಗೆಹರಿಸಿದರೆ ಆತನೊಬ್ಬ ಜನಪರ ಅಧಿಕಾರಿಯಾಗಬಲ್ಲ.

ನಮ್ಮ ಕರ್ತವ್ಯ – ನಮ್ಮ ಪ್ರಜ್ಞೆ ನಮ್ಮೊಳಗಿದ್ದಾಗ ಮಾತ್ರ ಇಂತಹ ಸಾಧನೆಯ ಹಸಿವು ತಹತಹಿಕೆಯು ಅರ್ಥ ಪಡೆಯುತ್ತದೆ.

ಕೇವಲ ಬದುಕು ಸೊಗಸಾಗಿರಬೇಕು,  ನಾನು ಹೆಸರು ಮಾಡಬೇಕು, ಪ್ರಸಿದ್ಧಿಯಾಗಬೇಕು, ಒಳ್ಳೆಯ ಹುದ್ದೆಯನ್ನು ಪಡೆದುಕೊಳ್ಳಬೇಕು, ಸಮಾಜದಲ್ಲಿ ನನ್ನನ್ನು ಎಲ್ಲರೂ ಗುರುತಿಸಬೇಕು.    “ನುಡಿದಂತೆ ನಡೆಯಬೇಕು” ಆಗ ಮಾತ್ರ ಹಸಿವೆಂಬ ತಹತಹಿಕೆಯು ನಮ್ಮ ಅನುಭವಗಳ ಮೂಲಕ ಬರಹಗಳು ಸಾಧನೆಗಳಾಗಬೇಕು.  ಬೇರೆಯವರಿಗೆ ಸ್ಪೂರ್ತಿದಾಯಕವಾಬಲ್ಲವು.  ನಾವು ಮಾತನಾಡುವುದು ಅಥವಾ ನುಡಿಯುವುದು ಒಂದಾದರೇ ಬದುಕುವುದು ಇನ್ನೊಂದು ರೀತಿಯಾದರೆ ನಮ್ಮನ್ನು ಯಾರು ಇಷ್ಟಪಡುವುದಿಲ್ಲ. ಮತ್ತು ನಮ್ಮನ್ನು ನೋಡುವ ದೃಷ್ಟಿಕೋನ ತೀರ ಕೆಳಮಟ್ಟದಾಗಿರುತ್ತದೆ.

ಅಂತಹ ವ್ಯಕ್ತಿಯಿಂದ ರಚಿತವಾದ ಕೃತಿಗಳಾಗಲಿ, ಸಾಧನೆಗಳಾಗಲಿ, ಸಂಶೋಧನೆಗಳಾಗಲಿ ಮತ್ತು  ಹೆಜ್ಜೆ ಗುರುತುಗಳಿಗೆ ಬೆಲೆ ಇರುವುದಿಲ್ಲ. ಸಾಮಾಜಿಕ ಮೌಲ್ಯ, ಮಾನವೀಯ ಪ್ರಜ್ಞೆ, ಮನುಷ್ಯತ್ವ ನಮ್ಮ ಎದೆಯೊಳಗೆ ಬಿತ್ತಿಕೊಂಡು ಸಾಧನೆಯ ಶಿಖರವನ್ನು ಹತ್ತುವಾಗ ಹಲವಾರು ಎಚ್ಚರಿಕೆಯ ನಡೆಗಳು ನಮ್ಮೊಳಗೆ ಮೂಡಬೇಕು. ಇಲ್ಲವಾದರೆ ಬೇರೆಯವರ ದೃಷ್ಟಿಯಲ್ಲಿ ನಾವು ಸಣ್ಣವರಾಗಿ ಬಿಡುತ್ತೇವೆ.

