ವಿಡಂಬನಾ ಸಂಗಾತಿ
‘ಮಡದಿಯರ ಮನದಾಳದ ಮಾತು’
ಲಕ್ಷ್ಮೀ ರಾಮ್
ಏನು ನಿರ್ಮಲ ಟೀ ಆಯಿತಾ ?
ಅಯ್ಯೊ ಬೆಳಗ್ಗೆ ಎದ್ದು ಕಣ್ ಬಿಟ್ಟಾಗಿನಿಂದ ಬರೀ ಟೆನ್ಷನ್ ಇನ್ನೆಲ್ಲಿ ಟೀ ಚೆನ್ನಮ್ಮ .
ಯಾಕೆ ಏನಾಯಿತು ?
ಏನು ಹೇಳಲಿ ಚೆನ್ನಮ್ಮ, ಇವರು ಬೆಳ್ ಬೆಳ್ಳಗ್ಗೆನೆ ಪರೇಡ್/ಬಂದೋಬಸ್ತ್ ಅಂತಾ ಹೋಗ್ತಾರೆ ನಾವೋ ಬೆಳಗ್ಗೆ ಎದ್ದು ತಿಂಡಿ, ಅಡುಗೆ, ಮಕ್ಕಳಿಗೆ ಶಾಲೆಗೆ ಅಂತಾ ರೆಡಿ ಮಾಡಬೇಕು. ಅದಕ್ಕಂತಾನೆ ಹೇಳೋದು ಈ ಪೊಲೀಸರನ್ನು ಮದುವೆ ಆಗಬಾರದು ಅಂತಾ.
ಯಾಕೆ ನಿರ್ಮಲ ಹೀಗೆ ಮಾತನಾಡುತ್ತೀಯಾ ?
ಮತ್ತಿನೇನು ಇವರು ಊರು ಕಾಯೋದಕ್ಕೆ ಹೋಗುತ್ತಾರೆ. ನಾವು ಬೇರೆಯವರ ಮೇಲೆ ಅವಲಂಬಿಸಬೇಕು. ಇವರಂತೂ ಪೊಲೀಸ್ ನವರು, ಮನೆ ಕಡೆ ಏನೂ ತಲೆಕೆಡಿಸಿಕೊಳ್ಳಲ್ಲ. ಕೆಲಸ ಕೆಲಸ ಅಂತಾ ಹೊರಟು ಬಿಡುತ್ತಾರೆ. ಆದರೆ ಮನೆ ಸಂಭಾಳಿಸುತ್ತಾ, ಮನೆಯವರನ್ನೆಲ್ಲಾ ನೋಡಿಕೊಳ್ಳುತ್ತಾ ನಾವೇ ರೋಗ ತಂದುಕೊಳ್ಳಬೇಕು.
ಹೂಂ ಮತ್ತೆ ಮೊನ್ನೆ ನಮ್ಮ ಅತ್ತೆಯವರಿಗೆ ಕಣ್ ತೋರಿಸುತ್ತೀನಿ ಅಂತಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರ ಸಾಹೇಬ್ರು ಕರೆದರು ಅಂತಾ ಅವರ ಅಮ್ಮನ ಆಸ್ಪತ್ರೆಲೇ ಬಿಟ್ಟು ಹೋಗಿದ್ದಾರೆ. ಅತ್ತೆಯವರೋ ನನಗಿಂತ ಇವನಿಗೆ ಕೆಲಸನೇ ದೊಡ್ಡದಾಯಿತು ಅಂತ ಮನೆಯಲ್ಲಿ ಜಗಳಾ ನೇ ಮಾಡಿದ್ರು . ಅದೂ ನಮ್ ಜೊತೆ.
