ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಹೊತ್ತು ಕಂತುವ ಮುನ್ನ
ನನಗರಿಯದೆ ನಿನ್ನಲಿ
ಅಂಕುರಿಸಿದ ಪ್ರೀತಿಯನು
ನೀನರಿಯದಾದೆ…
ಹಾರಿ ಹೋದೀತೆಂದು
ಎದೆಯ ಗೂಡೊಳಗೆ
ಬಚ್ಚಿಟ್ಟೆ ಕಾಣದಂತೆ….
ಋತುಗಳುರುಳಿ
ಹೂಗಳರಳಿ ಬಾಡಿ
ಮುರುಟಿ ಒಣಗಿ ಹೋಗಿವೆ…
ನನ್ನ ಕಂಗಳಲಿ
ಮೂಡಿದ ನಿನ್ನ ಬಿಂಬ
ಈಗೀಗ ಮಸುಕಾಗುತಿದೆ…
ಬೆಳ್ಳಿ ಕೂದಲಿನ ಜಡೆ
ಬಳುಕುವುದ ಏಕೋ
ಬಳಲಿ ಮರೆತು ಬಿಟ್ಟಿದೆ…
ನೀ ನನ್ನ ಮನದಿ
ಹಣಿಕಿ ಹಾಕುವೆ ಎಂದು
ಇಂದಿಗೂ ಕಾದಿರುವೆ….
ಒಂದೇ ಒಂದು ಬಾರಿ
ನನ್ನ ಬಳಿ ಸಾರುವೆಯಾ
ಹೊತ್ತು ಕಂತುವ ಮುನ್ನ
ಹಮೀದಾಬೇಗಂ ದೇಸಾಯಿ