ಅಂಕಣ ಸಂಗಾತಿ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ಭಾರತ ಇನ್ನಷ್ಟು ಬೆಳಗಲಿ
ಭಾರತ ಪ್ರಕಾಶಿಸುತ್ತಿದೆ. ವಿಕ್ರಮ್ ಲ್ಯಾಂಡರ್ ಚಂದ್ರನನ್ನು ತಲುಪಿ ಇನ್ನೇನು ಪ್ರಗ್ಯಾನ್ ರೋವರ್ ಚಂದ ಮಾಮನ ಬಗ್ಗೆ ಎಲ್ಲಾ ವಿಷಯ ಕಲೆ ಹಾಕಿ ಭಾರತ ಅದನ್ನು ಪಡೆಯಲಿದೆ. ಚಂದ್ರನ ಮೇಲೆ ತಾನು ತಲುಪಿರುವ ಸುದ್ದಿ ನಾಲ್ಕು ಫೋಟೋಗಳನ್ನು ಕಳುಹಿಸುವ ಮೂಲಕ ಅದು ನಮಗೆ ನೀಡಿದೆ. ಚಂದ್ರನ ಒಂದು ದಿನ ಎಂದರೆ ಭೂಮಿಯ ಹದಿನಾಲ್ಕು ದಿನಗಳಂತೆ. ವಿಕ್ರಮ್ ಲ್ಯಾಂಡರ್ ಸ್ವಲ್ಪ ರೆಸ್ಟ್ ಮಾಡಲಿದೆ. ಕಾರಣ ಚಂದ್ರನಲ್ಲಿನ ಧೂಳಿನಿಂದ ಮುಕ್ತಿ ಸಿಗಲಿ ಅಂತ. ಇದೆಲ್ಲ ನಮಗೆ ವಿಜ್ಞಾನಿಗಳು ಕೊಟ್ಟ ಹೇಳಿಕೆ, ವಾರ್ತೆಗಳ ಮೂಲಕ ತಿಳಿದದ್ದು. ಇದರ ಮುಂದೆ ಮೊದಲೇ ಚಂದ್ರನಲ್ಲಿಗೆ ವ್ಯೋಮ ನೌಕೆಗಳನ್ನು ಕಳುಹಿಸಿದ್ದ ರಷ್ಯಾ, ಅಮೆರಿಕ, ಚೀನಾ ದೇಶಗಳ ಸಾಲಿಗೆ ಭಾರತ ಸೇರುತ್ತದೆ. ಭಾರತದ ಶಿಖರಕ್ಕೆ ಒಂದು ಗರಿ ಇದು. ಭಾರತ ಮುಂದುವರೆಯುತ್ತಿರುವ ರಾಷ್ಟ್ರ ಇನ್ನೂ ಕೂಡ. ಇಲ್ಲಿ ಅತಿ ಸಿರಿವಂತರು ಕೂಡಾ ಇದ್ದಾರೆ, ಏನೂ ಇಲ್ಲದೆ ಕಿತ್ತು ತಿನ್ನುವ ಬಡತನವೂ ಇದೆ. ಒಂದು ಹೊತ್ತಿನ ಊಟಕ್ಕಾಗಿ ಕಷ್ಟ ಪಡುವ, ಹಗ್ಗದ ಮೇಲೆ ನಡೆಯುವ, ತನಗೆ ತಾನೇ ಹಿಂಸೆ ಕೊಟ್ಟುಕೊಳ್ಳುವ, ಹೊರಲಾರದ ಹೊರೆ ಹೊರುವ, ಮೊಬೈಲ್ ಟವರ್ ಗಳನ್ನು ಕಟ್ಟುವಂತಹ ಕಷ್ಟದ ಕೆಲಸ ಮಾಡುವ, ನಿತ್ಯ ಕೂಲಿಯ ಜನ ಅಷ್ಟೇ ಅಲ್ಲದೆ ಮೈ ಮಾರಿಕೊಂಡು ಬದುಕುವ, ಪರರ ಮನೆಯ ಪಾತ್ರೆ ತೊಳೆಯುವುದು, ಬಟ್ಟೆ ಒಗೆದು ಅವರು ಕೊಟ್ಟದ್ದನ್ನು ತಿಂದು ಬದುಕುವ ಜನರೂ ಅದೆಷ್ಟೋ ಇದ್ದಾರೆ. ಬದುಕಲು ಕೂಡದೆ ಕಳ್ಳತನ ಮಾಡಿ, ಅವರಿವರಿಗೆ ಮೋಸ ಮಾಡಿ ಬದುಕುವವರು ಒಂದೆಡೆ ಆದರೆ, ದೊಡ್ಡ ದೊಡ್ಡ ಮಂತ್ರಿಗಳ, ಅಫೀಸರುಗಳ ಹಿಂದೆ ಹಿಂದೆ ಸುತ್ತುತ್ತಾ ಅವರ ಹಣದಲ್ಲೇ ಬದುಕುವ ಅಡ್ನಾಡಿ ಜನರೂ ನಮಗೆ ಸಿಗುತ್ತಾರೆ. ಒಟ್ಟಿನಲ್ಲಿ ಬದುಕು ಪ್ರತಿಯೊಬ್ಬರಿಗೂ ವಿಭಿನ್ನ. ಕೆಲವರಿಗೆ ಹಣದ ಹೊಳೆ ಹರಿದರೆ ಇನ್ನೊಬ್ಬ ಒಂದೊಂದು ರೂಪಾಯಿಗೂ ಪರದಾಡುತ್ತ ಇರುತ್ತಾನೆ. ಒಬ್ಬರ ಮನೆಯಲ್ಲಿ ನಾಲ್ಕೈದು ಗಾಡಿಗಳಿದ್ದರೆ ಇನ್ನೊಬ್ಬನಿಗೆ ಸೈಕಲ್ ಕೊಳ್ಳಲೂ ಸಾಧ್ಯವಾಗುವುದಿಲ್ಲ.
