ಕಾವ್ಯ ಸಂಗಾತಿ
ಡಾ. ಬಸಮ್ಮ ಗಂಗನಳ್ಳಿ
ಅಮ್ಮಾ ಯಾಕೆ ಹೀಗೆ?
ಅಮ್ಮಾ,ಯಾಕೆ ನನ್ನನು ಮುಳ್ಳು ಕಂಟಿ ಕಸದ ತೊಟ್ಟಿಗೆ ಹಾಕುವೆ, ನೀನು ?
ನಾನೇನು ತಪ್ಪು ಮಾಡಿದೆ ಹೇಳು !
ನೀನೇ ತೊರೆದ ಈ ಜೀವಕೆ ಇನ್ನೆಲ್ಲಿದೆ ಆಶ್ರಯ?
ಅಮ್ಮಾ ,ನನಗೆ ಒಂದಿಷ್ಟು ದಿನ ಸಾಕು
ನಿನಗಂಟಿದ ಕಳಂಕ ಅಳಿಸಿ ಹಾಕುವೆ
ಈ ಸಮಾಜದ ವ್ಯವಸ್ಥೆಯ ಬೇರನೆ ಕೀಳುವೆ
ಕಟು ಸತ್ಯದ ಕಹಿಗಳನುಂಡ ನಿನಗೆ ಖುಷಿಯ ನೀಡಲು ಬದುಕಿಸು …
ಅಮ್ಮಾ, ಆಧುನಿಕ ಯುಗದವಳು ನೀ
ಯಾಕೆ ಇನ್ನೂ ಹೆದರುವೆ ಹೇಳು?
ನೀನು ಹೆರುವ ಮಗುವ ಸಲಹುವ ಹಕ್ಕನು ಪಡೆ
ಮತ್ತೆ ದೃಢತೆಯಲಿ ನಡೆ
ಹೊಸ ಇತಿಹಾಸಕ್ಕೆ ಮುನ್ನುಡಿ ಬರೆ ….
ಆಗದಿರು ನೀ ಮತ್ತೆ ಕುಂತಿ ಆಗಬೇಡ ನೀನು ಮಾದ್ರಿಯೂ ಸಹಿತ
ಅಗ್ನಿಯಲಿ ಹೊಗಬೇಡ ನೀನು ಸೀತೆಯಂತೆ
ಸುಮ್ಮನಿರಬೇಡ ಅವಮಾನ ಸಹಿಸಿ ಬಹುಕಾಲ ದ್ರೌಪತಿಯಂತೆ
ಮೊಗದೊಂದು ದಾರಿ ಬೇಗ ಹುಡುಕಿ ,ಬೆಳಕು ನೀಡು ನನ್ನ ಬಾಳಿಗೆ …
ಯಾರೇನೇ ಅಂದುಕೊಳ್ಳಲಿ ಬಿಟ್ಟು ಬಿಡು
ಜೀವ ಭಾರದಿ ನಲುಗದೆ ಹಗಲಿರುಳು ಕನಲದೆ
ಹರುಷದಿ ನನ್ನನು ಎತ್ತಿಕೋ
ಅಮ್ಮಾ , ನಿನ್ನ ಮಡಿಲ ಸ್ವರ್ಗ ಸೇರುವೆ ಕರುಣಿಸು, ಕರುಣಿಸು
ನಿನ್ನ ಎದೆ ಹಾಲ ಅಮೃತ ಉಣಿಸು ಅಮ್ಮಾ ,ಹಸಿದಿರುವೆ
ಬೀಸಾಕು ಅರ್ಥವಿಲ್ಲದ ಆಚರಣೆ,ನಂಬಿಕೆಗಳನ್ನು
ಛಲದಿ ಮುನ್ನಡೆದು ಹೊಸ ಭಾಷ್ಯ ಬರೆ ನೀನು….
ಅಮ್ಮಾ ,ನನ್ನ ಸಾಯಿಸಿ ನೀನು ಸಂತಸದಿ ಇರುವೆಯಾ? ಒಳಗೆ ಸತ್ತು ಹೊರಗೆ ಬದುಕುವೆ ಯಾಕಮ್ಮಾ ಈ ಯಾತನೆ? ಸುಮ್ಮನೆ ಎತ್ತಿಕೋ ಧೈರ್ಯದಿ ನನ್ನನು
ತಾಯ್ತನವ ಬತ್ತಿಸಬೇಡ, ನೋಡು ಪ್ರಾಣಿ-ಪಕ್ಷಿಗಳು ತಮ್ಮ ಮಕ್ಕಳನು ಕಾಪಾಡುವ ಪರಿಯನು ,
ಅಮ್ಮಾ ,ಇಗೋ
ವಿನಮ್ರದ ಮನವಿ ಇದು ನಿನ್ನಲಿ
ಡಾ. ಬಸಮ್ಮ ಗಂಗನಳ್ಳಿ