ವಚನ ಸಂಗಾತಿ
ಚಂದಿಮರಸರ
ವಚನ ವಿಶ್ಲೇಷಣೆ,
ಪ್ರೊ. ಜಿ.ಎ ತಿಗಡಿ, ಸವದತ್ತಿ
ಕುರುಡ ಕಾಣನೆಂದು, ಕಿವುಡ ಕೇಳನೆಂದು
ಹೆಳವ ಹರಿಯನೆಂದು,
ಮರುಳ ಬಯ್ದನೆಂದು,
ಪಿಶಾಚಿ ಹೊಯ್ದನೆಂದು
ಮನಕತಬಡುವರೆ ಹೇಳಾ?
ತಾನರಿವುಳ್ಳಾತ ತತ್ವವನರಿಯದವರಲ್ಲಿ
ಗುಣದೋಷವನರಸುವರೆ ಹೇಳಾ,
ಸಿಮ್ಮಲಿಗೆಯ ಚೆನ್ನರಾಮಾ.
ಕುರುಡ ತನಗೇನೂ ಕಾಣದೆಂದೂ, ಕಿವುಡ ತನಗೇನು ಕೇಳಲಾರದೆಂದೂ, ಕುಂಟ ತನಗೆ ನಡೆಯಲುಬಾರದೆಂದೂ, ಹುಚ್ಚ ತನ್ನನ್ನು ಯಾರೋ ಬೈಯುತ್ತಿದ್ದಾರೆಂದೂ, ಪಿಶಾಚಿಗಳು ನಮ್ಮನ್ನು ಹೊಡೆಯುತ್ತಿದ್ದಾರೆಂದೂ ಎಂದಾದರೂ ಚಿಂತಿಸಿ ವ್ಯಸನ ಪಡುತ್ತಾರೆಯೇ ? ಇಲ್ಲ,ಇಲ್ಲ. ಹಾಗೆಯೇ ಅರಿವುಳ್ಳವರು ತತ್ವಗಳನ್ನರಿಯದವರಲ್ಲಿ ಗುಣದೋಷಗಳನ್ನು ಹುಡುಕುತ್ತಾರೆಯೇ ? ಹೇಳು ಗುರುವೇ ಎಂದು ಚಂದಿಮರಸರು ಕೇಳುತ್ತಾರೆ.
ತನ್ನ ತಾನರಿದು ಮಹಾಘನ ಸ್ವರೂಪಿ ಚೈತನ್ಯದಲ್ಲಿ ಒಂದಾದವರು ಸಾಮಾನ್ಯರಂತೆ ತತ್ವಗಳನ್ನು ಅರಿಯದವರಲ್ಲಿ ಗುಣದೋಷಗಳನ್ನು ಹುಡುಕುತ್ತಾ ಹೋಗಬಾರದೆನ್ನುತ್ತಾರೆ ಚಂದಿಮರಸರು. ಸಮಾಜದಲ್ಲಿ ತತ್ವಗಳನ್ನರಿತು ನಡೆನುಡಿ ಒಂದಾದವರು ವಿರಳಾತಿ ವಿರಳ. ಇಂಥವರು ಎಲೆ ಮರೆಯ ಕಾಯಿಯಂತೆ ತಮ್ಮ ಸಾಧನೆಯಲ್ಲಿಯೇ ನಿರತರಾಗಿರುತ್ತಾರೆ. ಅವರೆಂದೂ ಕೀರ್ತಿ, ಪ್ರಸಿದ್ಧಿಗೆ ಆಸೆಪಡುವವರಲ್ಲ. ಇನ್ನು ಕೆಲವರು ತತ್ವಗಳನ್ನು ಓದಿಕೊಂಡು ಅವುಗಳನ್ನು ಸ್ವತ: ಅನುಷ್ಠಾನಕ್ಕೆ ತರಲಾರದೆ ತಾವು ಮಹಾ ಪಂಡಿತರೆಂದು, ಜ್ಞಾನಿಗಳೆಂದು ಪೋಸ್ ಕೊಡುವವರು ತುಂಬಾ ಜನರಿದ್ದಾರೆ. ತತ್ವಗಳನ್ನು ಉರುಹೊಡೆದು ಪ್ರತಿಷ್ಠಿತರೆನಿಸಿದ ಇವರು ಜನರಿಗೆ ಮಂಕು ಬೂದಿ ಎರಚಿ ಶೋಷಣೆ ಮಾಡುತ್ತಿರುತ್ತಾರೆ. ಇಂಥವರಲ್ಲಿ ಗುಣದೋಷಗಳನ್ನರಸುವುದೆಂದರೆ ಹುಚ್ಚುತನವೇ ಸರಿ. ಇಂತಹ ಹುಚ್ಚು ಸಾಹಸಕ್ಕೆ ಅರಿತವರು ಎಂದಿಗೂ ಕೈ ಹಾಕಬಾರದೆಂದು ಚಂದಿಮರಸರು ಸಲಹೆ ಮಾಡುತ್ತಾರೆ. ಕುರುಡ ಕಾಣಲಾರೆನೆಂದು, ಕಿವುಡ ಕೇಳೆನೆಂದು, ಕುಂಟ ನಡೆಯಲಾರೆನೆಂದು, ಹುಚ್ಚ ನಿಂದಿಸುತ್ತಿದ್ದಾನೆಂದು, ಪಿಶಾಚಿಗಳು ಹೊಡೆಯುತ್ತಿದ್ದಾರೆಂದು, ಅವರು ಚಿಂತಿಸಿ ವ್ಯಸನಪಟ್ಟದ್ದುಂಟೆ ? ಇಲ್ಲ, ಇಲ್ಲ, ಅವರಿಗೆ ತಮ್ಮ ತಮ್ಮ ನ್ಯೂನತೆಗಳ ಅರಿವು ಚೆನ್ನಾಗಿ ತಿಳಿದಿದೆ. ಹೀಗಾಗಿ ತಮ್ಮ ಅಂಗವಿಕಲತೆಗಳ ಮಿತಿಯನ್ನು ಮೀರಿ ಇಂತಹ ಸಾಹಸಗಳಿಗೆ ಅವರೆಂದೂ ಕೈ ಹಾಕಲಾರರು. ಹಾಗೆಯೇ ಅರಿವುಳ್ಳವರು ಅರಿವಿಲ್ಲದವರಲ್ಲಿ ಗುಣದೋಷಗಳನ್ನು ಎಣಿಸಬಾರದು. ಇದರಿಂದ ಅವರಿಗೇ ಹಾನಿಯಾಗುತ್ತದೆ, ಎಂದು ಚಂದಿಮರಸರು ಹೇಳುತ್ತಾರೆ.
ಪ್ರೊ. ಜಿ.ಎ ತಿಗಡಿ, ಸವದತ್ತಿ