ಅಂಕಣ ಸಂಗಾತಿ.
ಶಿಕ್ಷಣ ಲೋಕ
ಡಾ.ದಾನಮ್ಮ ಝಳಕಿ
ಶಾಲಾ ದಾಖಲಾತಿಯ ಆತಂಕಗಳು
ಅಗಸ್ಟ ಹಾಗೂ ಸಪ್ಟೆಂಬರ ತಿಂಗಳು ಬಂದರೆ ಸಾಕು, ಉತ್ತಮ ಶಿಕ್ಷಕರ ಆಯ್ಕೆಯ ಬಗ್ಗೆ ಚರ್ಚೆಗಳು ಪಾರಂಭವಾಗುತ್ತವೆ. ಅಲ್ಲದೇ, ನಿಜವಾಗಿಯೂ ಉತ್ತಮ ಶಿಕ್ಷಕರು ಆಯ್ಕೆ ಆಗುತ್ತಿದ್ದಾರೆಯೇ ಎಂಬ ಪ್ರಶ್ನೆ ಸಹ ಸಮುದಾಯದಲ್ಲಿ ಸದಾ ಚರ್ಚಿತವಾಗುತ್ತಿರುವ ವಿಷಯವಾಗಿದೆ. ಹಾಗಾದರೆ ವಾಸ್ತವ ಏನು? ಮಾನದಂಡಗಳ ಬಗ್ಗೆ ಶಿಕ್ಷಕರ ಅಭಿಪ್ರಾಯವೇನು? ಸಮುದಾಯದ ಆಶಯ ಏನು?ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ.
ಇತ್ತೀಚಿಗೆ ಒಬ್ಬ ಶಿಕ್ಷಕರು ವರ್ಗಾವಣೆಯಾದಾಗ ಇಡೀ ಶಾಲೆಯ ಮಕ್ಕಳು ಹಾಗೂ ಊರಿನ ಜನ ಬಿಕ್ಕಿ ಬಿಕ್ಕಿ ಅತ್ತರು ಎಂಬ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದೆವು. ಅಲ್ಲದೇ ಕೆಲವು ಶಿಕ್ಷಕರ ಅಭೂತಪೂರ್ವವಾದ ಶ್ರಮದಿಂದ ಅನೇಕ ಸಾಹಿತಿಗಳು, ವಿಜ್ಞಾನಿಗಳು, ಸಮಾಜ ಸೇವಕರ ನಿರ್ಮಾಣದ ಬಗ್ಗೆಯೂ ಕೇಳಿದ್ದೇವೆ. ಹಾಗಾದರೆ ಅವರೆಲ್ಲ ಉತ್ತಮ ಶಿಕ್ಷಕರಲ್ಲವೇ? ಅಂತಹ ಶಿಕ್ಷಕರಿಗೆ ಉತ್ತಮ ಶಿಕ್ಷಕರು ಎಂಬ ಪ್ರಶಸ್ತಿ ಲಭಿಸಿದೆಯೇ? ಎಂಬ ವಿಷಯಗಳ ಒಳಹೊಕ್ಕು ನೋಡಿದಾಗ ಅವರೆಲ್ಲರೂ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿಲ್ಲ ಎಂಬ ಉತ್ತರ ಸಿಗುತ್ತದೆ.
ಅನೇಕ ಶಿಕ್ಷಕರು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯುವ ದಾಖಲೆಗಳನ್ನು ಸಂಗ್ರಹಿಸುವ ಗೋಜಿಗೆ ಹೋಗಲ್ಲ. ಅಲ್ಲದೇ ಅದಕ್ಕಾಗಿ ಅರ್ಜಿ ಸಲ್ಲಿಸುವ ಕಾರ್ಯವನ್ನು ಸಹ ಮಾಡಲ್ಲ. ಆದರೆ ಸದಾ ತಮ್ಮ ಕಾಯಕವನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಾ ಉತ್ತಮ ನಾಗರಿಕರ ಸೃಷ್ಠಿಗೆ ಕಾರಣರಾಗಿರುತ್ತಾರೆ. ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿರುತ್ತಾರೆ. ಮಕ್ಕಳಿಗೆ ಸದಾ ಉತ್ತಮವಾಗಿ ಪಾಠ ಮಾಡುತ್ತಾ, ನೈತಿಕತೆಯನ್ನು ಬಿತ್ತುತ್ತಾ ಉತ್ತಮ ಸಂಸ್ಕಾರವನ್ನು ನೀಡುತ್ತಾ ತಮ್ಮ ಕಾರ್ಯವನ್ನು ಮಾಡುತ್ತಿರುತ್ತಾರೆ. ಅವರಿಗೆ ನೀವೇಕೆ ಪ್ರಶಸ್ತಿಗಾಗಿ ಅರ್ಜಿ ಹಾಕಿಲ್ಲ ಎಂದು ಕೇಳಿದರೆ, ಅಯ್ಯೋ ನಾವು ಉತ್ತಮ ಶಿಕ್ಷಕರು ಎಂದು ನಾವೇ ಹೇಳಿಕೊಳ್ಳಬೇಕೇ? ನಾವೇ ಅರ್ಜಿ ಹಾಕಬೇಕೇ? ಅದನ್ನು ನಮ್ಮ ಶಾಲೆಯ ಮಕ್ಕಳು ಗುರುತಿಸಿದರೆ ಸಾಕು ಎನ್ನುತ್ತಾರೆ. ಅಷ್ಟೇ ಏಕೆ ನಾವು ಉತ್ತಮ ಶಿಕ್ಷಕರು ಎಂದು ಸಮಾಜ, ಸಮುದಾಯ ಅಥವಾ ಇಲಾಖೆ ಗುರುತಿಸಿ ನೀಡಬೇಕು ಎಂಬ ಉತ್ತರ ಸಿಗುತ್ತದೆ.
