ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ ಕವಿತೆ-
ಬಿನ್ನಹ
ಕೋಪದಿ ಕೊರಕಿನಲಿ ಇರುಕಿನಲಿ
ಬಂಡೆ ಬಿರುಕಿನಲಿ ನೂಕಿದರೂ…
ಮೌನದ ಕೂಪದಲಿ ಜೀಕಿದರೂ…
ನಸು ನಗುತಲೆ ಇರುವೆ…
ಸ್ನೇಹದ ತುಸು ನೇವರಿಕೆ ಪಸೆಯಲ್ಲೇ
ಹೊನ್ನ ಹಸೆ ಹಾಕಿರುವೆ…
ಪ್ರೀತಿಯ ಹನಿ ಸಿಂಚನಕೆ ಹೃದಯದುಂಬಿ
ಹಳದಿ ಹಡದಿ ಹಾಸಿರುವೆ..
ನೀನಿತ್ತ ಶಿಕ್ಷೆ ರಕ್ಷೆ ನೋವು ನಲಿವುಗಳ
ಒಪ್ಪಿ ಅಪ್ಪಿ ಅರಳಿರುವೆ..
ಅರಿಶಿಣಗೆನ್ನೆ ಹೊನ್ನೆ ಮನ ಹೂ
ಮುಗುದೆ ಸೋತು ಶರಣಾಗಿರುವೆ ….
ಹೊನ್ನ ಹೂ ದಂಡೆ..ವನಸುಮ ಘಮ
ಬೇಲಿ ಹೂ ಮಾಲೆಯಿದು…
ಕಲ್ಲುಬಂಡೆಯ ಬಿರುಬಿಸಿಲಲೂ
ಉಸಿರಾಗಿ ಕಾಯುತಿರುವೆ..
ತೆರೆದು ಎದೆಕದವ ದನಿಯನಾಲಿಸದ
ನಿನ್ನ ಪ್ರೀತಿ ಸ್ನೇಹ ಪರಿವಿಡಿಯ ಪರಿಗೆ
ನಿಬ್ಬೆರಗಾಗಿ ಮನ ಪರಿಧಿಯಲೆ
ಪರಿಭ್ರಮಣ ಮಾಡುತಿರುವೆ ….
ಬಂಗಾರ ಮನ ಹೊಂಬಣ್ಣ ಹೂ ಚೆನ್ನ
ಕೋಪ ಬೇಗೆಗೆ ಬಳಲಿ ಬಾಡುವ ಮುನ್ನ.
ಮೌನದ ಸೆರೆಯಿಂದ ಬಿಡಿಸೊಮ್ಮೆ ನನ್ನ…
ನೋಡಬಾರದೇ ಬಂದೊಮ್ಮೆನಗು ನಗುತ ಎನ್ನ….
ಇಂದಿರಾ ಮೋಟೆಬೆನ್ನೂರ
ತುಂಬ ಸೊಗಸಾದ ಕವನ
ತುಂಬ ಸೊಗಸಾದ ಕವನ!
ಸವಿ ಸ್ಪಂದನೆಗೆ ಆತ್ಮೀಯ ಧನ್ಯವಾದಗಳು…. ಜಯಾ ಮೇಡಂ…