ಭಾಗ್ಯಜ್ಯೋತಿ ಹಿರೇಮಠರವರ ಸಂಕಲನ ‘ಬಿದಿರ ಬಿನ್ನಹ’ದ ಅವಲೋಕನ ನಾಗರಾಜ್ ಹರಪನಹಳ್ಳಿ

ಪುಸ್ತಕ ಸಂಗಾತಿ

ಭಾಗ್ಯಜ್ಯೋತಿ ಹಿರೇಮಠರವರ ಸಂಕಲನ

‘ಬಿದಿರ ಬಿನ್ನಹ’ದ ಅವಲೋಕನ

ನಾಗರಾಜ್ ಹರಪನಹಳ್ಳಿ

ಬಿದಿರ ಬಿನ್ನಹ
ಕವಿತಾ ಸಂಕಲನ
ಭಾಗ್ಯಜ್ಯೋತಿ ಹಿರೇಮಠ.
ಪಲ್ಲವ ಪ್ರಕಾಶನ.ಬಳ್ಳಾರಿ.
ಬೆಲೆ: 90

ಒಲೆಯ ಕಿಚ್ಚು ಆರಬಹುದು
ಒಳಗಣ ಕಿಚ್ಚು ನಂದಿಸಬಹುದೇ
?
……………………….

               

” ಒಲೆಯ ಕಿಚ್ಚು ಆರಬಹುದು
ಒಳಗಣ ಕಿಚ್ಚು
ನಂದಿಸಬಹುದೇ?”

ಈ ಸಾಲುಗಳು ಆತ್ಮ ಕಂಡ ಹುಡುಗಿ ಕವಿತೆಯ ಕೊನೆಯ ಸಾಲುಗಳು. ಬಿದಿರ ಬಿನ್ನಹ ಎಂಬ ಸಂಕಲನದಿಂದ ಆಯ್ದುಕೊಂಡ ಸಾಲುಗಳು. ಈ ಕವಿತೆ ಓದಿದ ತಕ್ಷಣ ನೆನಪಾಗುವುದು ವಚನ ಸಾಹಿತ್ಯ ಕಾಲದ ಚಳುವಳಿ. ಹೆಣ್ಣಿಗೆ ಆ ಕಾಲ ನೀಡಿದ ಸಮಾನತೆ‌ . ಆದರೆ ಅಸಮಾನತೆ 21ನೇ ಶತಮಾನದಲ್ಲಿ ಮುಂದುವರಿದಿದೆ. ಹೆಣ್ಣಿನ ಸಂಕಷ್ಟಗಳು ಹೆಚ್ಚು ಕಡಿಮೆ ಹೊಸ ಮುಖವಾಡ ಧರಿಸಿವೆ. ಉತ್ತರ ಕರ್ನಾಟಕದ ಕವಿಗಳಲ್ಲಿ ಕೆಲವರಾದರೂ  ವಚನಸಾಹಿತ್ಯದ  ಜೀವಕೋಶ ದಲ್ಲೇ ಬೆಳೆದವರು. ಅದು ಕಲ್ಯಾಣ ,ಕೂಡಲ ಸಂಗಮದ ನೆಲದ ಸತ್ವ, ಮೂಲತತ್ವ .
ಅಕ್ಕ ಮಹಾದೇವಿ ಕನ್ನಡದ ಜೀವಕೋಶಗಳನ್ನು ಪ್ರವೇಶಿಸುವ ಬಗೆ ಇದು.


‘ಅಂಗಸಂಗದ ಹಂಗು ಹರಿದವಳು, ಆತ್ಮ ಕಂಡ ಹುಡುಗಿ ; ಮಾಸಿದ ಉಗುರಿಗೆ
ಬಣ್ಣ ತುಂಬುತ್ತಿದ್ದಾಳೆ ಹುಡುಗಿ’

‘ಬಿದಿರ ಬಿನ್ನಹ’  ಕವಿತಾ ಸಂಕಲನ ಕವಯಿತ್ರಿ
  ಭಾಗ್ಯಜ್ಯೋತಿ ಹಿರೇಮಠ ಅವರ ಎರಡನೇ ಸಂಕಲನ. 2022ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕೃತಿ.

