ಡಾ.ಜಿ. ಪಿ. ಕುಸುಮಾ ಮುಂಬಯಿ ಅವರ ಕವಿತೆ ನಿದ್ದೆ

ಕಾವ್ಯ ಸಂಗಾತಿ

ಡಾ.ಜಿ. ಪಿ. ಕುಸುಮಾ ಮುಂಬಯಿ

ನಿದ್ದೆ

ಬಾ ಎಂದರೆ ಬರದು
ಕೈಗೆಟುಕದ ನಿದ್ದೆ
ಕಣ್ಣ ಕಣಿವೆಯಿಂದಿಳಿದು
ಮಹಾಮೌನವ ದೂಡಿ
ನುಗ್ಗಿತೆಲ್ಲೋ ಕತ್ತಲೊಳಗೆ…

ಮನದ ಬಾಗಿಲಿಗಪ್ಪಲಿಸಿದ ಮೌನ
ತಂಗಲೊಲ್ಲದೆ
ಎಂದೋ ಮಡಿದ ಮಾತುಗಳನ್ನೆಬ್ಬಿಸಿ
ಮನದ ತುಂಬ ಇಳಿಬಿಟ್ಟು
ದವಡೆಗಳ ಸುತ್ತ ಗಿರಕಿ ಹೊಡೆಯಿಸಿತು

ರೆಪ್ಪೆಗಳ ಮೇಲೆ ಅಪ್ಪಳಿಸುವ ಕತ್ತಲಲ್ಲಿ
ಮೂಕ ಕನಸುಗಳು
ತಿರುಕನ ಕನಸುಗಳಾದವು
ಕತ್ತಲೆದೆಯಲ್ಲಿ ರಾತ್ರಿಯ ಪಯಣ
ಫೋನಿನೆದೆಯಲಿ ಮೆಸೇಜ್ಗಳ ಸದ್ದು

ರಾತ್ರಿ ಮುಗಿಯುವವರೆಗೂ
ಮೆಸೇಜುಗಳ ಕಟ್ಟುವವರು
ದಾಹದಿಂದ ಪರಿತಪಿಸುವ ಶರಧಿಯಂತಿದ್ದು
ಇನ್ನೂ ಮಲಗದೆ ಉಳಿದವರು
ಬಹಳಷ್ಟಿದ್ದರು

ನಿದ್ದೆ ಮೆಲ್ಲನೆ ಉಸುರಿತು
ನನ್ನನದು ಕಾಡುವ ಪರಿ ತಿಳಿಯದೆ?
ನಾ ಹೊಕ್ಕ ಮನದಲ್ಲೆಲ್ಲಾ
ಮೆಸೇಜ್ ಗಳೇ ತುಂಬಿವೆ..
ನನ್ನದೂ ನಿದ್ದೆಗೆಟ್ಟಿದೆ…

ಹಗ್ಗದ ಮೇಲಿನ ನಡಿಗೆಯಾಗಿದೆ.
ಬಾ ಎಂದರೆ ಹೇಗೆ ಬರಲಿ
ಒಂದರ ಮೇಲಿನ್ನೊಂದರ ಸವಾರಿ
ತಪ್ಪಿಸಿ….
ಬಾ ಎಂದರೆ ಹೇಗೆ ಬರಲಿ
ನಾನೂ ಈಗ ದುಬಾರಿಯಾಗಿದ್ದೇನೆ..


ಡಾ.ಜಿ. ಪಿ. ಕುಸುಮಾ, ಮುಂಬಯಿ

Leave a Reply

Back To Top