ಡಾ ಅನ್ನಪೂರ್ಣ ಹಿರೇಮಠ ಶೂರ ರಾಯಣ್ಣಲಾವಣಿ ಪದ

ಕಾವ್ಯಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಶೂರ ರಾಯಣ್ಣಲಾವಣಿ ಪದ

ಹುಟ್ಟಿ ಬಂದನು ಭಾರತ ನೆಲದಲಿ
ಕರುನಾಡಿನ ಹೂ ಕಂಪಲಿ
ಜಗಜಟ್ಟಿಯಾಗಿ ಬೆಳೆದ ಚೆನ್ನಮ್ಮ
ತಾಯಿಯ ಪ್ರೀತಿಯ ಮಗನಾಗಿ//

ರಾಣಿ ಚೆನ್ನಮ್ಮ ಕಿತ್ತೂರು ಅಳುತಿರಲು
ಬಲಗೈ ಬಂಟನಾಗಿ ರಾಯಣ್ಣನು
ತಾಯಿ ಸೇವೆ ಗೈಯಲು ಪಣತೊಟ್ಟು
ನಾಡಿಗಾಗಿ ನಡಕಟ್ಟಿ ನಿಂತನು//

ಕರುನಾಡಲ್ಲೊಂದು ಕಣ್ಮಣಿ ಕಲಿಗ
ಗುಂಪುಕಟ್ಟಿ ಮೆರೆದನು ವೀರವನಿತೆಯ
ಜೊತೆಯಾಗಿ ತೊಡೆತಟ್ಟಿ ನಿಂತನು
ಶೂರನೆಂದು ಖ್ಯಾತಿ ಪಡೆದನು//

ಕಪ್ಪ ಕೇಳಲು ಬಂದ ಬ್ರಿಟಿಷ
ಕುನ್ನಿಗಳ ತಣ್ಣಗೆ ಮಾಡಿ ಓಡಿಸಿದನು
ತನ್ನ ಜನರಿಗಾಗಿ ಜೀವ ಮುಡಿಪಿಟ್ಟನು
ಬಂದ ಕಷ್ಟಗಳಿಗೆ ಎದೆಯೊಡ್ಡಿ ನಿಂತನು//

ರಾಜದ್ರೋಹಿ ಹಿತಶತ್ರುಗಳಾ
ಬಲಿಗೆ ರಾಯಣ್ಣ ಬಿದ್ದನು ಅರಿಯದೆ
ಮೋಸದ ಬಲೆಯಲಿ ಸಿಕ್ಕನು
ಪಾರಾಗುವ ದಾರಿ ಕಾಣದೆ ಮರುಗಿದನು//

ಕೊರಳಿಗೆ ಏಣಿ ಬಿಳುವಾಗಲೂ
ಕೆರಳಿದ ಸಿಂಹದಂತಿದ್ದನು
ನನ್ನ ಕೊಂದೆವೆಂದು ಮೆರೆಯದಿರಿ
ಮನೆಗೊಬ್ಬ ರಾಯಣ್ಣ ಹುಟ್ಟುವನೆಂದನು//

ನಿಮ್ಮ ಅಟ್ಟಿಸದೆ ಬಿಡರೆಂದನು
ಜನ್ಮಭೂಮಿಯಾ ಪುಣ್ಯಭೂಮಿಯಾ
ನೆನೆಯುತ ಕಣ್ಣು ಮುಚ್ಚಿದನು
ಭಾರತೀಯರ ಹೃದಯದಿ ಹಸಿರಾಗಿ ನಿಂತನು//


,ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top