ಅಂಕಣ ಸಂಗಾತಿ

ನನ್ನಿಷ್ಟದ ಪುಸ್ತಕ….

ಸುಧಾ ಪಾಟೀಲ

ಸೋಜುಗದ ಸೂಜು ಮಲ್ಲಿಗೆ

ಸಂಪಾದಕರು: ಎ. ಎಸ್. ಮಕಾನದಾರ

ಪುಸ್ತಕದ ಹೆಸರು.. ಸೋಜುಗದ ಸೂಜು ಮಲ್ಲಿಗೆ
ಸಂಪಾದಕರು.. ಎ. ಎಸ್. ಮಕಾನದಾರ
ಪ್ರಕಾಶಕರು.. ನಿರಂತರ ಪ್ರಕಾಶನ.. ಗದಗ
ಬೆಲೆ… 175 ರೂ

ಪುಸ್ತಕ  ಅವಲೋಕನಕ್ಕಿಂತ ಮುಂಚೆ  ಲೇಖಕರ ಪರಿಚಯ ಮಾಡಿಕೊಳ್ಳೋಣ…
ಎ. ಎಸ್. ಮಕಾನದಾರ   ಅವರು   ಮೂಲತ: ಗಜೇಂದ್ರಗಡದವರು. ವೃತ್ತಿಯಿಂದ ನ್ಯಾಯಾಂಗ ಇಲಾಖೆಯಲ್ಲಿ  ಸೇವೆ   ಸಲ್ಲಿಸುವುದರ   ಜೊತೆಗೆ ಪ್ರವೃತ್ತಿಯಿಂದ  ಕನ್ನಡ   ಸಾಹಿತ್ಯದ ಪರಿಚಾರಕರಾಗಿ “ಎದೆಯ ಸುಡುವ ನೆನಪುಗಳು “, “ಕೆಳಗಲ
ಮನಿ  ಮಾಬವ್ವ ಮತ್ತು ಇತರೆ ಕವಿತೆಗಳು  “ಸಖಿ_ಸಖ “, ” ಒಂದು ಮೌನದ ಬೀಜ ” ” ಅಕ್ಕಡಿ ಸಾಲು” “ಪ್ಯಾರಿ  ಪದ್ಯ” (ಕಾವ್ಯ ) “ಬದುಕು ಬೆಳಕು ” “ನೆಲದ ನುಡಿ “, “ಬದುಕ ಧ್ಯಾನ ” (ಲೇಖನಗಳು ) “ಮುತ್ತಿನ ತೆನೆ “(ವ್ಯಕ್ತಿ  ಚಿತ್ರಣ )  ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ.

ಸೂಫಿ ಸಾಹಿತ್ಯ,ತತ್ವಪದ ಸಾಹಿತ್ಯ ಕಥಾಸಂಕಲನಗಳ ಮಹತ್ವದ   ಸಂಪಾದಿತ   ಕೃತಿಗಳು   ಪ್ರಕಟಗೊಂಡಿವೆ. ಇವರ  ಕವಿತೆಗಳು  ಹಿಂದಿ, ಇಂಗ್ಲಿಷ, ಮರಾಠಿ, ಮಲಯಾಳಂ, ತಮಿಳು, ಉರ್ದು, ಭಾಷೆಗಳಿಗೆ ಅನುವಾದಗೊಂಡಿವೆ. ಕುವೆಂಪು ವಿಶ್ವವಿದ್ಯಾಲಯದ  ಪಠ್ಯಪುಸ್ತಕದಲ್ಲಿ  ಇವರ  ಕವಿತೆ ಸೇರ್ಪಡೆಯಾಗಿದೆ. ಸರ್ಕಾರ ಕೊಡಲ್ಪಡುವ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಜಿಲ್ಲಾಕನ್ನಡ
ರಾಜ್ಯೋತ್ಸವ  ಪುರಸ್ಕಾರಗಳ  ಜೊತೆಗೆ  ನಾಡಿನ ವಿವಿಧ   ಸಂಘಟನೆಗಳ  ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅಕ್ಕಡಿ   ಸಾಲು,  ಮೂರು   ದಶಕದ ಸ್ವತಂತ್ರ ಕವನ ಸಂಕಲನ. ವಿಶ್ವಭ್ರಾತೃತ್ವದ ಸೂಫಿ ದೂಧಪೀರಾ   ಸಂಪಾದಿತ   ಸಂಕಲನ   ಕನ್ನಡ ಸಾರಸ್ವತ ಲೋಕದಲ್ಲಿ ಬಹುಚರ್ಚಿತ ಕೃತಿಗಳಾಗಿವೆ.

