ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಬಾಳು ಬಂಗಾರವಾಗಿರಲು ನೀವೇನು ಮಾಡುತ್ತಿದ್ದೀರಿ?

“ಬಾಳು ಬಂಗಾರವಾಗಿರಲಿ” ಎಂದು ಹಿರಿಯರು ಆಶಿಸಿದರೆ ಕಿರಿಯರು ಕೂಡ ಅದನ್ನೇ ಬಯಸುತ್ತಾರೆ.  ಹಿರಿ ಕಿರಿಯರು ಆಶಿಸುವ ಈ ಸಾಲನ್ನು ನೆನೆಸಿಕೊಂಡರೆ ಹೌದು ಎಲ್ಲರಿಗೂ ಬಂಗಾರವಾದಂತ ಬಾಳು ಬೇಕು. ಬಾಳನ್ನು ಬಂಗಾರವಾಗಿ ಸುವುದು ಹೇಗೆ? ಬಂಗಾರವೆಂದರೆ ಅತ್ಯಂತ ಬೆಳೆಬಾಳುವ ಲೋಹ. ಬಂಗಾರವನ್ನು ಇಷ್ಟಪಡದ ಮನಸ್ಸಾದರೂ ಯಾವುದು? ಬಾಳು ಬಂಗಾರವಾಗುವಂತೆ ಒಮ್ಮೆ ಮಾಡಿದರೆ ಸಾಕೆ ಮುಂದೆ ಬಾಳು ಬಂಗಾರವಾಗಿಯೇ ಇರುತ್ತದೆಯೇ? ಬಾಳು ಬಂಗಾರವಾಗಿದ್ದರೆ ಸಾಕೆ ಜಗದಲ್ಲಿ ಬದುಕಲು ?ಹಾಗಾದರೆ ಈ ಬಂಗಾರವೆಂದರೆ ಏನು? ಅಯ್ಯೋ ! ಈ ಬಂಗಾರದ ಮೇಲೆ ಅದೆಷ್ಟು ಪ್ರಶ್ನೆಗಳು ಮನಸ್ಸಿನಲ್ಲಿ!  ಪ್ರತಿನಿತ್ಯ ಬಾಳುವ ಬಾಳನ್ನು ಬಂಗಾರ ಮಾಡಿಕೊಳ್ಳಲು ಸಾಧ್ಯವೇ ಇಲ್ಲವೇ? ಪ್ರತಿಯೊಬ್ಬರಿಗೂ ಅವರವರ ಬಾಳನ್ನು ಬಂಗಾರ ಮಾಡಿಕೊಳ್ಳಲೇ ಬೇಕೆ? ಬಾಳನ್ನು ಬಂಗಾರವಾಗಿಸುವುದು ಅತ್ಯಂತ ಸುಲಭದ ಕೆಲಸವೇ? ಹಾಗಾದರೆ ಎಲ್ಲರೂ ಯಾಕೆ ತಮ್ಮ ಬಾಳನ್ನು ಬಂಗಾರವಾಗಿಸಿಕೊಳ್ಳುತ್ತಿಲ್ಲ? ಅದೆಷ್ಟು ಜನ ತಮ್ಮ ಬಾಳನ್ನು ಬಂಗಾರವಾಗಿ ಮಾಡಿಕೊಂಡಿದ್ದಾರೆ? ಬಾಳು ಬಂಗಾರವೇ ಆಗಬೇಕೆ ಅದಕ್ಕಿಂತಲೂ ಬೆಲೆ ಬಾಳುವ ಲೋಹಗಳಲ್ಲವೇ? ಬಾಳು ವಜ್ರಬೇಕೆ ಆಗಬಾರದು? ಬಾಳು ಪ್ಲಾಟಿನಮ್ ಆಗಬಾರದೇ? ಇವನ್ನೆಲ್ಲ ನೀವು ನನಗೆ ತರಲೆ ಪ್ರಶ್ನೆಗಳು ಎಂದು ಹೇಳಬಹುದು.


