ವಿಜಯಪ್ರಕಾಶ್ ಸುಳ್ಯ-ಅಕ್ಷರಗಳ ಆರಾಧನೆ

ಕಾವ್ಯಸಂಗಾತಿ

ವಿಜಯಪ್ರಕಾಶ್ ಸುಳ್ಯ

ಅಕ್ಷರಗಳ ಆರಾಧನೆ

ಅಕ್ಷತೆಯಲಿ ಮೂಡಿದಾಗಿಂದ ಸ್ವರಗಳು ಸದ್ದು ಮಾಡುತ್ತಿವೆ ಜೋರು
ಅಕ್ಷರದ ಆಕಾರವನು ಕೊಡುವ ಬಯಕೆಯಿದೆಯದಕೆನಗೆ ನಿತ್ಯ ಚೂರು
ಅಕ್ಷಯವಾಗಲೆನ್ನುವ ಹರಕೆಯಲಿ ಹಚ್ಚಿಡುತಿರುವೆನು ನುಡಿಯ ಸೊಡರು
ಅಕ್ಷಮಾಲೆಯ ಹಿಡಿದು ಜಪಿಸುತ್ತಿದೆ ಕನ್ನಡವೆಂದು ನನ್ನೀ ಉಸಿರು

ಅರಗಿಸಲಾಗದ ನೋವು ಮೈಕೊಡವಿ ನಿಂದಿರಲು ನಲುಗಿ ಹೋಗಿತ್ತು ಬಾಳು
ಅರಿವಿನ ಆಯುಧವ ಕೈಗಿತ್ತ ಕನ್ನಡಮ್ಮನಿಗೆ ಮನವೆನ್ನುತಿದೆ ಜೈಕಾರ ಹೇಳು
ಸರಿ ತಪ್ಪುಗಳ ಸಮರದಲಿ ಸಿಲುಕಿ ಹೃದಯ ಮಂದಿರವು ಬಿದ್ದಿತ್ತು ಪಾಳು
ಅರಿವನರಸುತಲಿರಲು ವೇದ್ಯವಾಯಿತು ಸಹಜವೆಂದು ಬದುಕಲ್ಲಿ ಏಳುಬೀಳು

ಕುಣಿಸುತಿರುವಳವಳು ಪದಗಳನು ಥರ ಥರದ ಭಾವದಲಿ
ಮಣಿಸಿದೆನು ದುಗುಡವನು ಮನದ ಮಾತುಗಳ ಇಳಿಸಿ ಹಾಳೆಯಲಿ
ತಣಿಯದ ಜ್ಞಾನದ ಹಸಿವನುಳಿಸಿದಳು ಹಸಿರಾಗಿ ಎದೆಯಲಿ
ಋಣಿಯಾಗಿರುವೆನು ಅವಳಿಗೆ ನಾ ಇರುವ ತನಕ ಈ ಮಣ್ಣಲಿ.


Leave a Reply

Back To Top