ಈ ಪೊಲೀಸ್ ಇಲಾಖೆಯಲ್ಲಿ ಇಷ್ಟೆಲ್ಲಾ ಟೆನ್ಷನ್ ಇದ್ದರೂ ಇವರ ಅಧಿಕಾರಿಗಳು ಮಾತ್ರ ಒಬ್ಬರಿಗೊಬ್ಬರು ಅನುಕೂಲ ಮಾಡಿ ಕೊಡೋದೆ ಇಲ್ಲ. ಅಧಿಕಾರಿಗಳೋ ಎಲ್ಲಾ ಸಿಟ್ಟನ್ನು ಸಿಬ್ಬಂದಿಗಳ ಮೇಲೆ ಹಾಕುತ್ತಾರೆ. ಹೀಗೇ ಕಳೆದ ತಿಂಗಳು ಯಾರೋ ಗಣ್ಯ ವ್ಯಕ್ತಿಗಳು ಬರುತ್ತಾರೆ ಅಂತಾ ಒಂದೇ ಸಮನೆ ಕೆಲಸಕ್ಕೆ ನಿದ್ದೆ ಇಲ್ಲದೇ ಹೋಗಿ ಟೆನ್ಷ್ ನ್ ಮಾಡಿಕೊಂಡು ನಮ್ಮ ಮನೆಯವರ ಗೆಳೆಯನಿಗೆ ಹೃದಯಾಘಾತ ಆಗಿಹೋಯಿತು. ದೇವರ ದಯೆ, ಆಪರೇಷನ್ ನಿಂದ ಬದುಕಿಕೊಂಡರು. ಇಲ್ಲ ಅಂದರೆ ಏನು ಗತಿ ? ಹೀಗೇ ಆದ್ರೆ ಹೆಂಡತಿ ಮತ್ತು ಸಣ್ಣ ಓದುವ ಮಕ್ಕಳು ಎಲ್ರೂ ಬೀದಿಗೆ ಬರೋದೆ.
ಏನು ಇಲಾಖೆನೋ ಏನೋ, ಈ ಹಿರಿಯ ಅಧಿಕಾರಿಗಳು ಯಾಕೆ ಹೀಗೋ ಗೊತ್ತಿಲ್ಲ. ಈಗಿನ ಸಿಬ್ಬಂದಿಗಳಂತೂ ಬಹುತೇಕ ವೆಲ್ ಗ್ರಾಜುಯೇಟೇ ಇರ್ತಾರೆ . ಎಲ್ರೂ ಬುದ್ಧಿವಂತ್ರೇ. ಮೇಲಾಧಿಕಾರಿಗಳು ಯಾರಿಗೂ ಒತ್ತಡ ಕೊಡದೇ ಎಲ್ರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬುದ್ದಿವಂತಿಕೆಯಿಂದಲೇ ಆರಾಮಾಗಿ ಕೆಲಸ ಮಾಡಿಸಬಹುದು. ಆದರೂ ಯಾಕೆ ಹೀಗೆ ಇರುತ್ತಾರೋ. ಈಗಂತೂ ಪೊಲೀಸ್ ಸಿಬ್ಬಂದಿಯವರು ಚಿಕ್ಕ ವಯಸ್ಸಿನಲ್ಲೇ ಬಿ.ಪಿ, ಶುಗರ್, ಹೃದಯಾಘಾತದಂತಹ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಪಾಪ ಪೋಲಿಸ್ ಗಂಡಂದಿರ ಮಡದಿಯರು ಮತ್ತು ಮನೆಯ ಸದಸ್ಯರೋ ದಿನಾ ಅವರ ಒತ್ತಡ ನೋಡಿ ನೋಡಿ ತಾವೇ ಅವರ ಸಮಸ್ಯೆ ಅರ್ಥ ಮಾಡಿಕೊಂಡು ಬಂದದ್ದನ್ನೆಲ್ಲ ಅನುಭವಿಸ್ತಾ ಇದಾರೆ.
ಕಷ್ಟ ಅರ್ಥ ಮಾಡಿಕೊಳ್ಳೋ ಹೃದಯವಂತ ಅಧಿಕಾರಿಗಳು ಸಹ ಇದಾರೆ. ಸುಧಾರಣೆ ಆಗುತ್ತೆ ಅನ್ನೋ ಭರವಸೆ ಅಷ್ಟೇ ನಮ್ಮದು. ನೋಡೊಣ ನಿರ್ಮಲ, ಕಾಲ ಹೀಗೇ ಇರಲ್ಲ.
———————————-
ಲಕ್ಷ್ಮೀ ರಾಮ್ , ದಾವಣಗೆರೆ .
ಜನಮಿಡಿತ ಪತ್ರಿಕೆಯಲ್ಲಿ ನೆನ್ನೆ ಇದಕ್ಕೆ ಪ್ರತಿಕ್ರಿಯಿಸಿದ್ದೆ ಮೇಡಂ,