   ಅದೇನೇ ಇರಲಿ, ತರಲೆ,  ಹೊಗಳಿಕೆ,  ಒಳ್ಳೆಯದರ ನಡುವೆ ಜಗದಲ್ಲಿ ಪ್ರತಿಯೊಬ್ಬರ ಬಯಕೆ ಏನೆಂದರೆ, ಪ್ರತಿಯೊಬ್ಬರ ಬಾಳು ಕೂಡ ಚೆನ್ನಾಗಿರಬೇಕು.  ಅಂದರೆ ಪ್ರತಿಯೊಬ್ಬರಿಗೂ ಬಯಸಿದ್ದು ಸಿಗಬೇಕು,  ಕಷ್ಟಗಳು ಕಡಿಮೆಯಾಗಬೇಕು,  ದುಃಖಗಳು ಬರಬಾರದು,  ಸುಖವು ಎಲ್ಲರ ಬಾಳಿನ ಮಹಾಮಂತ್ರವಾಗಿರಬೇಕು. ಯಾರಿಗೂ ದುಃಖವಿರಬಾರದು , ಸಂತೋಷ ಮೈ ತುಂಬಿ ಹರಿಯುತ್ತಿರಬೇಕು ಅಷ್ಟೇ! ಅರೆ , ಅದು ಹೇಗೆ ಸಾಧ್ಯ? ನಾವು ನಮ್ಮ ಆರೋಗ್ಯ ಚೆನ್ನಾಗಿರಲೆಂದು ಪ್ರಾರ್ಥಿಸಿದರೆ,  ಪ್ರತಿಯೊಬ್ಬ ವೈದ್ಯನು ಕೂಡಾ ದಿನ ಬೆಳಗಾದರೆ ‘ ನನ್ನಲ್ಲಿಗೆ ಅತ್ಯಂತ ಹೆಚ್ಚು ರೋಗಿಗಳು ಪ್ರತಿದಿನ ಬರಲಿ’ ಎಂದು ಆ ದೇವರಲ್ಲಿ ಬೇಡುವುದಿಲ್ಲವೇ? ಪ್ರತಿಯೊಬ್ಬ ಕಾನೂನು ತಜ್ಞರು ಕೂಡ ‘ತನ್ನ ಬಳಿ ನ್ಯಾಯ ಕೇಳಿಕೊಂಡು ಬಹಳಷ್ಟು ಜನರು ಬರಲಿ’ ಎಂದು ಆ ದೇವರನ್ನೇ ಬಿಡುವುದಿಲ್ಲವೇ? “ನಾನು ಯಾರಿಗೂ ಸಿಗದ  ಕಳ್ಳನನ್ನು ಹಿಡಿಯುವಂತಾಗಲಿ, ಆ ಮೂಲಕ  ನನ್ನ ಕೆಲಸದಲ್ಲಿ ನನಗೆ ಬೇಗನೆ ಪ್ರಮೋಷನ್ ಸಿಗಲಿ”  ಎಂದು ಪೊಲೀಸ್ ಕೂಡ ಆ ದೇವರಲ್ಲಿ ಕೇಳುವುದಿಲ್ಲವೇ? ‘ ಹಳೆಯ ಕಟ್ಟಡಗಳು ಮುರಿದು ಬೀಳುತ್ತಲಿರಲಿ, ‘ ಹೊಸ ಕಟ್ಟಡಗಳು ನನ್ನಿಂದಲೇ ನಿರ್ಮಾಣವಾಗುವ ಹಾಗೆ ಮಾಡಪ್ಪ ದೇವರೇ ‘  ಎಂದು ಮನೆ ಕಟ್ಟುಲು ಪ್ಲಾನ್ ಮಾಡುವ ಇಂಜಿನಿಯರ್ ಆ ದೇವರನ್ನು , ಎಲ್ಲಾ ಮನೆಗಳನ್ನು ಕಟ್ಟಿ ಕೊಡುವ ಕಂಟ್ರಾಕ್ಟರ್ ಕೆಲಸ ನನಗೆ ಸಿಗಲಿ ಎಂದು ಕಂಟ್ರಾಕ್ಟರ್, ನಿತ್ಯ ಕೆಲಸ ನಮಗೆ ಸಿಗಲಿ ಎಂದು ಕೆಲಸಗಾರರು ಬೇಡಿಕೊಳ್ಳುತ್ತಲೇ ಇರುತ್ತಾರೆ ಅಲ್ಲವೇ?  