ಕಾವ್ಯವು  ಬುದ್ಧಿ-ಭಾವಗಳ ಸಂಗಮ. ಅದನ್ನು ತಮ್ಮ  ಅಭಿವ್ಯಕ್ತಿ ಮಾಧ್ಯಮವಾಗಿ ಆರಿಸಿಕೊಳ್ಳುವವರು  ಕಡಿಮೆ  ಶಬ್ದಗಳಲ್ಲಿ  ಹೆಚ್ಚು  ಹೇಳುವ ಸಾಮರ್ಥ್ಯವನ್ನು    ಹೊಂದಿರುತ್ತಾರೆಂಬುದು ಸಾಮಾನ್ಯ ನಂಬಿಕೆ. ಆದರೆ,  ಆ ಗುಣವನ್ನು ಸಮರ್ಥವಾಗಿ ಒಳಗೊಳ್ಳುವುದು ಸುಲಭವಲ್ಲ. ಗದ್ಯದಲ್ಲಿ ನೂರು ಪದಗಳನ್ನು  ಬಳಸಿ ಹೇಳುವುದನ್ನು ಪದ್ಯದಲ್ಲಿ ಒಂದೇ ಪದದ ಮೂಲಕ ಹೇಳುವುದಲ್ಲದೆ, ಅರ್ಥವನ್ನು ಸುಲಭದಲ್ಲಿ ಬಿಟ್ಟುಕೊಡದೆ ಓದುಗನ ಬೌದ್ಧಿಕ ಸಾಮರ್ಥ್ಯವನ್ನು ಒರೆಗೆಹಚ್ಚಿ ಅವನನ್ನು      ಚಿಂತನೆಗೆ ಒಳಪಡಿಸುವ
ಜವಾಬ್ದಾರಿಯೂ ಕವಿಯದ್ದಾಗಿರುತ್ತದೆ.
“ರವಿ ಕಾಣದ್ದನ್ನು  ಕವಿ ಕಂಡ ” ಎಂಬ ಗಾದೆಯ ಮಾತಿನಂತೆ ಸುತ್ತಮುತ್ತ ಇರುವಂತಹ ನೂರಾರು ವಿದ್ಯಮಾನಗಳನ್ನು ತನ್ನ  ವಿಶಿಷ್ಟವಾದ  ಗ್ರಹಣಶಕ್ತಿಯ ಮೂಲಕ ಸಾಮಾನ್ಯರಿಗಿಂತ ಭಿನ್ನವಾಗಿ ಗ್ರಹಿಸಿ ಶಬ್ದ, ಅರ್ಥ, ತಾಳ, ಲಯ, ರಸ, ಅಲಂಕಾರ ಪ್ರತಿಮೆ, ಸಂಕೇತಗಳ ಮೂಲಕ ಒಂದು ಹೊಸತೇ ಆದ ಅಭಿವ್ಯಕ್ತಿಯ ಭಾಷೆಯನ್ನು  ಸೃಷ್ಟಿಸುವ ಕವಿಯ ಪ್ರತಿಭೆ ಅಸಾಧಾರಣವಾದದ್ದು. ನಿಜವಾದ ಕವಿತೆಯಲ್ಲಿ ಈ ಎಲ್ಲ ಗುಣಗಳು ಇದ್ದೇ ಇರುತ್ತವೆ ಅವು ಇಲ್ಲದಿದ್ದರೆ ಕವಿತೆ ಶುಷ್ಕವಾಗುತ್ತದೆ. ಎಂದು ಡಾ ||ಪಾರ್ವತಿ ಐತಾಳ ಅವರು ತಮ್ಮ ಮುನ್ನುಡಿಯಲ್ಲಿ  ಕವನ ರಚನೆಯ ಬಗೆಗೆ ಹೇಳುತ್ತಾ, ಎಲ್ಲ ಕವಿಯಿತ್ರಿಯರ  ಕವನಗಳನ್ನು ವಿಶ್ಲೇಷಿಸುತ್ತಾ ಹೋಗುತ್ತಾರೆ.

