ಹಮೀದಾ ಬೇಗಂ ದೇಸಾಯಿ ಯಾಕೆ?

ಕಾವ್ಯ ಸಂಗಾತಿ.

ಹಮೀದಾ ಬೇಗಂ ದೇಸಾಯಿ

ಯಾಕೆ?

ಸಪ್ತಪದಿ ತುಳಿದು
ಸಿಂಗರಿಸಿದ ಅಕ್ಕಿಸೇರು
ಒದ್ದು ಮನೆಯೊಳಗೆ
ಬಲಗಾಲಿಟ್ಟವಳಿಗೆ
ಕಿವಿಯಲಿ ಉಸುರಿದಳು ಅತ್ತೆ
ಯಾವಾಗಲೂ ಸೀತೆಯಂತೆ
ನಗುತ ಇರಬೇಕೆಂದು…

ಮುಸುಕು ಹಾಕಿದ
ಬಾಗಿದ ಮೊಗದೊಳಗೇ
ಮುಗುಳ್ನಕ್ಕಳು ಸೊಸೆ
ಆಗಲಿ ಎಂಬಂತೆ…

ಮೊದಲ ರಾತ್ರಿಯ
ಮಂದ ದೀಪದ ಬೆಳಕಲಿ
ಕಾಯುತಿದ್ದಳು ನವವಧು
ತನ್ನಿನಿಯನ ಬರುವಿಗೆ ;
ಆದರೇನು, ನಸುಕು ಮೂಡಿದರೂ
ಅವನು ಬರಲೇ ಇಲ್ಲ..
ಅವನೆಲ್ಲೋ ಬೇರೆ ತೋಳ್ಗಳಲಿ ಬಂಧಿ…

ಬಿಕ್ಕಳಿಸಿ, ದಿಂಬು ತೋಯ್ದಿತ್ತು
ವಧುವಿನ ನೊಂದ ಕಣ್ಣೀರಿಂದ;
ಸೊಸೆ ಸೀತೆಯಂತಿರಬೇಕೆಂದ ಅತ್ತೆ
ಮಗನನ್ನು ರಾಮನಾಗಿಸಲಿಲ್ಲ…ಯಾಕೆ…?


ಹಮೀದಾ ಬೇಗಂ ದೇಸಾಯಿ

4 thoughts on “ಹಮೀದಾ ಬೇಗಂ ದೇಸಾಯಿ ಯಾಕೆ?

  1. ಮಾರ್ಮಿಕ ರಚನೆ. ಹೀಗೂ ನಡೆಯುತ್ತದೆ…. ನಡೆಯುತ್ತಿದೆ…. ನಡೆಯಬಹುದು…. ಎನ್ನುವ ಜಗದ ವಾಸ್ತವ ಸತ್ಯವನ್ನು ಬಹಳ ಸೂಕ್ಷ್ಮವಾಗಿ, ಗಂಭೀರವಾಗಿ ಅರುಹಿದ ಕವಿತೆ….

    1. ತಮ್ಮ ಸ್ಪಂದನೆಗೆ ಧನ್ಯವಾದಗಳು.
      ಹಮೀದಾ ಬೇಗಂ. ಸಂಕೇಶ್ವರ.

  2. ನಿಮ್ಮ ಕವನ , ಅದರಲ್ಲಿ ಅಡಗಿರುವ ಪ್ರಶ್ನೆ ಬಹಳ ಅರ್ಥಪೂರ್ಣ ಹಾಗೂ ಮಾರ್ಮಿಕವಾಗಿ ಮೂಡಿ ಬಂದಿದೆ ಮೇಡಂ.. ಅದ್ಭುತ ರಚನೆ

    1. ಧನ್ಯವಾದಗಳು ಸ್ಪಂದನೆಗೆ.
      ಹಮೀದಾ ಬೇಗಂ. ಸಂಕೇಶ್ವರ.

Leave a Reply

Back To Top