ಪ್ರೇಮಾ ಟಿ ಎಂ ಆರ್. ಕವಿತೆ-ಈ ನೆನಪು ಕಾಡಿದ ಹಾಗೆ

ಕಾವ್ಯ ಯಾನ

ಪ್ರೇಮಾ ಟಿ ಎಂ ಆರ್.

ಈ ನೆನಪು ಕಾಡಿದ ಹಾಗೆ

ಜೋರು ಮಳೆ
ಕೈಯ್ಯಲ್ಲಿ ಹಬೆಯಾಡುವ ಕೊಫಿ ಮಗ್ಗು
ಸುರಿವ ಮಳೆಯ ನೋಡುತ್ತ ಕಿಟಕಿಗಾತು ನಿಂತರೆ
ತಟ್ಟನೆ ನಿನ್ನ ನೆನಪು ಕಾಡುತ್ತದೆ ಹುಡುಗ

ಗಂಡ ಮನೆ ಮಕ್ಕಳು ಎಂದು
ಸಂಸಾರಕ್ಕೆ ಜೋತು ಬಿದ್ದು
ಎಲ್ಲ ಮರೆತು ಬಿಡಬೇಕೆಂದು
ಮಾಯದ ಮನಸಿಗೆ ಮುನಿಸಿ ರಮಿಸಿ
ಅಷ್ಟಕ್ಕೂ ಬಾಗದಿದ್ದರೆ ಅಟ್ಟಾಡಿಸಿ
ಒಂದು ಗದುಮಿ ಅಂತೂ
ಎಲ್ಲ ಮರೆತೆನೆಂದು ಹಗುರಾಗಿದ್ದು
ಅದೆಷ್ಟು ಬಾರಿಯೋ
ಆದರೂ ಅಲ್ಲೊಮ್ಮೆ ಕೂತಾಗ
ಇಲ್ಲೊಮ್ಮೆ ನಿಂತಾಗ ನಿನ್ನ ನೆನಪಾಗಿ
ಕೆನ್ನೆ ಕಿವಿಯಂಚು ಇಷ್ಟೇ ಇಷ್ಟು ಬಿಸಿಯಾಗುತ್ತದೆ
ಯಾರಾದರೂ ಕಂಡು ಬಿಟ್ಟಾರೆಂದು
ಎದೆ ಹಾರುತ್ತದೆ

ಇಷ್ಟಕ್ಕೂ ಏನಿತ್ತು ಹೇಳು ನನ್ನ ನಿನ್ನ ನಡುವೆ?
ಎಲ್ಲೋ ನೋಟಗಳು ಬೆರೆತಾಗ
ಒಂದು ಪುಳಕ
ಅಪರೂಪಕ್ಕೊಮ್ಮೆ ಏನನ್ನೋ ಕೊಡಕೊಳ್ಳುವಾಗ
ಬೆರಳು ಸೋಂಕಿದರೆ
ಲೆಕ್ಕ ತಪ್ಪುವ ಎದೆ ಬಡಿತ
ಮತ್ತೆಮತ್ತೆ ನಿನ್ನೆದುರು ಸುಳಿಯಬೇಕೆಂಬ ತವಕ
ಹಾಗೇ ಇನ್ನೂ ಏನೇನೋ ಚೂರುಪಾರು

ಇಂಥದ್ದೇ ಜೋರು ಮಳೆಯಲ್ಲಿ
ನಾನು ನೀನು
ಒಂದೇ ಛತ್ರಿಯ ಕೆಳಗೆ
ಉಸಿರಿಗೆ ಉಸಿರು ತಳುಕುಗೊಂಡಿದ್ದವು
ನೀನೇನೋ ಹೇಳುತ್ತೀಯೆಂದು
ನಾಚಿ ನೀರಾದ ನಾನು
ನಾನೇ ಮೊದಲು ಹೇಳಲೆಂದು
ನೀನು ನಿನ್ನ ಅಹಮ್ಮು
ಒಟ್ಟಿನಲ್ಲಿ ನಮ್ಮ ನಡುವೆ ಬಿದ್ದುಕೊಂಡಿದ್ದು
ಬರೀ ಮೌನ ಸಾಮ್ರಾಜ್ಯವೇ ಅಲ್ಲವೇ…..?
ಆ ಗಳಿಗೆಗಳನ್ನು ಮೆಲುಕುತ್ತೇನೆ

ಸುಮ್ಮ ಸುಮ್ಮನೆ
ನೀ ನನ್ನ ಎದುರು
ನಾ ನಿನ್ನ ಎದುರು ಸುಳಿದಾಡಿದ್ದು
ಹಾಗೆ ಎದುರಾದಾಗೆಲ್ಲ
ಬದುಕು ಬವಣೆ ಎಲ್ಲವೂ
ನಿನಗಾಗಿಯೇ ಎಂದು ಕೊಂಡಿದ್ದು
ಇದೇ ಪ್ರೇಮ ಎಂದಾದರೆ
ಹಾಂ ನಾವೂ ಪ್ರೀತಿಸಿದ್ದೆವು

ನಿನಗೆ ನಾನು ನನಗೆ ನೀನು
ಗಂಟಾಗಿದ್ದರೆ ಒಂದು ಬಟ್ಟಲು ಒಲುಮೆ
ಒಂದು ಬೊಗಸೆ ಪ್ರೀತಿ
ಒಂದಷ್ಟು ಹುಡುಗಾಟ
ಮತ್ತೊಂದಷ್ಟು ಓ ಇದು ಇಷ್ಟೇನಾ ಎಂಬ ನಿರಾಸೆ
ಅಷ್ಟೇ ತಾನೇ….

ಕಣ್ಷಿಗೆ ಕಸ ಬಿದ್ದಾಗ ಉಫ ಎಂದು
ಊದುವಷ್ಟೇ ಕಾಲದ
ಒಂಟಿಯಾದಾಗೆಲ್ಲ ಬಂದು ಜೊತೆಗೂಡುವ
ಈ ನೆನಪುಗಳು
ಮಳೆಯಂತೆ ಜಿರಿಜಿರಿ ಎನ್ನುತ್ತವೆ
ಕೆಲವೊಮ್ಮೆ ಧೋಗುಡುತ್ತವೆ
ಒಮ್ಮೊಮ್ಮೆ ಮಳೆ ನಿಂತಮೇಲಿನ
ಹನಿಯಂತೆ ಟಪಗುಡುತ್ತವೆ

ಈ ನೆನಪುಗಳೂ ಹಿತವಾಗಿದೆ ಬಿಡು
ಈ ಮಳೆಯ ಹಾಡಿನ ಹಾಗೆ ಎನ್ನಲಾಗದು
ಇಂದಿಗೂ
ಯಾಕೋ ನಿನ್ನ ನೆನಪಾದಾಗೆಲ್ಲ
ಎದೆ ಬಿರಿದು ಕಣ್ಣೊಳಗೆ ಮಳೆ ತುಂಬುತ್ತದೆ.
*
ಪ್ರೇಮಾ ಟಿ ಎಂ ಆರ್

(ಕವಿ ಬರೆದದ್ದೆಲ್ಲ ಅವನಿ(ಳಿ)ಗೆ ಸ್ವಂತವಲ್ಲ..
ಕವಿಯೆಂದರೆ ಕಲ್ಪನೆ ಎಂಬ ಅರಿವಿನಲ್ಲಿ ಓದಿಕೊಳ್ಳಿ)


Leave a Reply

Back To Top