ಶಂಕರಾನಂದ ಹೆಬ್ಬಾಳ/ದೇವರು ಕೇಳದ ದನಿ

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ದೇವರು ಕೇಳದ ದನಿ


ಕಾಮುಕರ ಅಟ್ಟಹಾಸಕಂಡು
ಮೂಕರೋಧನೆ ಪಟ್ಟೆಯಲ್ಲ
ಅಂಗೋಪಾಂಗ ಸವರಿದರೂ
ಪ್ರತಿಭಟಿಸಲಿಲ್ಲ…
ಇಷ್ಟಾದರೂ,
ನೀನು ಚೀರಲೆಯಿಲ್ಲ…!

ಹೆಣ್ಣು ಅಬಲೆಯಲ್ಲ ಸಬಲೆಯೆಂಬ
ಮುಗಿಲೆತ್ತರಕೆ ಕೇಳಿದರೂ
ಇಲ್ಲಿ, ಅಮಾಯಕ ಜೀವಕ್ಕೆ
ಬೆಲೆಯಿಲ್ಲ….
ಇಷ್ಟಾದರೂ,
ನೀನು ಚೀರಲೆಯಿಲ್ಲ…!

ಬೆಂಕಿಪಟ್ಟಣದ ಕಡ್ಡಿಯ ಹಾಗಿದ್ದೆ,
ಅಂಗಸೌಷ್ಠವದ ಅಂದಕ್ಕೆ
ಮಾರುಹೋಗಿ ರಸ ಹಿಂಡಿ
ಹಿಪ್ಪೆ ಮಾಡಿದ ಕಬ್ಬಾದೆಯಲ್ಲ…
ಇಷ್ಟಾದರೂ,
ನೀನು ಚೀರಲೆಯಿಲ್ಲ…!

ಉಬ್ಬಿದ ಎದೆಗಳನು
ಬಯಸಿದವರು,
ಕಾಮದಾಸೆಗೆ ಜೀವಂತ
ಶವವಾಗಿ ನಿನ್ನನಿರಿಸಿದರಲ್ಲ
ಇಷ್ಟಾದರೂ,
ನೀನು ಚೀರಲೆಯಿಲ್ಲ….!

ದುಃಖದ ಕಡಲಿನಲ್ಲಿ
ನಿತ್ಯವೂ ಮುಳುಗಿ
ಈಗ ಅತ್ತರೇನು..?
ಮಾನ ಹೋದಮೇಲೆ
ಇದ್ದರೆಷ್ಟು…ಬಿಟ್ಟರೆಷ್ಟು…
ಎಂಜಲಲೆಯಾಗಿ
ಬಾಳಬೇಕಲ್ಲ
ಇಷ್ಟಾದರೂ,
ನೀನು ಚೀರಲೆಯಿಲ್ಲ….!

ಓ ದೇವರೆ….
ಹೆಣ್ಣಾಗಿ ಹುಟ್ಟಿಸಿದೆಯೇಕೆ..?
ಎಂದು ಶಪಿಸುತ್ತ
ಕೂಡುವೆಯಲ್ಲ
ಇಷ್ಟು ಚೀರಿದರೂ,
ಆ ದೇವರು ಕೇಳಲೆಯಿಲ್ಲ…..!


ಶಂಕರಾನಂದ ಹೆಬ್ಬಾಳ

Leave a Reply

Back To Top