ಮಮತಾ ಶಂಕರ್ ಕವಿತೆ-ಆದರೂನೂ!

ಕಾವ್ಯ ಸಂಗಾತಿ

ಮಮತಾ ಶಂಕರ್

ನೋಡಿ ನೋಡಿ ಗಣ ಕೂಡಿ
ಹಿರಿತಲೆಗಳೆಲ್ಲಾ ಗೋಣು ಆಡಿ
ಮನೆ ಮನೆತನ ಎಲ್ಲಾ ತೂಗಿ
ಗುಣ ನೋಡಿ ತಂದ ಹೆಣ್ಣು ಆವಳು

ಸೇರಕ್ಕಿ ಬೆಲ್ಲ ಒದ್ದು
ಹೊಸ್ತಿಲಿಗೆ ಮೊಳೆ ಹೊಡೆದು
ಹೊಸ ಬಣ್ಣ ಬಳಿದ ಮನೆಗೆ
ಬಲಗಾಲಿಟ್ಟು ಒಳ ಬಂದು
ಬಂಧ ಬೆಸೆದವಳು

ಕುಡಿ ಮೀಸೆ ಚೆಲುವಂಗೆ
ತುಟಿ ತುದಿಯ ನಗುವಿಗೆ
ಒಲಿದವಳು ನಾನು
ಬಳಸಿ ಹಬ್ಬಿದ ಬಳ್ಳಿಯಂತೆಂದು
ಬೀಗಿದವಳು

ವರುಷವೆರಡಳಿಯುವುದು
ತಡವೆ
ಕೂಸೆರಡನಡೆದು ಮನೆತನದ ಹೆಸರು ಬರೆದವಳು

ಆದರೂನೂ

ಯಾವ ಗಾಳಿ ಸೋಕಿದ್ದೋ
ಗೂಬೆ ಕಣ್ಣು ತಾಕಿದ್ದೋ
ತಿಳಿಯೊಲವ ಕೊಳದಲ್ಲಿ
ಬಿದ್ದ ಕಲ್ಲು ಯಾರದ್ದೋ

ಮೆಚ್ಚಿದವರೆ ಎಲ್ಲ…. ಚುಚ್ಚಿದವರು ಯಾರಿಲ್ಲ
ಹುಚ್ಚು ಮನಸಿನ ಹತ್ತರಲ್ಲಿ
ಎಷ್ಟನೇ ಮುಖ ತೆರೆಯಿತೋ
ಅಚಾನಕ್ಕು ವಿಚ್ಛೇದನ ಮಾತು
ದಂಗಾಗಿ ಮನೆ ಕೂತು
ಕಾರಣವೇ ತಿಳಿಸದೆ ಬೇರ್ಪಟ್ಟ
ಮುದ್ದು ಜೋಡಿ
ಬೆಳೆದ ಮಕ್ಕಳು ಅವರವರೇ ಹಿಡಿದು ತಮ್ಮ ತಮ್ಮ ದಾರಿ
ನಡೆದೇ ಬಿಟ್ಟರು….

ಅವನು ಸವರಿದ ಮತ್ತಾರದೋ ಗಲ್ಲ
ಅವಳು ಉಂಡ ಮತ್ತಾವುದೋ ಬೆಲ್ಲ
ತಾರೆಗಳು ಮರೆಯಾಗಿ ಉಳಿದಿದೆ ಆಕಾಶ
ಉಳಿದ ಕಥೆ
ಲೋಕಕ್ಕೇಕೇ ಬೇಕು….
ಎದೆಯೊಳಗೇ ಇರಬೇಕು….


ಮಮತಾ ಶಂಕರ್

6 thoughts on “ಮಮತಾ ಶಂಕರ್ ಕವಿತೆ-ಆದರೂನೂ!

  1. ನೊಂದ ಮನದ ಅಳಲು..ವೇದನೆ..ಎದೆಯೊಳು ಅವಿತಿಟ್ಟ ಭಾವ… ಸುಂದರ ರಚನೆ..

    ಹಮೀದಾ ಬೇಗಂ. ಸಂಕೇಶ್ವರ.

    1. ಧನ್ಯವಾದಗಳು ಮೇಡಂ ನಿಮ್ಮ ಸ್ಪಂದನೆಗೆ

  2. ಹೆಣ್ಣಿನ ನಿಜವಾದ ಪರಿಸ್ಥಿತಿ… ಮನದ ಅಳಲು…. ಸುತ್ತಲಿನ ಸಮಾಜದ ಮನೋಸ್ಥಿತಿ
    ಯನ್ನು ಎಳೆ ಎಳೆ ಯಾಗಿ ಬಿಚ್ಚಿಟ್ಟ0ತಾಗಿದೆ… ನಿಮ್ಮೀ ಕವನ…. ಇದರಲ್ಲಿನ ಸಾಲುಗಳು
    ಹಲವಾರು ಜನರ ಬಾಳಿನಲ್ಲಿ ನಡೆದ ವಾಸ್ತವ
    ಸ್ವರೂಪ…. ಮಮತಾ

    1. ಧನ್ಯವಾದಗಳು ಮೇಡಂ ನಿಮ್ಮ ಪ್ರೀತಿಯ ಸ್ಪಂದನೆಗೆ ❤️

Leave a Reply

Back To Top