ಹಾಗಾದರೆ ಈಗಾಗಲೇ ಸಿಕ್ಕಂತಹ ಪ್ರಶಸ್ತಿ ಉತ್ತಮ ಶಿಕ್ಷಕರಿಗೆ ಸಿಕ್ಕಿಲ್ಲವೇ ಎಂಬ ಪ್ರಶ್ನೆ? ಬರುತ್ತದೆ. ಹಾಗೇನಿಲ್ಲ ಈಗಲೂ ಸಹ ಅನೇಕ ಉತ್ತಮ ಕಾರ್ಯ ಮಾಡಿದ ಶಿಕ್ಷಕರಿಗೆ ಈ ಪ್ರಶಸ್ತಿ ದೊರೆತಿದೆ. ಆ ಪ್ರಶಸ್ತಿಗೂ ಒಂದು ಗೌರವ ಸಿಕ್ಕಿದೆ. ಆದರೆ ಎಲೆ ಮರೆಯ ಕಾಯಿಯಂತೆ ಉತ್ತಮ ಕಾರ್ಯ ಮಾಡುತ್ತಾ ಎಲ್ಲ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸೃಜನಶೀಲತೆಯಿಂದ, ಆಸಕ್ತಿಯಿಂದ ಪಾಠ ಮಾಡಿ, ಇಡೀ ಸಮುದಾಯದ ಮನ ಗೆದ್ದ ಅದೆಷ್ಟೋ ಶಿಕ್ಷಕರಿಗೆ ಈ ಪ್ರಶಸ್ತಿ ಸಿಕ್ಕಿಲ್ಲವೆಂದೇ ಹೇಳಬಹುದು.
ಒಬ್ಬ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಲು ಕೇವಲ ಫೋಟೋ ಅಥವಾ ಸರ್ಟಿಫೀಕೇಟಗಳ ದಾಖಲೆಗಳೇ ಅಂತಿಮವಲ್ಲ. ಆತನ ನಡತೆ, ಮನೋಧೋರಣೆ, ತರಗತಿ ಪ್ರಕ್ರಿಯೆ, ಮಕ್ಕಳ ಕಲಿಕೆ, ಸಮಾಜಮುಖಿ ಕಾರ್ಯಗಳು, ಸೃಜನಾತ್ಮಕತೆ, ಸದಾ ಓದುವ ಆಸಕ್ತಿ, ತಂತ್ರಜ್ಞಾನದ ತಿಳವಳಿಕೆ, ವಿಷಯದ ಪ್ರಬುದ್ಧತೆ, ಸಂಸ್ಕಾರಯುತ ಜೀವನ, ನಡೆ, ನುಡಿಯಲ್ಲಿ ಪ್ರಾಮಾಣಿಕತೆ, ಸರಳತೆ, ಮಕ್ಕಳ ಬಗ್ಗೆ ಕಾಳಜಿ, ಸಮಯ ಪ್ರಜ್ಞೆ, ಸ್ಥಿರತೆ, ವಿದೇಯತೆ, ಸದಾ ಸಹಾಯ ಹಸ್ತ ಚಾಚುವಿಕೆ, ಸಂವಹನ ಕೌಶಲ, ಪರಾನೂಭೂತಿ, ತಾಳ್ಮೆ, ವಿಷಯದ ಪೂರ್ವ ತಯಾರಿ, ಇತ್ಯಾದಿ ಅನೇಕ ಅಂಶಗಳನ್ನು ಗಮನಿಸಿ. ಪ್ರಶಸ್ತಿಯನ್ನು ಸಮುದಾಯವೇ ನೀಡಬೇಕು. ಇಲ್ಲಿ ಯಾವುದೇ ರಾಜಕಾರಣ, ಪ್ರಭಾವ, ಪರಿಚಯದ ಅಗತ್ಯತೆ ಇರಕೂಡದು. ತಾವೇ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆ ಕಡ್ಡಾಯ ಮಾಡಕೂಡದು. ಉತ್ತಮ ಶಿಕ್ಷಕರೆಂದರೆ, ಕೇವಲ ತನ್ನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದರಿಂದ ಶಿಕ್ಷಕ ಶ್ರೇಷ್ಠನಾಗುವುದಿಲ್ಲ . ಒಬ್ಬ ವಿದ್ಯಾರ್ಥಿಯೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸಿದಾಗ ಶಿಕ್ಷಕರು ಒಳ್ಳೆಯವರು.