 ‘ಸಣ್ಣ’ ವರಾಗುವುದು ಎಂದರೆ ನಮ್ಮ ವ್ಯಕ್ತಿತ್ವವನ್ನು ನಾವೇ ಹಾಳು ಮಾಡಿಕೊಂಡಂತೆ. ಅಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳದೆ, ನಮ್ಮ ಮನಸ್ಸಿಗೆ ಹಿತವೆನಿಸುವುದು ;  ಬೇರೆಯವರ ಮನಸ್ಸಿಗೂ ಹಿತವಾಗುವ  ರೀತಿಯಲ್ಲಿ ನಮ್ಮ ವರ್ತನೆಗಳು ಇರಬೇಕು.  ಆ ರೀತಿಯ ದಾರಿಯಲ್ಲಿ ಹಲವಾರು ಕಲ್ಲು ಮುಳ್ಳುಗಳು ಸಹಜವಾಗಿ ಬರುತ್ತವೆ. ಅವುಗಳನ್ನು ತುಳಿದು ನೋವುಗಳನುಂಡು ನಡೆಯಬೇಕು ಇಲ್ಲವಾದರೆ ಆ ಮುಳ್ಳುಗಳನ್ನು ಕಲ್ಲುಗಳನ್ನು ಎತ್ತಿ ಬಿಸಾಕಬೇಕು. ಬೀಸಾಕುವ ಸಾಮರ್ಥ್ಯವು ನಮ್ಮೊಳಗೆ ಇರಬೇಕು ಇಲ್ಲದೆ ಹೋದರೆ ನಾವು ಗುರಿಯ ಕಡೆಗೆ ಹೆಜ್ಜೆ ಹಾಕದೆ ಇರುವ ಕಡೆಯಲ್ಲಿ ಉಳಿಯಬೇಕಾಗುತ್ತದೆ.

ನಮ್ಮ ಪುರಾಣ ಕಥೆಗಳಲ್ಲಿಯೂ ಕೂಡ ಅಂತಹ ಹಲವಾರು ಸಾಧಕ ವ್ಯಕ್ತಿತ್ವವುಳ್ಳ ವ್ಯಕ್ತಿಗಳನ್ನು ನೋಡುತ್ತೇವೆ. ಮಹಾಭಾರತದಲ್ಲಿ ಬರುವ ಮಹಾಪಾತ್ರವೆಂದರೆ ಕರ್ಣ !!  ಬದುಕಿನೂದ್ದಕ್ಕೂ ನೋವುಗಳನ್ನೆ ಅನುಭವಿಸಿದ ವ್ಯಕ್ತಿಯಾದರೂ ಆತನ ಛಲ, ಹೃದಯವಂತಿಕೆ, ಸ್ನೇಹತನ ನಮ್ಮೊಳಗೆ ಸದಾ ಅಚ್ಚೊತ್ತಿದೆ.

 ಹಾಗೆಯೇ ಏಕಲವ್ಯ ‘ಗುರುಭಕ್ತಿ’ ಏನು ಎನ್ನುವುದನ್ನು ತೋರಿಸಿಕೊಟ್ಟ ಮಹಾನ್ ವ್ಯಕ್ತಿ. ಅವಮಾನಗಳ  ನೋವುಗಳನ್ನೇ ಅನುಭವಿಸಿ, ಭಾರತಕ್ಕೆ ಬೇಕಾದ ಶ್ರೇಷ್ಠ ಆಡಳಿತಾತ್ಮಕ ಗ್ರಂಥ ನಮ್ಮ ‘ಸಂವಿಧಾನ’ ವನ್ನು ಕೊಡುಗೆಯಾಗಿ ನೀಡಿದ ಡಾ. ಬಿಆರ್ ಅಂಬೇಡ್ಕರ್ ಅವರು,  ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ್, ಸರ್ ಎಂ ವಿಶ್ವೇಶ್ವರಯ್ಯ….ಸಾವಿರಾರು ಮಾಹಾಸಾಧಕರು ಸ್ಪೂರ್ತಿಯಾಗಬೇಕು ನಮಗೆ..!!

 ಸ್ವಾತಂತ್ರ್ಯಕ್ಕಾಗಿ ಹೋರಾಡಿದ  ಹಲವಾರು ಮಹನೀಯರು ಅವರು ದೇಶವನ್ನು ಜನರಿಗೆ ಅರ್ಪಿಸಬೇಕು. ‘ಗುಲಾಮಗಿರಿಯಿಂದ ಮುಕ್ತಿಯಾಗಬೇಕು’ ಎಂಬ ಹಸಿವು ಅವರೊಳಗೆ ಇತ್ತು.

