ನಮ್ಮ ಕವಿ
ತಿಂಗಳ ಕವಿ
ಡಾ.ಮೀನಾಕ್ಷಿ ಪಾಟೀಲ
ಕವಿ-ಪರಿಚಯ
ಡಾ. ಮೀನಾಕ್ಷಿ ಪಾಟೀಲ್
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಪ್ರಾಥಮಿಕ ,
ಪ್ರೌಢ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣ,
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಣ
ಎಂ ಎ ಕನ್ನಡ ಹಾಗೂ ಬಿ ಎಡ್ ಪದವಿ
ಎಂ ಎ ಇಂಗ್ಲಿಷ್ —ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು
ಪಿ ಹೆಚ್ ಡಿ ಪದವಿ — ದ್ರಾವಿಡ ವಿಶ್ವವಿದ್ಯಾಲಯ ಕುಪ್ಪಂ ಹೈದರಾಬಾದ್
ಪಿ ಹೆಚ್ ಡಿ ಪ್ರಬಂಧದ ವಿಷಯ — ಕನ್ನಡದ ಜೈನ ರಾಮಾಯಣಗಳು ಒಂದು ವಿವೇಚನೆ
ವೃತ್ತಿ— ಕನ್ನಡ ಉಪನ್ಯಾಸಕಿಯಾಗಿ ಪದವಿ ಕಾಲೇಜಿನಲ್ಲಿ ಎಂಟು ವರ್ಷ ಸೇವೆ.
ಪ್ರಸ್ತುತ ಪದವಿ ಪೂರ್ವ ಕಾಲೇಜು ವಿಜಯಪುರ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ
ಒಟ್ಟು 26 ವರ್ಷಗಳ ಬೋಧನಾ ಅನುಭವ
ಗೌರವ ಸನ್ಮಾನ ಹಾಗೂ ಪ್ರಶಸ್ತಿಗಳು
ಸಾವಿತ್ರಿಬಾಯಿ ಫುಲೆ ರಾಜ್ಯಮಟ್ಟದ ಪ್ರಶಸ್ತಿ 2017
ಕರ್ನಾಟಕ ರಾಜ್ಯ ಸರ್ಕಾರ ಕೊಡ ಮಾಡುವ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿ 2018
ಅನೇಕ ಸಂಘ ಸಂಸ್ಥೆಗಳು ಕೊಡ ಮಾಡಿದ ಗೌರವ ಸನ್ಮಾನಗಳು ಶೈಕ್ಷಣಿಕ ಸೇವೆಗಾಗಿ
ಗೌರವ ಸನ್ಮಾನಗಳು ವಿಜಯಪುರ ಆಕಾಶವಾಣಿ ಕೇಂದ್ರ
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಳ್ಳುವಿಕೆ
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ 15 ಪ್ರಬಂಧಗಳ ಮಂಡಣೆ
ವಿಜಯಪುರ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮಗಳ ಪ್ರಸಾರ ಚಿಂತನ ವಿಭಾಗದಲ್ಲಿ ಹಾಗೂ ಯುವವಾಣಿ ವಿಭಾಗದಲ್ಲಿ.
ಕಾಲೇಜು ವಿದ್ಯಾರ್ಥಿಗಳಿಗೆ ಕ್ವಿಜ್ ಕಾರ್ಯಕ್ರಮದಲ್ಲಿ ಕ್ವಿಜ್ ಮಾಸ್ಟರ್ ಆಗಿ ಕಾರ್ಯನಿರ್ವಹಣೆ ಆಕಾಶವಾಣಿ ಮೂಲಕ
ಬೇರೆ ಬೇರೆ ಕಾಲೇಜುಗಳಲ್ಲಿ ಮತ್ತು ಸಂಘ ಸಂಸ್ಥೆಗಳ ಅಡಿಯಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಮೂಲಕ ನಡೆಯುವ ಕಾರ್ಯಕ್ರಮದಲ್ಲಿ ಉಪನ್ಯಾಸಕಿಯಾಗಿ ಮತ್ತು ಅತಿಥಿಯಾಗಿ ಭಾಗವಹಿಸಿದ್ದು.