ಇಲ್ಲಿನ ಕಾವ್ಯ ರಚನೆಗಳು ಕನ್ನಡ ಕಾವ್ಯದ ಪರಂಪರೆಯ ಹಾದಿಯಲ್ಲಿವೆ  . ತುಂಬಾ ಸರಳವಾಗಿ , ಮುಗ್ಧತೆಯಿಂದ ಸುತ್ತಲ ಜಗತ್ತನ್ನು ಗ್ರಹಿಸಬಲ್ಲಿರಿ ಹಾಗೂ ದಿವ್ಯ ಪ್ರೇಮವನ್ನು ಹಿಡಿದಿಡಬಲ್ಲಿರಿ‌ .  ಇಲ್ಲಿನ ಬಹುತೇಕ  ಕವಿತೆಗಳು  ಕತೆಯನ್ನು ಹೇಳುತ್ತವೆ . ಭೂತವನ್ನು ಬಾಲ್ಯವನ್ನು ಬದುಕಿದ ಹಳ್ಳಿಯ ಭಾಷೆಯೊಂದಿಗೆ ಜನಿಸುತ್ತವೆ. ತೀವ್ರ ಅನಿಸುವ ಬಂಡಾಯ ಕಾಣದಿದ್ದರೂ, ಒಂದು ಮಿಂಚು ಬಯಲ ಬಾನಲ್ಲಿ ಸುಳಿದು ಹೋಗುತ್ತದೆ.
ಕಾವ್ಯದ ಉದ್ದೇಶವಾದರೂ ಏನು ಎಂದು ಕಾಡುವ ಪ್ರಶ್ನೆಗೆ ಇಲ್ಲಿನ ಕೆಲ ಕವಿತೆಗಳು ಉತ್ತರಿಸುತ್ತವೆ.
” ಡೊಂಬರ ಹುಡುಗಿ ” ಇಷ್ಟವಾದ ಕವಿತೆ. ನಾವು ಸಹ ಬಾಲ್ಯದಲ್ಲಿ ನೋಡಿದ ಹುಡುಗಿಯೇ ಆಕಿ. ೩. ನೇ ಕ್ಲಾಸು ಕಲಿವಾಗ ನಮ್ಮ ಶಾಲೆಯ ಅಂಗಳದಲ್ಲಿ ಗಂಟಲಿಗೆ ಆನಿಸಿ ಕಬ್ಬಿಣ ಸರಳು ಮಣಿಸಿದವಳು, ಬೆಂಕಿಯ ಸುತ್ತಿನಲ್ಲಿ ಜಿಗಿದವಳು, ಇಷ್ಟೇ ಇಷ್ಟು ಕಬ್ಬಿಣದ ರಿಂಗಿನಲ್ಲಿ ದೇಹ ಬಾಗಿಸಿ ನುಸಳಿದಳು ಪುಟ್ಟ ಹುಡುಗಿ …ನೆನಪಲ್ಲಿ ಉಳಿದಳು. ಈ ಕವಿತೆಯ ಕೊನೆಯ ಮೂರು ಸಾಲು ಇಲ್ಲದಿದ್ದರೂ ಕವಿತೆ ಗೆಲ್ಲುತ್ತಿತ್ತು.

“ಬಚ್ಚಲು” ಕವಿತೆ
ಬಚ್ಚಲು ನೀರಲ್ಲಿ ಅರಳಿದ ನಿತ್ಯ ಪುಷ್ಪ ಮನೆ ದೇವರ ಸಿಂಗರಿಸಿಕೊಳ್ಳುವುದು ಬಂಡಾಯ.  ಆ ಕವಿತೆಗೆ ಇನ್ನೂ ಹೆಚ್ಚಿನ ಸಾಧ್ಯತೆಗಳಿದ್ದವು .
ಆದರೂ ಕವಿತೆಯ ಕೊನೆಗೆ ಹಠಾತ್ ಬರುವ ಮಿಂಚು ಕವಿಯ ತಾತ್ವಿಕ ಮತ್ತು ಸಹಜ ಬದುಕಿನ ಆಧ್ಯಾತ್ಮವನ್ನು ತೆರೆದಿಡುತ್ತದೆ.  ಬಚ್ಚಲ ಬೆತ್ತಲೆಯ ರೂಪವನ್ನು ನಾವೇ ಧರಿಸೋಣ ಎಂಬ ಸಾಲು ಕವಿ ಓದುಗ ಮತ್ತು ಸಹೃದಯನನ್ನು ಕಾವ್ಯದ ಧ್ವನಿ ಬಹು ಎತ್ತರಕ್ಕೆ ಕರೆದೊಯ್ಯುತ್ತದೆ‌ .

ಈ ಸಂಕಲನದ ನಿನ್ನ ಹೆಸರ ಇಡತೇನ ಕವಿತೆ ಹಳ್ಳಿಯ ಜಾನಪದ ನುಡಿಗಟ್ಟಿನ ಹಾಡಿನ ಗೇಯತೆಯನ್ನು ಹೊದ್ದಿದೆ.‌

ಕಡಲ ಬೆಂಕಿ, ಖಾಲಿ ಕ್ಯಾನ್ವಾಸ್ …ಕವಿತೆಗಳು  ಇಷ್ಟವಾದವು. ಕಡಲ ಸಾನಿಧ್ಯ ಹಾಗೂ  ಧ್ಯಾನದಲ್ಲೇ ಇರುವ ನನಗೆ ಈ ಕವಿತೆಗಳ ಇಷ್ಟವಾಗಲು ಕಾರಣವಾಗಿರಬಹುದು. ವಿಭಾ ಕವಿತೆಗಳ ಆಶಯವನ್ನು ಈ ಎರಡು ಕವಿತೆಗಳು ಸೇರಿದಂತೆ ಈ ಸಂಕಲನದ ಕೆಲ ಕವಿತೆಗಳಲ್ಲಿದೆ. ಅಪ್ಪ, ಬಾಲ್ಯ ನಿಮ್ಮನ್ನು ಕಾಡಿ, ಹಲವು ಕವಿತೆಗಳು ಇಲ್ಲಿ ದಾಖಲಾಗಿವೆ. ಕೆಲವು ಕಡೆ ವಾಚ್ಯ ಅನಿಸಿದರೂ
ಕಾಡುವ ಸಾಲುಗಳು  ಹೊಳೆಯ ನೀರ ಮೇಲೆ ಬಿದ್ದ ಬಿಸಲಿಗೆ ಹೊಳೆಯುವಂತಿವೆ.


ಕರ್ಪೂರದಸರತಿಯ ಕಂತು ಕವಿತೆಯಲ್ಲಿ
ಚೌಕಾಶಿ ರಾತ್ರಿಯಲಿ
ಮುಖ ಮುರಿದುಕೊಂಡ ಚಂದ್ರ

ಪಶ್ಚತ್ತಾಪದ ಮುಲಾಮು ಸವರಿಕೊಂಡ
ಎಂಬ ಸಾಲುಗಳು ಚೆಂದ.

ಆತ್ಮ ಕಂಡ ಹುಡುಗಿ, ಮಹಾಮನಿ, ಮಸಣದ ದೀಪ,ನೀಲನಕ್ಷೆ ಬರೆದವಳು ಕವಿತೆಗಳು ಹೆಣ್ಣಿನ ತಾಕಲಾಟ ಮತ್ತು  ಎತ್ತರಕ್ಕೇರುವ ಹಂಬಲವನ್ನು, ತಳಮಳವನ್ನು, ವಿಷಾದದ ಜೊತೆ ಆಶಾವಾದವನ್ನು ಕಟ್ಟುತ್ತವೆ. ಬಿದಿರ ಬಿನ್ನಹದಲ್ಲಿವ ವಚನ ಸಾಹಿತ್ಯದ ಲೌಕಿಕದ ಎತ್ತರ ಸಹ ಕಾಣಿಸುತ್ತದೆ ಎಂಬುದು ಕವಯಿತ್ರಿ ಭಾಗ್ಯಜ್ಯೊತಿ ಅವರ ವಿಶೇಷತೆ.
————————————————–

ನಾಗರಾಜ್ ಹರಪನಹಳ್ಳಿ.

One thought on “ಭಾಗ್ಯಜ್ಯೋತಿ ಹಿರೇಮಠರವರ ಸಂಕಲನ ‘ಬಿದಿರ ಬಿನ್ನಹ’ದ ಅವಲೋಕನ ನಾಗರಾಜ್ ಹರಪನಹಳ್ಳಿ

  1. ಬಿದಿರ ಬಿನ್ನಹ ಸಂಕಲನ ಓದಿ ಮುಗಿಸುವುದರೊಳಗೆ ಮನಸು ಆರ್ದ್ರವಾಗಿತ್ತು.ಕವಿತೆಗಳ ಒಳನೋಟದ ಈ ಪುಟ್ಟ ಬರಹ ದಲ್ಲಿ ಸಂಕಲನದಲ್ಲಿನ ಕೆಲವು ಕೋಲ್ಮಿಂಚಿನಂಥ ಸಾಲುಗಳನ್ನು ಆಯ್ದು ಕಾವ್ಯ ಪ್ರಿಯರ ಎದೆಗಿಳಿಸಿದ್ದೀರಿ. ಅಭಿನಂದನೆಗಳು.

Leave a Reply

Back To Top