ಉತ್ತಮ ಶಿಕ್ಷಕರು ರೋಲ್ ಮಾಡೆಲ್ ಆಗಿ ಕಾರ್ಯನಿರ್ವಹಿಸುತ್ತಾರೆ, ವೃತ್ತಿಪರ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತಾರೆ ಮತ್ತು ವಿದ್ಯಾರ್ಥಿಗಳು ತಮ್ಮ ಪೂರ್ಣ ಸಾಮರ್ಥ್ಯವನ್ನು ತಲುಪಲು ಸಹಾಯ ಮಾಡುತ್ತಾರೆ. ಯಶಸ್ವಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಬೆಳವಣಿಗೆ ಮತ್ತು ಶೈಕ್ಷಣಿಕ ಸಾಧನೆಗೆ ಅಗತ್ಯವಾದ ವೈವಿಧ್ಯಮಯ ಸಂವಹನ, ತಂಡದ ಕೆಲಸ, ಸಮಯ ನಿರ್ವಹಣೆ, ಸಮಸ್ಯೆ-ಪರಿಹರಿಸುವ ಮತ್ತು ಸಾಂಸ್ಥಿಕ ಕೌಶಲ್ಯಗಳನ್ನು ಹೊಂದಿದ್ದಾರೆ. ಆದ್ದರಿಂದ ಉತ್ತಮ ಶಿಕ್ಷಕರ ಆಯ್ಕೆ ಮಾಡುವಾಗ ಅನೇಕ ಮಾನದಂಡಗಳನ್ನು ಪಾಲಿಸಬೇಕಿದೆ ಕೇವಲ ಅರ್ಜಿ ಸಲ್ಲಿಸುವಿಕೆಯೊಂದೇ ಪರ್ಯಾಯವಾಗಲಾರದು, ಶಾಲಾ ಮುಖ್ಯೋಪಾಧ್ಯಾಯರು, ಶಾಲೆಯ SDMC, ಗ್ರಾಮಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು, ಊರಿನ ಹಿರಿಯರು, ಇಲಾಖೆಯ ಅಧಿಕಾರಿಗಳು ಹೀಗೆ ಅನೇಕರು ಒಬ್ಬ ಶಿಕ್ಷಕನನ್ನು ಉತ್ತಮ ಶಿಕ್ಷಕ ಎಂದು ಗುರುತಿಸಿ, ಸನ್ಮಾನ ಮಾಡಬೇಕಿದೆ ಈ ಮೂಲಕ ಗುರು ಪರಂಪರೆಗೆ ಧನ್ಯಾತಾ ಭಾವ ತೋರಬೇಕಿದೆ. ಪ್ರಶಸ್ತಿಗೆ ಒಂದು ಗೌರವ ಸಿಗುವ ಹಾಗೆ ಉತ್ತಮ ಶಿಕ್ಷಕರನ್ನು ಹೆಕ್ಕಿ ಹೆಕ್ಕಿ ಸಂಶೋಧಿಸಬೇಕಿದೆ. ಹೀಗೆ ಉತ್ತಮ ಶಿಕ್ಷಕರಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬರುವಂತೆ ಆಗಬೇಕಿದೆ.
ಒಟ್ಟಾರೆ ಕೇವಲ ದಾಖಲೆಗಳನ್ನು ನೋಡಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡದೇ ನಿಜವಾಗಿಯೂ ಅದಕ್ಕೆ ಹಕ್ಕುದಾರರಾದವರಿಗೆ ಅದು ಲಭಿಸಬೇಕಿದೆ. ಆಗ ಪ್ರಶಸ್ತಿ ಪಡೆದವರನ್ನು ಸಂಶಯದಿಂದ ನೋಡುವ ಪ್ರವೃತ್ತಿಯೂ ಕಡಿಮೆ ಆಗಬಹುದು. ಹೀಗೆ ಇನ್ನೂ ಅನೇಕ ಪರ್ಯಾಯ ಮಾನದಂಡಗಳ ಮೂಲಕ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಬೇಕೆಂಬುದೇ ಆಶಯವಾಗಿದೆ.
ಡಾ ದಾನಮ್ಮ ಝಳಕಿ
ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