ಕಾವ್ಯ ಸಂಗಾತಿ
ಜಯಂತಿ ಸುನಿಲ್
ಕತ್ತಲಿನ ಮೋಸ
ಗೋಡೆಯ ಮೇಲೆ ಹಚ್ಚಿಟ್ಟ ದೀಪ..
ಎರಡೂ ಬದಿ ಕತ್ತಲು.
ಅತ್ತಲೂ ಬಾರದ,ಇತ್ತಲೂ ನುಸುಳದ ಬೆಳಕು.
ಕತ್ತಲಿನ ಮೋಸವಿದು,ಬೆಳಕಿಗೆ ತಿಳಿಯದು.
ಸಣ್ಣಗೆ ನುಸುಳುವ ಬೆಳಕಿನ ಅಂತರಂಗದಲ್ಲೂ ಕತ್ತಲು
ಅದೇ ವೇಳೆಗೆ….
ದೇಹಕ್ಕೆ ಮೆತ್ತಿಕೊಂಡ ಮಾನ ಬಟ್ಟೆಗಾಗಿ ಹುಡುಕಾಡುತ್ತದೆ
ಸಿಕ್ಕಿದ್ದೇ ತಡ,,
ಕಳ್ಳ ಬಿದ್ದು ಹೋಗುವವನ ನಡಿಗೆಗೆ
ಮೂಲೆಮನೆಯ ಕಳ್ಳಬೆಕ್ಕಿಗೆ ಎಚ್ಚರ.
ಮಾತೇ ಮುಗಿದು ಹೋದಂತ ಗೋಡೆಗಳು,
ಧುಮ್ಮಿಕ್ಕಿ ಹರಿಯುವ ಪ್ರವಾಹದಂತಹ ಅಳಲು
ಮಂಚದ ಮನೆಯಲ್ಲಿ ಬೆಳದಿಂಗಳಿಲ್ಲಾ
ಬರೀ ಕತ್ತಲು…
ಇದಕ್ಕೆ ದೇಹವೇ ಸಾಕ್ಷಿ
ಹೌದು!
ಕೆಲವು ವಿಚಾರಗಳಿಗೆ ಅಂತರಂಗದ ವಿವರಣೆಗಳು ಬೇಕಿಲ್ಲ
ನೀನೆಂದರೆ ದೇಹವಲ್ಲವೆಂದ..
ಪ್ರೇಮವೆಂದರೆ ಸ್ಪರ್ಷವಲ್ಲವೆಂದ..
ಮತ್ತಿದೇಗೆ ಫಸಲು?
ಅರೇ!!
ಅವಳ
ಕಣ್ಣಲ್ಲೇ ಕಾರುವ ಕಿಡಿ ನೋಡಿ,
ಅರ್ಧರ್ಧ ಮಾತು ಕೇಳಿ,
ಅಕಾಲಿಕ ಮೌನ ಗಮನಿಸಿ
ಇವಿಷ್ಟೇ ಸಾಕು…
ಫಸಲಿಗೆ ಸಿಕ್ಕ ಮರ ಎಷ್ಟು ನರಳಿದ್ದಿರಬಹುದೆಂದು ಊಹಿಸಲು…
ಎಣ್ಣೆ ಮುಗಿದೊಡೆ ಬತ್ತಿಗೆ ಕೆಲಸವಿಲ್ಲಾ…
ಅವಶ್ಯಕತೆ ಮೂಗಿದೊಡೆ ಹೆಣ್ಣೇ
ತಿಪ್ಪೆಗೆಸೆವ ತ್ಯಾಜ್ಯವಾಗುವಳಲ್ಲಾ?
ಜಯಂತಿ ಸುನಿಲ್
ಅಕ್ಷರ ಜೋಡಣೆ ಭಾಳ ಚಲೋ ಐತ್ರಿ