ಜಿಲ್ಲಾ ,ರಾಜಮಟ್ಟದ ಹಾಗೂ ರಾಷ್ಟ್ರಮಟ್ಟದ ಕಲೆ ಸಂಸ್ಕೃತಿಕ ಸ್ಪರ್ಧಾತ್ಮಕ ಕಾರ್ಯಕ್ರಮದಲ್ಲಿ ಹಾಗೂ ಯುವ ಜನೋತ್ಸವ ಕಾರ್ಯಕ್ರಮಗಳ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ್ದು.
ಕಮ್ಮಟ ,ವಿಚಾರ ಸಂಕಿರಣ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದು.
ಗ್ರಾಮೀಣ ಮಕ್ಕಳಿಗೆ ಉಚಿತ ಇಂಗ್ಲಿಷ್ ತರಬೇತಿ ನೀಡುವುದು.
ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಯಾಗಿ ಸುಮಾರು 12 ವರ್ಷಗಳ ಸೇವೆ.
ಕ್ರೀಡಾ ವಿಭಾಗ ಹಾಗೂ ಎನ್ಎಸ್ಎಸ್ ವಿಭಾಗದ ರಾಜ್ಯಮಟ್ಟದ ಶಿಬಿರಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಪಾಲ್ಗೊಂಡಿದ್ದು.
ಯೂಟ್ಯೂಬ್ ಚಾನಲ್ಗಳ ಮೂಲಕ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಕನ್ನಡ ಸಾಮಾನ್ಯ ಜ್ಞಾನ ಪಾಠ ಬೋಧನೆ
ಹವ್ಯಾಸಗಳು
ಸಾಹಿತ್ಯದಲ್ಲಿ ಅಭಿರುಚಿ ,ಓದು ಬರವಣಿಗೆ
ನಿಯತಕಾಲಿಕೆಗಳಲ್ಲಿ ವೈಚಾರಿಕ ಲೇಖನಗಳ ಪ್ರಕಟಣೆ
ಪತ್ರಿಕೆಗಳಲ್ಲಿ ಪ್ರಕಟವಾದ ಬಿಡಿ ಲೇಖನಗಳ ಒಟ್ಟುಗೂಡಿಸಿ ವೈಚಾರಿಕ ಲೇಖನಗಳ ಒಂದು ಸಂಗ್ರಹ ,”ಚಿತ್ತಾರ”ಪ್ರಕಟಣೆ.
ಕವನ ಸಂಕಲನ ಒಂದು ಬಿಡುಗಡೆಯ ಹಂತದಲ್ಲಿದೆ.
ಡಾ.ಮೀನಾಕ್ಷಿ ಪಾಟೀಲರವರ ಕವಿತೆಗಳು
ಅಗಲದಿರು ನನ್ನ
ಹೊತ್ತು ಮೂಡುವ ಮುನ್ನ
ಮೂಡಣದಿ ಉಷೆ ಕೆಂಬಣ್ಣದಿ ಮೀಯುತಿರೆ
ಹೊಂಗದಿರ ಸೂರ್ಯ
ಹೊನ್ನಮಳೆ ಸುರಿಯುತಿರೆ
ಅಗಲದಿರು ನನ್ನ
ರನ್ನ ಬೆಳಗಿನಲಿ
ಬೆಳಕಾಗಿ ಮೂಡಣದಿ