ಸೋಜುಗದ ಸೂಜು ಮಲ್ಲಿಗೆಯಲ್ಲಿ ಒಟ್ಟು ಹತ್ತುಕವಿಯಿತ್ರಿಯರ ಕವನಗಳು ತಮ್ಮಭಾವ ತುಂಬಿ ಹರಿಯುತ್ತಿವೆ.. ಡಾ ||ಪುಷ್ಪಾವತಿ ಶಲವಡಿಮಠ, ಡಾ ||ಹೆಚ್.ಕೆ.ಹಸೀನಾ,  ಡಾ ||ಸುಜಾತಾ ಚಲವಾದಿಡಾ||ಲತಾ ನಿಡಗುಂದಿ, ಸಕೀನ ಬೇಗಂ, ಪುಷ್ಪಾ
ಮುರಗೋಡ,  ಸುಧಾ ಪಾಟೀಲ್,ಕಸ್ತೂರೆಮ್ಮ ಹಿರೇಮಠ , ಪ್ರೇಮಾ ಹೂಗಾರ ಮತ್ತು ಪರ್ವೀನ್ತಾಜ್.

ಸಾಹಿತ್ಯ ವಲಯದಲ್ಲಿ ಕ್ರಿಯಾಶೀಲರಾಗಿರುವ ಹಿರಿಯ ಕವಿ ಎ. ಎಸ್. ಮಕಾನದಾರ   ಅವರ ಸಂಪಾದನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ ಹತ್ತು ಜನ ಕವಿಯಿತ್ರಿಯರ 
ಕವಿತೆಗಳುಳ್ಳ “ಸೋಜುಗದ ಸೂಜು ಮಲ್ಲಿಗೆ ”   ಸಂಕಲನದಲ್ಲಿ ಕಾವ್ಯದ ವಸ್ತು-ವಿಷಯ ವೈವಿಧ್ಯತೆಯಿಂದ ವಿಶಿಷ್ಟವಾಗಿದೆ. ಸಾಮಾಜಿಕ ಪರಿಸರದಲ್ಲಿ ನಡೆಯುತ್ತಿರುವ ಸಂಕಟಗಳ ಭಾವತೀವ್ರತೆ, ತಲ್ಲಣ ಆಂತರ್ಯ,ನೋವು, ಕೌಟುಂಬಿಕ  ನೆಲೆಯ ಮಗುವಿನ ನಗು,
ಬದುಕಿನ  ಆಶಯದ   ಉತ್ಕೃಷ್ಟತೆಯೂ   ಇಲ್ಲಿ ತಾದ್ಯಾತ್ಮಕ ನಿಲುವು ಪಡೆದಿದೆ.