ಹಾಗೂ  ಭೂಮಿ ಮೇಲೆ, ಪ್ರಪಂಚದಲ್ಲಿ ಹಲವಾರು ಕಾಯಿಲೆಗಳು ಅನ್ಯಾಯ ಅಕ್ರಮಗಳು,  ಸುಲಿಗೆ, ದಂಧೆ,  ಕೊಲೆ ಇವುಗಳು ಆಗುವುದರಿಂದ ಒಬ್ಬರಿಗೆ ಕಷ್ಟವಾದರೆ,  ಇನ್ಯಾರಿಗೋ ಅವರ ಕೆಲಸದ ಮೂಲಕ ಶುಭವಾಗಲಿದೆ, ಅಲ್ಲವೇ?  ದೇವರು ಕಷ್ಟ ಮತ್ತು ಸುಖ,  ಬಡವ ಮತ್ತು ಶ್ರೀಮಂತ, ನೋವು  ಮತ್ತು ನಲಿವು ಎಲ್ಲವನ್ನು,  ನೊಂದವರ ನೋವುಗಳನ್ನು ಕೂಡ ಆಲಿಸುತ್ತಾ ಈ ಜಗವನ್ನು ಸರಿದೂಗಿಸಿಕೊಂಡು ಹೋಗಬೇಕಿದೆ ತಾನೇ? ಪಾಪ ಯಾರ ಪ್ರಾರ್ಥನೆಯನ್ನು ಕೂಡಾ ಮನ್ನಿಸದೆ ಇರಲು ದೇವರಿಗೆ ಸಾಧ್ಯ ಇಲ್ಲ. ಒಬ್ಬ ಗಂಡಸಿನ ಪ್ರಾಣವನ್ನು ತೆಗೆಯಲು ಒಬ್ಬ ಹರಕೆ ಹೊತ್ತು, ಜನ ಕಳಿಸಿದ್ದರೆ, ಮತ್ತೊಂದು ಹೆಣ್ಣು ಜೀವ ತನ್ನ ಮಾಂಗಲ್ಯ ಭಾಗ್ಯವನ್ನು ಉಳಿಸಿ ಕೊಡಿ ದೇವರೇ ಎಂದು ಅವನಿಗಾಗಿ ಬೇಡುತ್ತಾ ಇರುತ್ತದೆ. ಪುಟಾಣಿ ಮಕ್ಕಳು ಊಟ ಇಲ್ಲದೆ ಅಳುತ್ತಾ ಬಿದ್ದುಕೊಂಡಿರಲು ಆ ದೇವರಿಗೇ ಅಯ್ಯೋ, ಪಾಪ ಅನ್ನಿಸಬಹುದು! ಅವನು ಮಾಡಿದ ಪಾಪಗಳನ್ನು ನೋಡಿ, ಇವನನ್ನು ಈಗಲೇ ಅಲ್ಲ, ನರಳಿ ನರಳಿ ಸಾಯಲು ಬಿಡಬೇಕು ಅನ್ನಿಸಲೂ ಬಹುದು. ಅದೇ ಮನುಷ್ಯನ ಜೀವನದಲ್ಲಿ ಪಾಪ , ಪುಣ್ಯಗಳ ಪರಿಕಲ್ಪನೆ ತಂದಿರಬಹುದು.