ಅಂಗಳದಿ ಹಸೆ ಹಾಕಿ
ರಂಗವಲ್ಲಿಯ ಚುಕ್ಕಿಗಳನು
ಕೂಡಿಸಲು ಬಾರದಿರೆ ಅಗಲದಿರು ನನ್ನ
ಅರಳಿದ ಗುಲಾಬಿ
ಕಂಪಿಡುವ ಮಲ್ಲಿಗೆ
ಸುಂದರ ಸೇವಂತಿಗೆ
ಸೊಂಪಾದ ಸಂಪಿಗೆ
ನೀನಿರದಿರೆ ಅರಳವು ಅಗಲದಿರು ನನ್ನ
ಅಡುಗೆ ಮನೆಯಲ್ಲಿ
ಬಳೆಗಳ ಸದ್ದಿಲ್ಲದಿರೆ
ಕಾಲ್ಗೆಜ್ಜೆಗಳ ಕುಣಿತವಿಲ್ಲದಿರೆ
ಒಗ್ಗರಣೆಯ ಗಮವಿಲ್ಲದಿರೆ
ರುಚಿಸದು ಅನ್ನ ಅಗಲದಿರು ನನ್ನ
ನನ್ನ ಮುದ್ದು ಮಕ್ಕಳ ತಾಯಿ
ಚೆಲುವಿನ ಗೆಳತಿ
ಮಗುವೊಂದು ಅಳುತಿರಲು
ರಮಿಸಲು ಬಾರದೆನಗೆ
ಮುದ್ದು ಮಗುವಿಗಾದರೂ ಅಗಲದಿರು ನನ್ನ
******
ಹಕ್ಕಲು ತೆನೆ
ಬಿದ್ದು ಹೋದ ತೆನೆಗಳ
ಬೀಳು ಬಯಲ ಕಣ ಮಾಡಿ
ಒಟ್ಟಲಿಗೆಗೆ ಅಣಿಗೊಳಿಸುವ ಮುನ್ನ
ಒಂದೊಮ್ಮೆ ಪರಿಕಿಸು ತೆನೆಯನ್ನು
ಭಾವ ಬಂಧುರದ ಕಟ್ಟಿನಲಿ
ಅಂತರಂಗದ ಮಾತುಗಳ
ಮಥಿಸು ಬಸವನ ಪಾದದಿ
ರಾಶಿಗೆ ಮುನ್ನ ಹಿಡಿ ಹಿಡಿ
ಕಾಳು ಪುಡಿ ಪುಡಿಯಾಗದಂತೆ
ಹಾಳಾಗುವ ಮುನ್ನ ಕೊಯ್ದು
ಸಿವುಡು ಕಟ್ಟುವ ಕಲೆ,
ಪೆಂಡಿ ಪೆಂಡಿಗಳನ್ನಾಗಿಸಿ
ಗೂಡಿಗೆ ಒಟ್ಟಿದ ತೆನೆಭರಿತ
ದಂಟುಗಳು ಮುತ್ತಿನ ಸಾಲಿನಂತೆ
ಹೊಲದ ತುಂಬಾ ಉದುರಿದ
ಗಟ್ಟಿಕಾಳುಗಳು ಮುತ್ತಿನಂತೆ
ಕಾಳು ತುಂಬಿದ ಹಕ್ಕಲು ತೆನೆಗಳು
ಬಿತ್ತಿದ ಬೀಜ ನೆಲನ ತಬ್ಬುವಂತೆ
ಎದೆಗೆ ಅಪ್ಪುವ ಭಾವಗಳು
ಜೋಳ್ಳು ಕಾಳುಗಳು ತೇಲಿ ಹೋಗಲಿ
ಗಟ್ಟಿ ಕಾಳುಗಳು ತಳಕ್ಕುಳಿಯಲಿ
ಸಹೃದಯರ ಮನಮುಟ್ಟುವ
ರಾಶಿಯಾಗಲಿ
ಬಯಲ ಭಾವನೆಗಳ ಕಣದಲಿ
*****
ಮಾರಿಹಬ್ಬ
ಊರ ಹೆಂಗಸರೆಲ್ಲ
ವಾರದ ಹೆಸರಲ್ಲಿ ಎಡಿಯ ಮಾಡ್ಯಾರು ದೇವಿಗೆ
ಉಡಿಯ ತುಂಬ್ಯಾರೋ ತಾಯಿಗೆ
ತುಂಬಿದ ಮಡಿ ನೀರು