ಬುದ್ಧನ ತತ್ವಗಳು ಬದುಕಿನ ಭಾಗವಾಗಿ ನಿರೂಪಿತವಾಗಿವೆ.ವಿಜ್ಞಾನ,ವಿದ್ಯುತ್,
ದೇಶಪ್ರೇಮ ಕುರಿತಾಗಿ ಕವಿತೆಗಳು ಗಮನೀಯವಾಗಿವೆ. ಗಜಲ್ ಗಳಲ್ಲಿ ಕಾಣುವ   ಪ್ರೀತಿಯ  ಸಂಭ್ರಮ,ಒಳಬೇಗುದಿ, ತಲ್ಲಣಗಳು,  ಸ್ತ್ರೀ ಸಂವೇದನೆಯ   ವ್ಯಾಖ್ಯಾನದ ನೆಲೆಯಲ್ಲಿಯೂ  ಅರ್ಥಪೂರ್ಣವಾಗಿ  ಕವಿಯಿತ್ರಿಯರು   ನಿರ್ವಚಿಸಿದ್ದಾರೆ.  ಹೀಗೆ  ಹಂಪಿ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಗಂಗಪ್ಪ ಅವರು ಈ  ಕವನ  ಸಂಕಲನದ  ಬಗೆಗೆ  ತಮ್ಮಅಭಿಪ್ರಾಯ ಹಂಚಿಕೊಂಡಿದ್ದಾರೆ

“ಸೋಜುಗದ ಸೂಜು ಮಲ್ಲಿಗೆ ” ಅರಳುವ ಪರಿ ಸೃಷ್ಟಿ ಚೇತನದ ಸುಂದರತೆಯ ಅನಾವರಣ. ಕಂಟಿ ಕಂಟಿಯ ಬುಡದಲ್ಲಿರುವ ಈ ಮಲ್ಲಿಗೆ ತನ್ನ ಕಂಪಿನಿಂದ ಎಲ್ಲರ ಗಮನ ಸೆಳೆಯುವ ಪರಿ ಸೋಜಿಗ. ಸಂಕಲನದಲ್ಲಿ  ಬಿರಿದಿರುವ  ಈ  ಸೂಜಿ  ಮಲ್ಲಿಗೆಗಳೆಲ್ಲಾ  ತಮ್ಮ  ತಮ್ಮ  ವಿಶಿಷ್ಟತೆಯಿಂದ  ಗಮನ ಸೆಳೆದವುಗಳು. ಬದುಕಿನ ಪಯಣದಲ್ಲಿ ಸಾರ್ಥಕತೆಯ  ಹಾದಿ ತುಳಿದು  ತಮ್ಮತಮ್ಮ ರೀತಿಯಲ್ಲೇ ಸಂತೃಪ್ತಿ ಪಡೆದ “ಸೋಜುಗದ ಸೂಜುಮಲ್ಲಿಗೆ” ಗಳು ಇವು.

ಇಲ್ಲಿರುವ ನಾಡಿನ ವಿವಿಧ ಜಿಲ್ಲೆಗಳ ಕವಿಯಿತ್ರಿಯರಕವನಗಳಲ್ಲಿ  ಸಾಮಾಜಿಕ  ಚಿಂತನೆಗಳಿವೆ.  ಸ್ತ್ರೀ ಸಂವೇದನೆಗಳಿವೆ. ಬದುಕಿನ ತುಡಿತಗಳಿವೆ. ಅವರ
ಕೈಗೆಟುಕಿದ  ಅನುಭವ  ಪ್ರಪಂಚದಲ್ಲಿ  ಇವರೆಲ್ಲ  ಸ್ವಚ್ಚಂದವಾಗಿ   ವಿಹರಿಸಿದ್ದಾರೆ.  ಅವರ  ಭಾವತನ್ಮಯತೆ ವಿಸ್ಮಯದ  ಪ್ರಪಂಚವನ್ನು ಸೃಷ್ಟಿಸಿದೆ. ಅವರು ನಕ್ಕರೆ ಸಕ್ಕರೆ ಸುರಿದಂತೆ. ಪ್ರತಿಕಾವ್ಯದಲ್ಲೂ ಗಂಧಗಾಳಿ ಘಮಘಮಿಸಿದೆ.   ಹೊರಜಗತ್ತಿಗೆ ಅಪರಿಚಿತರಾದ ಇವರ ಕಣ್ಣ  ಬೆಳಕನ್ನು “ಸೋಜುಗದ ಸೂಜು ಮಲ್ಲಿಗೆ ”  ಬೆಳಕಾಗಿಸುವ  ಸಣ್ಣ  ಪ್ರಯತ್ನ. ಕಾವ್ಯ ಜಗತ್ತಿಗೆ ಇವರೆಲ್ಲ ಗಟ್ಟಿ ಹೆಜ್ಜೆ ಇಡಬೇಕೆಂಬ ಸದಾಶಯದ ವೇದಿಕೆಯ ನಿರ್ಮಾಣದ  ಸಂಕಲ್ಪವಿದು. ಇದು ಮಕಾನದಾರ ಅವರು ತಮ್ಮ ಸಂಪಾದಕೀಯದಲ್ಲಿ ತಮ್ಮ ಮನದ ಅಭಿಪ್ರಾಯಗಳನ್ನು  ವ್ಯಕ್ತಪಡಿಸಿದ್ದಾರೆ.

