ಕಾವ್ಯ ಸಂಗಾತಿ
ಸುಲೋಚನಾ ಮಾಲಿಪಾಟೀಲ
ಮಳೆಗಾಲದ ಸಂಭ್ರಮ
ಕೋಲಮಿಂಚು ಗುಡುಗಿನ ನರ್ತನ
ಕಾರ್ಮೋಡಗಳ ಘರ್ಷಣೆಯ ಗಗನ
ಭೂತಾಯಿ ಮಳೆರಾಯನ ಸ್ವಾಗತಿಸಲು
ಸುರಿದು ಮಳೆಗೆ ತಣಿದ ಭೂ ವದನ
ಮಳೆಗಾಲದ ಮಳೆ ಬಂತು ಮಳೆ
ರೈತರ ಮುಖದಲ್ಲಿ ಕಂಡಿತು ಕಳೆ
ನದಿ ಹಳ್ಳ ಕೊಳ್ಳ ತುಂಬಿ ನಗುತಿರೆ
ಸೃಷ್ಟಿ ಸೊಬಗಿಗೆ ಆಸರೆಯಾದ ಧರೆ
ಭೋರ್ಗರೆವ ಜಲಪಾತಗಳ ಗರ್ಜನ
ಸಂಭ್ರಮಿಸುವ ಪ್ರವಾಸಿಗಳ ಮನ
ಕೈ ಬೀಸಿ ಕರೆವ ಜಲಧಾರೆಯಲ್ಲಿ
ಮಳೆಯಲ್ಲೆ ತನುವಿಗಾದ ಅಭ್ಯಂಜನ
ಮಕ್ಕಳೆಲ್ಲ ಮಳೆಯಲ್ಲಿ ಒದ್ದೆಯಾಗಿ
ಜಿಗಿತ ಕುಣಿದಾಟದ ಆಟ ಹುರುಪಾಗಿ
ಹರಿವ ನೀರಿಗೆ ಬಿಟ್ಟ ಕಾಗದದ ದೋಣಿ
ಮುಳಗದೆ ಗೆಲುವು ತಂದಿತು ಚಿನ್ನರಿಗಾಗಿ
ಸಕಲ ಜೀವರಾಶಿಗಳಿಗೆ ಬದುಕಲು
ಮರಗಳಿಂದ ಪರಿಸರ ಬೆಳೆಯಲು
ವರ್ಷಾಋತು ಆಗಮನವಾಗುತ್ತಿದ್ದಂತೆ
ಹಸಿರು ಹಸಿರಾಯಿತು ನಿಸರ್ಗದ ಮಡಿಲು
ಸುಲೋಚನಾ ಮಾಲಿಪಾಟೀಲ