ಹೀಗೆ…

 ಅನೇಕ ವಿಜ್ಞಾನಿಗಳು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಪ್ರಜ್ಞೆಯುಳ್ಳ ಸಮಾಜಸೇವಕರು, ಆರ್ಥಿಕ ತಜ್ಞರು, ಅಧಿಕಾರಿ ವರ್ಗದವರು, ಜನಮಾನಸದ ರಾಜಕಾರಣಿಗಳು ಎಲ್ಲರೂ ತಮ್ಮ ಕುಟುಂಬಕ್ಕೆ ಪ್ರಾಧಾನ್ಯತೆ ಕೊಡದೆ ಸಮಾಜ, ಜನರು ಎನ್ನುವ ಉದಾತ್ತಧ್ಯೆಯದೊಂದಿಗೆ ಎಲ್ಲರ ಬದುಕನ್ನು ಸುಂದರಗೊಳಿಸಲು ಅವರು ಸಾಧನೆಯೆಂಬ ಹಸಿವಿನಿಂದಲೇ ಸಾಧನೆಯನ್ನ ಮಾಡಿದವರು..!! ಬದುಕು ಸುಂದರವಾಗಿರಬೇಕೆಂದರೆ ಮೊದಲು ನಾವು ಸಾಧನೆಯ ಹಸಿವಿನಿಂದ ಬಳಲಬೇಕು. ಹಸಿವಿನ ನಿಜವಾದ ಅರ್ಥ ಗೊತ್ತಾದವರಿಗೆ ಏನನ್ನಾದರೂ ಸಾಧನೆ ಮಾಡಬಲ್ಲರು.

ಹಸಿವಿನ ತೀವ್ರತೆ ವಿಶ್ವವಿದ್ಯಾಲಯವು ಕೂಡ ಪಾಠ ಕಲಿಸಲಾರದು ಎನ್ನುವ ಉದಾತ್ತ ಮಾತೊಂದು ಕೇವಲ ಹೊಟ್ಟೆಗಷ್ಟೇ ಅಲ್ಲ ಅದು ಮೆದುಳಿಗೂ ಕೂಡ ಸಂಬಂಧಿಸುತ್ತದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇಂದಿನ ಆಧುನಿಕ ಧಾವಂತದ ಕಾಲದಲ್ಲಿ ಸಾಧನೆಯನ್ನು ಮಾಡಲು ಮನಸ್ಸಿಲ್ಲದವರು ಯಾವ ಯಾವ ಒಳ ದಾರಿಯನ್ನ ಬಳಸಿಕೊಂಡು ಹುದ್ದೆ ಹಿಡಿಯುವುದನ್ನು ನೋಡಿದ್ದೇವೆ, ಒಳದಾರಿಗಳಿಂದ ಸ್ಥಾನಮಾನಗಳನ್ನು  ಪಡೆದಿರುವುದನ್ನು ನೋಡಿದ್ದೇವೆ. ಆದರೆ ಅವು ಕ್ಷಣಿಕ.  ನಮ್ಮ ಶ್ರಮದಿಂದ ನಮ್ಮ ಬೆವರಹನಿಯಿಂದ ಬಂದಿರುವುದು ಮಾತ್ರ ಶಾಶ್ವತವಾಗಿ ಉಳಿಯಬಲ್ಲದು ಮತ್ತು ಅದು ಗೌರವಕ್ಕೆ ಪಾತ್ರವಾಗಬಲ್ಲದು. ಅಂತಹ ಶ್ರಮದ ಬೆವರು ಹರಿಸಲು, ಸಾಧನೆಯ ಹಾದಿ ತುಳಿಯಲು,  ‘ಹಸಿವಿನಿಂದ’ ತಲ್ಲಣಗೊಳ್ಳಬೇಕು. ನಾವು ಆ ರೀತಿಯ ತಲ್ಲಣಗಳು ನಮ್ಮ ಬದುಕನ್ನು ಸುಂದರಗೊಳಿಸಬಲ್ಲವೂ… ಅಂತಹ ಹಸಿವು ನಿಮ್ಮದಾಗಲಿಯಂದು, ಹಸಿವಿನಿಂದ ನಿಮ್ಮ ಸಾಧನೆಯ ಶಿಖರ ಇನ್ನೂ ಎತ್ತರಕ್ಕೆ ಇರಲಿ. ನಮ್ಮ ಸಾಧನೆಗಳು ಇತರರಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಬಲ್ಲೆನು.—-


 ರಮೇಶ ಸಿ ಬನ್ನಿಕೊಪ್ಪ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

One thought on “

  1. ನಿಮ್ಮ ಅಂಕಣದ ಪ್ರತಿಯೊಂದು ಅಧ್ಯಾಯ ದಾರಿ ದೀಪದಂತೇ.
    ಅಭಿನಂದನೆಗಳು.

Leave a Reply

Back To Top