ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ.
“ಚಂದ್ರನೇಕೆ ನಕ್ಕ”
ಛಲ ಬಿಡದ ತ್ರಿವಿಕ್ರಮ
ವಿಕ್ರಮನ ಹಟವ ಕಂಡು
ದೂರ ಚಂದಿರನ
ಮುಟ್ಟುವ ಕನಸು
ನನಸಾಗುವುದ
ಕಂಡು ನಕ್ಕನಾ ಚಂದಿರ….
ಬರುವೆಯಾ ಬಾ
ನೀನೋ ನೆಲದ ಮೇಲೆ
ನಾನೋ ಅಂಬರದ ಲೀಲೆ
ಬರುವೆ ಹೇಗೆ ನನ್ನ ಬಳಿಗೆ
ಕಾಯುತಿರುವೆ ನಾನು
ಎನುತ ನಕ್ಕನಾ ಚಂದಿರ…
ಸಾವಿರ ಸಾವಿರ
ಯೋಜನದ ದಾರಿ ದೂರ
ತಲುಪಲಾರೆ ನೀನು ನನ್ನ
ತಟ್ಟಲಾರೆ ಹೃದಯವೆನ್ನ
ಮೆಟ್ಟಲಾರೆ ನೆಲವನೆನ್ನ
ಎನುತ ನಕ್ಕನಾ ಚಂದಿರ…
ತುಂಬು ಹೃದಯದ ಪ್ರೀತಿ
ಸ್ನೇಹ ತುಂಬಿಹ ರೀತಿ
ತೊರೆದೆಲ್ಲ ಭೀತಿ
ಒಲವಿನಿಂದ ಬಂದು
ನಿಂದ ಭುವಿಯ ಹೂವ
ಕಂಡು ನಕ್ಕನಾ ಚಂದಿರ…
ಸ್ನೇಹ ಕಡಲ ಹೊತ್ತು
ಪ್ರೇಮ ಸಿರಿಯ ಮುತ್ತು
ನಗುತ ಬಂದು ಎದುರು
ನಿಂತು ಒಳಗೆ ಬರಲೇ
ಎನುವ ಮೆಲ್ಲನುಲಿಯ
ಕೇಳಿ ನಕ್ಕನಾ ಚಂದಿರ…
ಪ್ರೀತಿ ಹೂವ ಭಾವಕೆ
ನಿತ್ಯ ನೆನೆವ ಜೀವಕೆ
ಸೋತು ಶರಣಾದ ಸ್ನೇಹಕೆ
ಬೆಳದಿಂಗಳ ಹಾಲ ಚೆಲ್ಲಿ
ಸ್ವಾಗತ ಶಶಿಯೆದೆಯಂಗಳಕೆ
ಎನುತ ನಕ್ಕನಾ ಚಂದಿರ…
ಇಂದಿರಾ ಮೋಟೆಬೆನ್ನೂರ.
One thought on “ಇಂದಿರಾ ಮೋಟೆಬೆನ್ನೂರ.”ಚಂದ್ರನೇಕೆ ನಕ್ಕ””