ಆದಪ್ಪ ಹೆಂಬಾ ಮಸ್ಕಿ ಕಾಯಬೇಕಿದೆ

ಕಾವ್ಯಸಂಗಾತಿ

ಆದಪ್ಪ ಹೆಂಬಾ ಮಸ್ಕಿ

ಕಾಯಬೇಕಿದೆ

ಗಾಂಧಿ, ನೆಹರೂ, ಬೋಸ್
ಲಾಲ್, ಬಾಲ್, ಪಾಲ್
ಭಗತ್, ಆಜಾದ್
ಇನ್ನೂ
ಅದೆಷ್ಟು ಕೋಟಿ ಜನರ
ತ್ಯಾಗ-ಹೋರಾಟ-ಬಲಿದಾನ ಗಳೋ
ಗಳಿಸಿದ್ದು
ರಾಜ ತಾಂತ್ರಿಕ ಸ್ವತಂತ್ರವನ್ನು
ಭಾರತಾಂಬೆಯ ನಗುವನ್ನಲ್ಲ
ಕಾಯಬೇಕಿದೆ ನಾವಿನ್ನೂ
ಅಮ್ಮನ ನಿರುಮ್ಮಳ ನಗುವಿಗಾಗಿ
ನಿಕ್ಷಲ್ಮಶ ಭ್ರಾತೃತ್ವತೆಯ ಅಪ್ಪುಗೆಗಾಗಿ ||

ಬುದ್ಧ-ಬಸವ-ಅಂಬೇಡ್ಕರ
ದಾಸರು, ಸಂತರು, ಸೂಫಿಗಳು
ಇನ್ನೂ ಅದೆಷ್ಟು ಲಕ್ಷ ದಾರ್ಶನಿಕರು
ಬದುಕುವ ದಾರಿ ಬರೆದು ಕೊಟ್ಟರು
ಬದುಕಿ ತೋರಿದರು
ನಮ್ಮ ನಡೆ ತರಿಸುತ್ತಿಲ್ಲ
ಭಾರತಾಂಬೆಯ ಮೊಗದಲ್ಲಿ ನಗುವನ್ನು
ಕಾಯಬೇಕಿದೆ ನಾವಿನ್ನೂ
ಅಮ್ಮನ ನಿರುಮ್ಮಳ ನಗುವಿಗಾಗಿ
ನಿಕ್ಷಲ್ಮಶ ಭ್ರಾತೃತ್ವತೆಯ ಅಪ್ಪುಗೆಗಾಗಿ ||

ರಕ್ಕಸನನ್ನು ರಾಮನಾಗಿಸಿದ
ಬುದ್ಧನ ನಗುವನೊಮ್ಮೆ ನೋಡಿ
ಸ್ವರ್ಗಕ್ಕೆ…. – ನಾನು ಹೋದರೆ ಹೋದೇನು ಎನ್ನುವ
ದಾಸವಾಣಿಯ ಕೇಳಿ
ಬಿಡಿ ನಿಮ್ಮ ಮನದೊಳಗಿನ
ಗಡಿ -ಬಿಡಿ
ಇಹುದಾಚೆ ಭಾವ ಸ್ವರ್ಗದ ಲೋಕ
ಎಲ್ಲರ ಬೊಗಸೆಯಲಿ ಪ್ರೀತಿ ತುಂಬಿರೆ
ಕಾಯಬೇಕಿಲ್ಲ ಯಾರೂ
ಅಮ್ಮನ ನಿರುಮ್ಮಳ ನಗುವಿಗಾಗಿ
ನಿಷ್ಕಲ್ಮಶ ಭ್ರಾತೃತ್ವತೆಯ ಅಪ್ಪುಗೆಗಾಗಿ ||

ಆದಪ್ಪ ಹೆಂಬಾ ಮಸ್ಕಿ

Leave a Reply

Back To Top