ಒಬ್ಬ ವರ್ಷಕ್ಕೆರಡು ಬಾರಿ ಐಷಾರಾಮಿ ಕಾರು ಬದಲಿಸಿದರೆ ಇನ್ನೊಬ್ಬ ವರ್ಷವಿಡೀ ಎರಡೇ ಬಟ್ಟೆಯಲ್ಲಿ ಜೀವನ ಸಾಗಿಸುತ್ತಾನೆ. ಇದು ಭಾರತದಲ್ಲಿ ಅಷ್ಟೇ ಅಲ್ಲ ಪ್ರಪಂಚದಲ್ಲೆಲ್ಲ ಹೀಗೆಯೇ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮ್ಮ ದೇಶ ಏನೇನೋ ಸಾಧನೆ ಮಾಡಿದ್ದರು ಕೂಡ ತಮ್ಮ ದೈಹಿಕ ಅನಾರೋಗ್ಯಕ್ಕೆ ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಎಲ್ಲರ ಬಳಿ ಸಾಮಾಜಿಕ ಜಾಲ ತಾಣಗಳ ಮೂಲಕ ಕೇಳಿ ತಮ್ಮ ಬದುಕುವ ಆಸೆ ವ್ಯಕ್ತ ಪಡಿಸುವ ಅದೆಷ್ಟು ಮಂದಿ ನಮ್ಮ ಮುಂದೆ ಇದ್ದಾರೆ! ಯಾಕೆಂದರೆ ನಮ್ಮ ಸುತ್ತಮುತ್ತ ನಮ್ಮನ್ನೂ ಸೇರಿಸಿ ಸಾಧಾರಣ ಜನರೇ ಹೆಚ್ಚು. ಕೆಲವರು ದಾನಿಗಳೂ ಇದ್ದಾರೆ. ಕೆಟ್ಟ ಜನರು ಮೋಸ, ದರೋಡೆ, ಕಳ್ಳತನ, ಕೊಲೆ, ಸುಲಿಗೆ ಮಾಡಿ ಜೀವಿಸುವವರು ಒಂದೆಡೆ ಆದರೆ ತಾನು ದುಡಿದ ಹಣದಲ್ಲಿ ವೃದ್ಧಾಶ್ರಮ, ವಿದ್ಯಾರ್ಥಿಗಳಿಗೆ ಶಾಲೆ, ಹಾಸ್ಟೆಲ್, ಉಚಿತ ವಿದ್ಯೆ, ಬಡವರಿಗೆ ನಿತ್ಯ ಬಳಕೆಯ ಸಾಮಾನು, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ , ರೋಗಿಗಳಿಗೆ ಸಹಾಯ ಮಾಡುವ ಉನ್ನತ ಹೃದಯಿ, ಉದಾರ ದಾನಿಗಳಿಗೂ ಕೊರತೆ ಇಲ್ಲ. ಪಾಪ ಪುಣ್ಯಗಳ ಬಗ್ಗೆ ನಂಬಿಕೆ ಇರುವವರು ಒಂದೆಡೆ ಆದರೆ ಇನ್ನೊಂದೆಡೆ ನಾವು ವೈಜ್ಞಾನಿಕ ಯುಗದಲ್ಲಿ ಇದ್ದೇವೆ, ಬೆಳಗ್ಗೆ ಪ್ರಾರ್ಥನೆ ಯಾಕೆ ಮಾಡಬೇಕು? ಸಾರ್ವಜನಿಕ ಪೂಜೆ ಸಲ್ಲದು, ಬೇಕಿದ್ದರೆ ಮನೆಯೊಳಗೆ ಕುಳಿತು ಒಬ್ಬನೇ ಪೂಜೆ ಮಾಡು ಎನ್ನುವ ಜನರೂ ಇರುವ ಈ ದೇಶದಲ್ಲಿ ಪ್ರತಿಯೊಂದು ಕಡೆಯೂ ವಿವಿಧತೆ. ಆ ವಿವಿಧತೆಯಲ್ಲಿ ಏಕತೆ ಇರಲಿ ಎಂಬುದು ನಮ್ಮ ಹಾರೈಕೆ.