ಈ  ದೇಶದ ಮತ್ತು  ನಮ್ಮ  ಗ್ರಾಮದ  ಭಾರತದ ಸಧ್ಯದ ವೈರುಧ್ಯಗಳ ನಡುವೆ ನರಳುವ ಅಸಂಖ್ಯಾತ ಮಹಿಳೆಯರ ನೋವು, ಪುಟಿಯುವ ಜೀವನಪ್ರೀತಿಯನ್ನು  ಇಲ್ಲಿನ ಕವಿತೆಗಳು  ತುಂಬ ಕಲಾತ್ಮಕವಾಗಿ ಅನಾವರಣಗೊಳಿಸುತ್ತವೆ. ಈ ಸಂಕಲನದ ಹತ್ತು ಜನ ಕವಯಿತ್ರಿಯರು ತಮ್ಮತಮ್ಮ ಭಾಗದ ಸಾಂಸ್ಕೃತಿಕ  ಕ್ಷೇತ್ರದಲ್ಲಿ ಪರಿಚಿತರು ಮತ್ತು ಕ್ರಿಯಾಶೀಲರು. ಸಾಮಾಜಿಕವಾಗಿ ವಿವಿಧ ವಲಯ ಮತ್ತು ವೃತ್ತಿಗೆ ಸೇರಿದ ಇವರು ರಚನಾತ್ಮಕವಾದ ಕೆಲವು ಹೊಸ ಪರಿಭಾಷೆಗಳನ್ನು ಹಲವಾರು ಕವಿತೆಗಳಲ್ಲಿ
ಕಟ್ಟಿಕೊಟ್ಟಿರುವುದು  ಸಂಕಲನದ   ಗಟ್ಟಿತನಕ್ಕೆ
ಕಾರಣವಾಗಿದೆ. ಇದು ಒಂದು ಮಹತ್ವದ ಮಹಿಳಾ ಪ್ರಾತಿನಿಧಿಕ ಕವನ ಸಂಕಲನವೆಂದು ಡಾ ||ಯಲ್ಲಪ್ಪ ಹಿಮ್ಮಡಿ ಅವರು ತಮ್ಮ ಹಿನ್ನುಡಿಯಲ್ಲಿ ಪುಸ್ತಕದ ಮಹತ್ವವನ್ನು  ಸಾರಿದ್ದಾರೆ.

2020ರಲ್ಲಿ ಪ್ರಕಟಣೆಗೊಂಡ  ಸೋಜುಗದ ಸೂಜು  ಮಲ್ಲಿಗೆಯಲ್ಲಿ  ನನ್ನ  ಕವನಗಳೂ ಸಹ ಪ್ರಕಟಣೆಗೊಂಡಿವೆ.  ಇದು   ನನಗೆ  ಹೆಮ್ಮೆಯ ಮತ್ತು  ಖುಷಿ  ಪಡುವ  ವಿಚಾರ. ಒಟ್ಟು 160 ಪುಟಗಳ ಪುಸ್ತಕ. ಎಲ್ಲ ಕವಯಿತ್ರಿಯರ ಸುಂದರ
ವಾದ  ಚಿತ್ರಗಳನ್ನು  ಸೂಜುಮಲ್ಲಿಗೆಯಲ್ಲಿ ಅಡಕವಾಗಿರುವಂತೆ ಮೂಡಿದ  ಚೆಂದದ ಮುಖಪುಟ ಮತ್ತು   ಒಳಗಡೆ    ಸಾಂದರ್ಭಿಕ   ರೇಖಾಚಿತ್ರಗಳೊಂದಿಗೆ  ಕವನಗಳು  ಹೆಣ್ಣುಮಕ್ಕಳ ಮಹತ್ವವನ್ನು  ಎತ್ತಿ   ಹಿಡಿದ   ದ್ಯೋತಕವಾಗಿ  ಮೂಡಿ ಬಂದಿವೆ. ಕವಿಮನಸ್ಸುಗಳು  ಒಮ್ಮೆಯಾದರೂ
ಕಣ್ಣಾಡಿಸಲೇಬೇಕಾದ ಎಲ್ಲೆಡೆ ಪರಿಮಳ ಬೀರುವ “ಸೋಜುಗದ  ಸೂಜು  ಮಲ್ಲಿಗೆ ” ಇದು.