ಮಡಿಕ್ಯಾಗ ಬೇವು
ಹಿಡಿದು ಹೊಂಟಾರೇನೋ ಅವ್ವನ ಗುಡಿಗೆ
ನಡುವ ಪಲ್ಲಕ್ಕಿ
ಎಡಬಲಕ ಭಕ್ತರು
ಪಲ್ಲಕ್ಕಿ ಸುತ್ತ ಕಂಬಳಿ ಗದ್ದುಗೆ
ಕರಿಯ ಚಂದ್ರ ಕಾಳಿ
ಕರಿ ಹರಿಯದ ಸೀರಿ
ಮ್ಯಾಲೆ ಚಿತ್ತಾರದ ಕಸೂತಿ ಬರದಾರ
ಬೆಳ್ಳಿಯ ಕಣಬಟ್ಟು
ದೊಡ್ಡ ಕುಂಕುಮ ಬೊಟ್ಟು
ಗಲ್ಲದ ತುಂಬೆಲ್ಲ ಭಂಡಾರದ ಸಿಂಗಾರ
ಮೊಸರ ನುಚ್ಚಿನ ಬಾನ
ಎಡೆಯ ತಂದಾರೇನss
ಇಡಗಾಯಿ ಒಡೆದು ಹರಿಕಿ ತೀರಿಸ್ಯಾರ
ಹರಡಿದ ಹಣತೆ ಬೆಳಕು
ಗುಗ್ಗುಳದ ಹೊಗೆ ಚಿಮ್ಮಿ
ಮುಗಿಲ ತುಂಬೆಲ್ಲಾ ಹರಸ್ಯಾದ
ಹಬ್ಬುವ ಹೊಕ್ಕಳ ಬಳ್ಳಿ
ಕುಡಿಯ ಚಾಚಿದ ಹೂವು
ಏಳು ಮಕ್ಕಳ ತಾಯಿಗೆ
ಬಂದರss ಬಾರೋ ಮಳೆರಾಯ
ನೀ ನಿಂತರ ನಿಲ್ಲೋ ಗಳಿಗಿ
ತಾಯಿಯ ಗುಡಿ ಮುಂದ
ತಾಯಿಯ ಗುಡಿಯ
ತಡಕಿ ಬಾಗಿಲ ಮುಂದೆ
ಹುಯ್ಯೋ ಹುಯ್ಯೋ ಮಳೆರಾಯ
ಗೊಬ್ಬರ ಗಣಜಲಿ
ಸಿಡುಬು ಬ್ಯಾನಿಯ ಅವ್ವ
ಮಕ್ಕಳ ತಂದಾರ ನಿನ್ನ ಪಾದಕ್ಕ
ಕುರಿ ಕೋಳಿ ಕೋಣನ
ಏನು ಬೇಡತಿ ತಾಯಿ
ಗಂಟೆಯ ಮೊಳಗಿನಲ್ಲಿ ಕರಗಿ ಹೋಗ್ಯಾರ
ನೆತ್ತರದ ಅಭಿಷೇಕ
ಬಾಡೂಟದ ಬಾನವ
ನಿನ್ನ ಹೆಸರ ಹೇಳಿ ತಿಂದು ತೇಗ್ಯಾರ
ದಿಕ್ಕು ಕಾಣದ ಕೋಣ
ಕೊಸರಾಡಿ ಹರಕೊಂಡು
ದಿಕೆಟ್ಟು ಓಡ್ಯಾವ ಜೀವ ಭಯದಿ
ಜೀವದ ಹಂಗಿಗೆ ಓಡುವ ಕೋಣಕ್ಕ
ಅಪಶಕುನದ
ಕಥೆಯ ಕಟ್ಟಾರ ನೋಡ
ಗೋಡೆ ಮ್ಯಾಲಿನ ಹಲ್ಲಿ
ಶಕುನವ ನುಡಿದಿತ್ತ ಪೂಜಾರಪ್ಪ
ಬೆದರಿ ಬೆಂಡಾಗಿ ಹೋದ
ಗಂಟೆ ಜಾಗಟೆ ಸದ್ದು ಡೊಳ್ಳು ನಗಾರಿ ನಾದ
ಮಾರಿಗುಡಿ ಅಂಗಳದಿ ಮೈತುಂಬಿ ಕುಣಿದಾರ
ಗಂಟಿ ಚೌಡ್ಯಾರು
—————————————————————–
ಡಾ. ಮೀನಾಕ್ಷಿ ಪಾಟೀಲ್