   ಪಾಪ ಹಾಗೂ ಪುಣ್ಯಗಳು ಏನೆಂದು ಜನರಿಗೆ ತಿಳಿದಿದ್ದರೂ ಕೂಡ ತಾನು ಮಾಡುತ್ತಿರುವುದು ಪುಣ್ಯಕಾರ್ಯ ಅಲ್ಲ ಎಂದು ಗೊತ್ತಿದ್ದರೂ ಸಹ ಜನರು ಪಾಪದ ಕಾರ್ಯಗಳನ್ನೇ ಬಹಳಷ್ಟು ಮಾಡಲು ಇಚ್ಚಿಸುತ್ತಾರೆ. ಪಾಪದ ಕಾರ್ಯಗಳಲ್ಲಿ ಬಹಳಷ್ಟು ಸಂತೋಷಪಡುತ್ತಾರೆ ಮತ್ತು ಖುಷಿಯಿಂದ ಇರುತ್ತಾರೆ. ಪಾಪ ಮಾಡಿದರೆ ಕೆಟ್ಟದು ಪರರಿಗೆ ನೋವು ಕೊಡುವುದು ತಪ್ಪು ಎಂದು ಗೊತ್ತಿದ್ದರೂ ಕೂಡ ಅದನ್ನೇ ಹೆಚ್ಚು ಹೆಚ್ಚಾಗಿ ಮಾಡುವವರೂ ಇದ್ದಾರೆ. ಆದದ್ದು ಆಗಲಿ ಏನು ಬೇಕಾದರೂ ಆಗಲಿ, ಒಂದು ದಿನ ಎಲ್ಲರೂ ಸತ್ತೇ ಹೋಗುವರು ಅಲ್ಲಿಯವರೆಗೆ ನಾನು ಚೆನ್ನಾಗಿ ಬದುಕುತ್ತೇನೆ ಎಂಬ ಸ್ವಾರ್ಥ ಭಾವವನ್ನು ಇಟ್ಟುಕೊಂಡು ಈ ಭೂಮಿಯ ಮೇಲೆ ಸಿಕ್ಕಿ ಸಿಕ್ಕಿದ ಹಾಗೆ ಬದುಕುವ ಮನುಷ್ಯರು ಬಹಳಷ್ಟು ಜನ ಇದ್ದಾರೆ. ಅದೇ ಪಾಪ ಕಾರ್ಯಕ್ಕೆ ಹೆದರಿ ಏನೇ ಕಷ್ಟ ಬಂದರೂ ಕೂಡ ಒಳ್ಳೆಯತನವನ್ನೇ ಮಾಡುತ್ತಾ ಒಳ್ಳೆಯದಾಗಿಯೇ ಬದುಕುವ ಇನ್ನೂ ಹಲವಾರು ಜನರು ಕೂಡ ಇದೇ ಭೂಮಿಯ ಮೇಲೆ ಇದ್ದಾರೆ. ಈ ಪಾಪ ಪುಣ್ಯಗಳ ಲೆಕ್ಕಾಚಾರವನ್ನು ಆ ದೇವರು ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಮತ್ತೊಮ್ಮೆ ಹುಟ್ಟಿ ಬರುವ ಪುನರ್ಜನ್ಮದ ಕಥೆಗಳನ್ನು ನಾವು ಕೇಳಿದ್ದೇವೆ. ಪುನರ್ಜನ್ಮದಲ್ಲಿ ಹುಟ್ಟಿ ಬರುವಾಗ ಈ ಜನ್ಮದಲ್ಲಿ ಮಾಡಿದ ಪಾಪ ಪುಣ್ಯಗಳನ್ನು ಹೊತ್ತುಕೊಂಡು ಪಾಪ ಮಾಡಿದ್ದರೆ ಕೆಟ್ಟದಾಗಿ ಹುಟ್ಟುತ್ತೇವೆ ಮತ್ತು ಪುಣ್ಯ ಮಾಡಿದ್ದರೆ ಒಳ್ಳೆಯ ಬದುಕನ್ನು ಪಡೆಯುತ್ತೇವೆ ಎಂದು ಹೇಳುತ್ತಾರೆ ಹಾಗೂ ಹಲವಾರು ಪುಸ್ತಕಗಳಲ್ಲಿ ಕೂಡ ಇದನ್ನೇ ಓದುತ್ತೇವೆ. ಎಲ್ಲಾ ಧರ್ಮಗಳ ದರ್ಶನಿಕರು ತಿಳಿದವರು ಗುರುಗಳು ಕೂಡ ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತಾರೆ ಮತ್ತು ಕೆಟ್ಟ ಕಾರ್ಯಗಳನ್ನು ಮಾಡುವುದರಿಂದ ನೀವು ಪಾಪಕ್ಕೆ ಗುರಿಯಾಗುತ್ತಿರಿ ಎಂದು ಒತ್ತಿ ಒತ್ತಿ ಹೇಳುತ್ತಾರೆ. ಎಲ್ಲಾ ಜಾತಿ ಧರ್ಮಗಳು ಕೂಡ ಮನುಷ್ಯನಿಗೆ ಹೇಳುವುದು ಒಂದೇ ಉತ್ತಮ ಕಾರ್ಯಗಳನ್ನು ಮಾಡಬೇಕು ಮತ್ತು ನಾವು ಮಾಡುವ ಕಾರ್ಯಗಳು ಪರರಿಗೆ ನೋವನ್ನು ಉಂಟುಮಾಡುವ ಹಾಗಿರಬಾರದು. ಹಾಗೆ ಹೇಳಿದರು ಕೂಡ ಜನರು ಕಳ್ಳತನ,  ಮೋಸ,  ವಂಚನೆ,  ಕೊಲೆ , ಸುಲಿಗೆ , ಅತ್ಯಾಚಾರ,  ಅನಾಚಾರ , ಸುಳ್ಳು ಇವುಗಳನ್ನು ಮಾಡುತ್ತಲೇ ಬಂದಿದ್ದಾರೆ. ಹಾಗೆ ಮಾಡಿದವರು ಚೆನ್ನಾಗಿಯೇ ಬದುಕಿದ್ದನ್ನು ನೋಡಿ ಕೂಡ ಇದ್ದಾರೆ. ಒಳ್ಳೆಯವರಾಗಿಯೇ ಇದ್ದವರು ಬದುಕಿನಲ್ಲಿ ಕಷ್ಟಪಡುವುದನ್ನು ಕೂಡ ನೋಡಿ ಬದುಕುವವರು ಅದೆಷ್ಟೋ ಮಂದಿ ಇದ್ದಾರೆ. ಹಾಗಾದರೆ ನಿಜವಾಗಿಯೂ ಪಾಪ ಪುಣ್ಯ ಎಂಬುದು ಈ ಭೂಮಿಯ ಮೇಲೆ ಇದೆಯೇ?  ಇದ್ದರೆ ಪಾಪಿ ಯಾಕೆ ಬಹಳಷ್ಟು ಖುಷಿಯಿಂದ ಬದುಕುತ್ತಿದ್ದ? ಯಾವಾಗಲೂ ಬೇರೆಯವರಿಗೆ ಒಳಿತಾಗಲಿ ಎಂದು ಬಯಸುತ್ತಿರುವ ಮನುಷ್ಯರಿಗೆ ಅದೇಕೆ ಅಷ್ಟೊಂದು ದೊಡ್ಡ ಕಷ್ಟಗಳು ಎದುರಾಗುತ್ತವೆ? ಪ್ರತಿದಿನ ಸಿಕ್ಕಾಪಟ್ಟೆ ತಿಂದು, ಕೂಡಿದ್ದು ತೇಗಿ,  ಪರರಿಗೆ ಕಷ್ಟ ಕೊಟ್ಟು,  ಪರರನ್ನು ಹಿಂಸಿಸಿ, ಕುಟುಂಬದ ಸದಸ್ಯರಿಗೆ ನೋವು ಕೊಟ್ಟು ಅವರನ್ನು ಬಹಳಷ್ಟು ಕೆಳಕ್ಕೆ ತಳ್ಳಿ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನೋವಲ್ಲಿ ಮುಳುಗಿಸಿ ತಾನು ಸ್ವಾರ್ಥಿಯಾಗಿ ಬದುಕುತ್ತಿರುವ ಕೂಡ ಅತ್ಯಂತ ಒಳ್ಳೆಯದಾಗಿ ಬದುಕುತ್ತಿದ್ದು, ಯಾರಿಗೂ ಏನೂ ಕೆಟ್ಟದ್ದು ಬಯಸದ ತನ್ನಷ್ಟಕ್ಕೆ ತಾನು ತನ್ನ ಕುಟುಂಬವನ್ನು ಸಲಹುತ್ತ ಯಾವುದೇ ಕೆಟ್ಟ ಚಟಗಳು ಇಲ್ಲದೆ ಇರುವಂತಹ ಮನುಷ್ಯನಿಗೆ ಇದ್ದಕ್ಕಿದ್ದ ಹಾಗೆ ಕ್ಯಾನ್ಸರ್ ನಂತಹ ಮಹಾಮಾರಿಗಳು ಆಕ್ರಮಿಸಿಕೊಂಡಾಗ,  ಜನರು ದೇವರಿಗೆ ಬೈದುಕೊಳ್ಳಲು ಪ್ರಾರಂಭಿಸುತ್ತಾರೆ. ಅವನು ಮಾಡಿದ ತಪ್ಪುಗಳಾದರು ಏನು, ಪ್ರಪಂಚದಲ್ಲಿ ಕೆಟ್ಟದನ್ನು ಮಾಡಿದವನಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾರೆ. ಆದ್ದರಿಂದ ನಾವು ದೇವರನ್ನು ಇನ್ನು ಮುಂದೆ ನಂಬುವುದಿಲ್ಲ ಎಂದು ಬಿಡುತ್ತಾರೆ. ಬಹಳಷ್ಟು ವರ್ಷಗಳ ಕಾಲ ತನಗಾಗಿ ಒಂದು ಒಳ್ಳೆಯ ಹುಡುಗ ಸಿಗಲಿ ಎಂದು ಕಾಯುತ್ತಾ ಕುಳಿತ ಒಳ್ಳೆಯ ಕುಟುಂಬದ ಉತ್ತಮ ಗುಣವುಳ್ಳ ಹುಡುಗಿಗೆ ಯಾವುದೇ ಒಳ್ಳೆಯ ಹುಡುಗ ಸಿಗದೇ ಕೊನೆಗೆ ಎರಡನೇ ಸಂಬಂಧದ ಹುಡುಗನಿಗೆ  ಮದುವೆ ಮಾಡಿ ಕೊಟ್ಟಾಗ, ಅದೇ ಊರಿಡೀ ಹಾರಾಡುತ್ತಾ ಬಜಾರಿಯಂತೆ  ಮೆರೆಯುತ್ತಿದ್ದ ಹುಡುಗಿಗೆ ಉತ್ತಮ ಸಂಬಂಧದ ಹುಡುಗ ಸಿಕ್ಕಿ ಅವಳ ತಪ್ಪುಗಳೆಲ್ಲ ಕ್ಷಮಿಸಿ ಅವಳನ್ನು ದೇವಿಯಂತೆ ನೋಡಿಕೊಳ್ಳುವಂತಹ ಹುಡುಗ ಅವಳ ಬಾಳಲ್ಲಿ ಬಂದಾಗ,  ಉತ್ತಮ ಗುಣದ ಹುಡುಗಿಗೆ ಯಾವಾಗಲೂ ತೊಂದರೆ ಕೊಡುವ ಕುಡುಕ ಗಂಡ ಸಿಕ್ಕಿದಾಗ, ತುಂಬಾ ಸಿರಿವಂತಳಾದ ಹುಡುಗಿಗೆ ತುಂಬಾ ಬಡವನಾದ ಹುಡುಗ ಸಿಕ್ಕಿದಾಗ ಜನ ದೇವರನ್ನು ಶಂಕಿಸಲು ಪ್ರಾರಂಭಿಸುತ್ತಾರೆ. ದೇವರು ಅದೇ ಏಕೆ ಕೆಲವರಿಗೆ ಮೋಸ ಮಾಡುತ್ತಾನೆ, ಒಳ್ಳೆಯವರಿಗೆ ಕೆಕೆ ಕೆಟ್ಟದನ್ನು ಮಾಡುತ್ತಾನೆ, ಉತ್ತಮ ಗುಣ ನಡತೆ ಇರುವ ಜನರ ಬಾಳಿನಲ್ಲಿ ಅದು ಯಾಕೆ ನೋವನ್ನು ಬಹುತೇಕವಾಗಿ ತರುತ್ತಾನೆ? ಇದೇ ಮೊದಲಾದ ಪ್ರಶ್ನೆಗಳು ಜನರ ಬಾಳಿನಲ್ಲಿ ಉದ್ಭವಿಸುತ್ತವೆ. ಆಗ ದೇವರು ಎಂಬುದು ತನ್ನ ನಂಬಿಕೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ದೇವರನ್ನು ನಂಬುವವನು ಕೂಡ ತನ್ನ ಕಷ್ಟಗಳ ಮೂಲಕ ನೊಂದು ಬೆಂದಾಗ ನಾಸ್ತಿಕನಾಗಿ ಬದಲಾಗುತ್ತಾನೆ. ಪ್ರಪಂಚದಲ್ಲಿ ದೇವರು ಎಂಬ ಒಂದು ಶಕ್ತಿ ಇರುವುದು ಸುಳ್ಳು, ನಾನು ಕಷ್ಟ ಪಟ್ಟರೆ ಮಾತ್ರ ನಾನು ದುಡಿದು ಬದುಕಬಹುದು, ಬಾಳು ಬಂಗಾರವಾಗುವುದು ದೇವರಿಂದ ಅಲ್ಲ, ಅದು ನನ್ನ ಕಷ್ಟದಿಂದ ಮಾತ್ರ, ನಾನು ಕೂಡ ಪರವಂತೆ ಸ್ವಾರ್ಥಿ ಆಗಬೇಕು, ನಾನು ದುಡಿದದ್ದರಲ್ಲಿ ಬೇರೆ ಯಾರಿಗೂ ಕೊಡಬಾರದು, ಎಂಬ ನಂಬಿಕೆಗಳನ್ನು ಹೆಚ್ಚಿಸಿಕೊಂಡು ಕಷ್ಟಪಟ್ಟು ದುಡಿದು ಬದುಕುವವರು ಇದ್ದಾರೆ. ಅದೇ ತಾನು ದುಡಿದುವುದರಲ್ಲಿ ಹಲವಾರು ಜನಕ್ಕೆ ಸಹಾಯ ಮಾಡುತ್ತಾ ನನ್ನ ಈ ಬದುಕಲ್ಲಿ ಸ್ವಲ್ಪ ಪುಣ್ಯ ಕಾರ್ಯವಿರಲಿ. ದೇವರು ನನಗೆ ಉತ್ತಮ ಬದುಕನ್ನು ನೀಡಿದ್ದಾನೆ, ನನ್ನಿಂದ ಹಲವಾರು ಜನರು ಸಂತಸದಿಂದ ಬದುಕುವ ಹಾಗೆ ಆಗಲಿ, ಅವರಿಗೆ ಸಹಾಯ ಮಾಡಿದ ಪುಣ್ಯ ನನ್ನ ಮುಂದಿನ ಜನ್ಮಕ್ಕು ಒಂದಿಷ್ಟು ಇರಲಿ. ನಾನು ಇನ್ನು ಮುಂದೆಯೂ ಕೂಡ ಹುಟ್ಟಿ ಬಂದಾಗ ಉತ್ತಮವಾದ ಬಾಳನ್ನಡೆಸುವ ಹಾಗೆ ಆಗಲಿ. ನನ್ನಿಂದ ಹಲವಾರು ಜನ ಬಡವರಿಗೆ ಸಹಾಯವಾಗಲಿ. ನನ್ನ ದುಡಿತದ ಒಂದು ಪಾಲು ನಿರ್ಗತಿಕರಿಗೆ ಸೇರಲಿ. ದಲಿತರು ಹಿರಿಯರು ರೋಗಿಗಳು ದೈಹಿಕ ಅಂಗಾಂಗಗಳನ್ನು ಸರಿಯಾಗಿ ಪಡೆಯದೆ ಇರುವವರು, ಮಾನಸಿಕವಾಗಿ ನೊಂದುಕೊಂಡು ಬದುಕುತ್ತಿರುವವರು, ತಮ್ಮ ಕುಟುಂಬದಿಂದ ಕಷ್ಟಕ್ಕೊಳಗಾದವರು, ಒಬ್ಬೊಬ್ಬರೇ ಕೊನೆಗಾಲದಲ್ಲಿ ಬದುಕುತ್ತಾ ಇರುವವರು, ರೋಗಗಳಿಂದ ನರಳುತ್ತಿರುವವರು ಇದೇ ಮೊದಲಾದ ಜನರಿಗೆ ತಮ್ಮ ಆದಾಯದ ಒಂದಷ್ಟು ಹಣವನ್ನು ಮೀಸಲಿರಿಸಿ ಅವರನ್ನು ಸಾಕುತ್ತಿರುವವರು, ಹಾಗೆ ತಮ್ಮ ಜೀವನವನ್ನು ಇಂಥವರಿಗಾಗಿಯೇ ಮುಡಿಪಾಗಿರಿಸಿದವರು, ಪರರ ನೋವನ್ನು ಮರೆಸುವ ಧ್ಯೇಯವನ್ನು ಹೊತ್ತು ಬದುಕುತ್ತಿರುವ ಮತ್ತು ತಮ್ಮ ಜೀವನವನ್ನು ಅದಕ್ಕಾಗಿ ಬಲಿ ಕೊಡುತ್ತಿರುವ ಹಲವಾರು ಜನರು ಇದ್ದಾರೆ. ಅವರು ತಮ್ಮ ಬಾಳು ಇದರಿಂದಾಗಿಯೇ ಬಂಗಾರವಾಗುವುದೆಂದು ನಂಬಿದ್ದಾರೆ.
ನಮ್ಮ ಬದುಕು ಬಂಗಾರವಾಗಲು  ನಾವೇನು ಮಾಡುತ್ತಿದ್ದೇವೆ? ಸ್ವಾರ್ಥದ ಬಾಳುವೆಯೇ? ಕಷ್ಟದ ದುಡಿಮೆಯೇ? ನೊಂದವರಿಗೆ ಸಾಂತ್ವನ ನೀಡುವಂತಹ ಉತ್ತಮವಾದ ಕೆಲಸವೇ? ಒಂದಿಷ್ಟು ಸಮಾಜಕ್ಕಾಗಿ ಎಂಬ ಧ್ಯೇಯವನ್ನು ಇಟ್ಟುಕೊಂಡು ಸಣ್ಣ ಸಹಾಯವೇ? ಇವುಗಳನ್ನು ಮತ್ತೆ ಮತ್ತೆ ಪರಿಶೀಲಿಸಿಕೊಂಡು ನಮ್ಮ ನಮ್ಮ ಬದುಕನ್ನು ಬಂಗಾರವಾಗಿಸಿಕೊಳ್ಳುವ ಕೆಲಸವನ್ನು ನಾವು ನಾವೇ ಮಾಡಬೇಕಾಗಿದೆ ಅಲ್ಲವೇ! ನೀವೇನಂತಿರಿ?

—————————

ಹನಿ ಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top