ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಬಾರೋ ಮಾಧವ
ನನ್ನ ಬೆರಳ ಕೊಳಲಾಗಿಸಿ ಹಾಡು ಬಾರೋ ಮಾಧವಾ
ನನ್ನುಸಿರಿಗೆ ನಿನ್ನುಸಿರ ಬೆರೆಸಿ, ರಾಗ ತಾಳಗಳಾ
ಮೇಳೈಸಿ ಮನ ತಣಿಯುವಂತೆ ಹಾಡು ಬಾರೋ ಮಾಧವ//
ಒಡಲಲೊಮ್ಮಿದ ಒಲವ ಒಡಗೂಡಿಸಿ ಹಾಡೋ
ಭಾವದಲುಕ್ಕುವ ಪ್ರೇಮ ಪರಿಣಯಿಸಿ ಹಾಡೋ
ಜನ್ಮಜನ್ಮಾಂತರದ ಪ್ರೀತಿಯಿದು ನಿನ್ನೊಡನಾಟದೆ
ತನಿಯ ಬಯಸಿವುದು ಕೇಳೋ ಮಾಧವಾ
ನುಡಿಸೋ ಸುಂದರ ಕೊಳಲ ಹೊಮ್ಮಿಸು ನಾಧವಾ//
ಮನದ ಮಾಮರದ ಪಿಸುಗುಡುವ ಧ್ವನಿಗಳಾ
ಅನುಮಾನಿಸದೆ ಅನುಕರಿಸಿ ಅನುಮೋದಿಸು
ಆಲಿಂಗಿಸಿ ಶೃತಿ ಲಯಗಳ ಬೆರೆಸಿ
ಕಾಡು ಮೇಡು ವನಗಿರಿಯಲಿ ಮಾರ್ಧನಿಸುವಂತೆ
ಹಾಡು ಬಾರೋ ಮಾಧವ ನನ್ನ ಬೆರಳ ಕೊಳಲ ಮಾಡಿ //
ಬಯಲ ಬಾಂದಳದೆ ಏಕಾಂತದಿ ನೋಂದಿರುವೆ
ಹ** ಇಂಚರಕೆ ನಿನ್ನ ಮೃದು ಮಾತುಗಳ
ಬೆರೆಸಿ ಸರಸದಿ ಹಾಡು ಬಾರೋ ಮಾಧವ
ನಿನ್ನ ಕೊರಳ ಇಂಪಿಗೆ ನನ್ನ ಬೆರಳ ಕೊಳಲ ಮಾಡಿ
ಧ್ವನಿ ತೀಡಿ ತೀಡಿ ಹೃದಯದ ನೋವ ಮರೆವಂತೆ
ನಿನ್ನೊಡನಾಟದ ನಲಿವು ನಗೆಯು ಒಡಗೂಡುವಂತೆ//
ವಿರಹ ಮರೆವಂತೆ ಸರಸದಿ ನುಡಿಸೋ
ವಿರಸ ಮರೆತು ಅನುಸರಿಸಿ ಸವಿರಾಗ ನುಡಿಸೋ
ಸಮ್ಮತಿಸು ಸಲ್ಲಾಪಿಸು ಮಧುರತೆಯಲಿ
ತುಟಿ ಅಂಚಿನ ಜೇನ ಸವಿ ಉಣಿಸು
ತನು ಮನವ ಸಂತೈಸುತ ನುಡಿಸು ಅನುರಾಗವ ನಿರುತ//
ಡಾ ಅನ್ನಪೂರ್ಣ ಹಿರೇಮಠ