ಭಾರತ ಹೊಳೆಯಲಿ, ಭಾರತ ಬೆಳಗಲಿ, ಭಾರತದ ಕೀರ್ತಿ ಪತಾಕೆ ಹಾರಲಿ, ಭಾರತ ವಿಶ್ವದ ನಂಬರ್ ವನ್ ರಾಷ್ಟ್ರ ಆಗಲಿ ಎಂಬುದು ಪ್ರತಿಯೊಬ್ಬ ಭಾರತೀಯನ ಕನಸಾಗಲಿ. ಆ ದಿಶೆಯಲ್ಲಿ ಜೀವನ ಸಾಗಲಿ. ನಾನೊಬ್ಬ ಸಿರಿವಂತ ಆದರೆ ಸಾಕು ಎಂಬ ಸ್ವಾರ್ಥ ಭಾವ ಬಾರದೆ ಇರಲಿ. ಪುಕ್ಕಟೆ ಸಿಗುವ ವಸ್ತು, ಹಣವನ್ನು ಬಯಸಿ ಜನ ತಮ್ಮ ಅಮೂಲ್ಯ ಮತವನ್ನು ಮಾರಿಕೊಳ್ಳದೆ ಇರಲಿ, ಉತ್ತಮ ನಾಯಕರು ಪ್ರತಿ ಹಂತದಲ್ಲಿ ಇರಲಿ. ಹೆಂಡ, ತುಂಡು, ಗುಂಡಿಗೆ ಜನ ದಾಸರಾಗದೇ ಇರಲಿ. ಜಾತಿ, ಮತ, ಮೀಸಲಾತಿಗಾಗಿ ಓಲಾ ಜಗಳ ಬಾರದೆ ಇರಲಿ. ಪ್ರಜಾ ರಭುತ್ವ ಯಶಸ್ವಿ ಆಗಲಿ ಬದಲಾಗಿ ಸ್ವಾರ್ಥಕ್ಕೆ ಉಪಯೋಗ ಆಗದೆ ಇರಲಿ.ವರ ಮಹಾಲಕ್ಷ್ಮಿ ಎಲ್ಲರ ಮೇಲೂ ಕೃಪೆ ತೋರಲಿ. ಹಣವಂತರ ಮನೆಯಲ್ಲಿ ಸೊಪ್ಪು , ತರಕಾರಿ, ಹಣ್ಣು ಕಸದ ತೊಟ್ಟಿ ಸೇರದೆ, ಬಡವರ ಹೊಟ್ಟೆ ತುಂಬುವ ಹಾಗಾಗಲಿ, ಎಲ್ಲರಿಗೂ ಆರೋಗ್ಯ ಭಾಗ್ಯ ಸಿಗಲಿ. ಆಸ್ಪತ್ರೆ ಬಿಲ್ಲು ಕಟ್ಟುವ ಶಕ್ತಿ ಬರಲಿ. ಸರ್ವರಿಗೂ ಓಣಂ ಹಬ್ಬದ ಶುಭಾಶಯಗಳನ್ನು ಕೋರುತ್ತಾ, ಚಂದ್ರನಲ್ಲಿ ಹೋದಂತೆ, ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ಜನರಿಗೂ ಜಯ ಸಿಗಲಿ, ಮನುಷ್ಯರ ಹೃದಯ ವಿಶಾಲವಾಗಿ ಬೆಳಗಿ ಬರಲಿ ಎಂಬ ಭಾವ ನಮ್ಮದು. ಭಾರತ ಇನ್ನಷ್ಟು ಬೆಳಗಲಿ,ನಾವೆಲ್ಲ ಒಂದೇ ಎನ್ನುವ ಭಾವ ಮೊಳಗಲಿ ಅಲ್ಲವೇ? ನೀವೇನಂತೀರಿ?
——————
ಹನಿ ಬಿಂದು
ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.
ಸುಪರ್
So very great article mam…. Congratulations…