ಸುಧಾ ಪಾಟೀಲ್

ಸುಧಾ ಪಾಟೀಲ್ ಅವರು ಮೂಲತಹ ಗದಗ ಜಿಲ್ಲೆಯವರು.ಇವರ ಸಾಹಿತ್ಯದ ಪಯಣಕ್ಕೆ ಇವರ ದೀಕ್ಷಾಗುರುಗಳಾದ ಲಿ. ಡಾ. ಜ.ಚ. ನಿ ಶ್ರೀಗಳೇ ಪ್ರೇರಣೆ.
ಸುಧಾ ಪಾಟೀಲ್ ಅವರ ಲೇಖನಗಳು.. ಕವನಗಳು ವಿವಿಧ ಪತ್ರಿಕೆಯಲ್ಲಿ.. ಪುಸ್ತಕಗಳಲ್ಲಿ ಪ್ರಕಟಗೊಂಡಿವೆ. ಇವರ ಜ. ಚ.ನಿ ಶ್ರೀಗಳ ” ಬದುಕು -ಬರಹ ” ಕಿರು ಹೊತ್ತಿಗೆ ಕಿತ್ತೂರು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂaಸೇವೆಯನ್ನು ಗೈದಿದ್ದಾರೆ.
ಹಲವಾರು ಸಂಘ -ಸಂಸ್ಥೆಗಳಲ್ಲಿ ಕಾರ್ಯಕಾರಿ ಸದಸ್ಯೆಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಯಾವತ್ತೂ ಇವರದು ಅಳಿಲುಸೇವೆ ಇದ್ದೇ ಇರುತ್ತದೆ.ಸುಧಾ ಪಾಟೀಲ್ ಅವರನ್ನು ಅರಸಿ ಬಂದ ಪ್ರಶಸ್ತಿಗಳು..ಅನುಪಮ ಸೇವಾ ರತ್ನ ಪ್ರಶಸ್ತಿ (ಪೃಥ್ವಿ ಫೌಂಡೇಶನ್ )
ಮಿನರ್ವ ಅವಾರ್ಡ್ ಮತ್ತು ದತ್ತಿ ನಿಧಿ ಪ್ರಶಸ್ತಿ ( ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ )ರಾಜ್ಯೋತ್ಸವ ಪ್ರಶಸ್ತಿ ( ಚೇತನಾ ಫೌಂಡೇಶನ್ )

2 thoughts on “

  1. ಸೋಜುಗದ ಸೂಜು ಮಲ್ಲಿಗೆ ಸಂಕಲನ ಅವಲೋಕನ ಮಾಡಿದ ಹಿರಿಯ ಕವಯಿತ್ರಿ ಸುಧಾ ಪಾಟೀಲ್ ಮೇಡಂ ಅವರಿಗೆ ಪ್ರಕಟಣೆ ಮಾಡಿದ ಸಂಗಾತಿ ಬಳಗಕ್ಕೆ ಅಭಾರಿ ಯಾಗಿದ್ದೇನೆ

Leave a Reply

Back To Top