ಜಯಂತಿ ಸುನಿಲ್ ಕವಿತೆ-ಎಷ್ಟಾದರೂ ಹೆಣ್ಣಲ್ಲವೇ..?

ಕಾವ್ಯ ಸಂಗಾತಿ

ಜಯಂತಿ ಸುನಿಲ್

ಎಷ್ಟಾದರೂ ಹೆಣ್ಣಲ್ಲವೇ..?

ನಿಮ್ಮ ಮೇಲಾಣೆ…
ಹೆಣ್ಣು ದೌರ್ಭಾಗ್ಯದ ಅಳತೆ
ಈ ಭುವಿಯ ಮೇಲೆ..
ಸಿಡುಕುವ ಸೂರ್ಯನಿಂದ ಮೊದಲ್ಗೊಂಡು,
ಇರುಳು ಸುರಿವ ಕತ್ತಲಿನವರೆಗೂ…
ದೇವರ ಅವಳ ದಿನಚರಿಯ ಎಲ್ಲಾ ವಿನಂತಿಗಳನ್ನು ಕೇಳಿಸಿಕೊಳ್ಳಬೇಕಿತ್ತು,,ಬಾಕಿ ಉಳಿಸುತ್ತಾನೆ.
ಖುಷಿಯಿದ್ದೆಡೆ ಅವಳ ಕಂಗಳಲಿ ನೂರು ನವಿಲು ಕುಣಿಯುವುದು
ಒಂದಿನಿತು ನೋವಾದರೂ ಮೂಗಿಗೆ ಥಂಡಿ ಬಡಿದಂತೆ ಒಂದೇ ಸಮನೆ ಮಳೆಗಾಲ..!!

ಬೆಂದಷ್ಟು ಬದುಕು
ಚಿಗುರೊಡೆದಷ್ಟು ಸುಂದರ
ಶಿಶಿರ-ವಸಂತಗಳ ಸಮ್ಮಿಲನದಂತಹ ಕಾಯ
ಬದುಕು ಮುಗಿಯುವವರೆಗೂ ಅದೆಷ್ಟು ಬಾರಿ ಮೋಡದ ತುಣುಕುಗಳು ಅವಳ ಕೆನ್ನೆಯನ್ನು ಸವರಿರಬೇಕು ಮಳೆಗಾಲವನ್ನೇ ಕೇಳಬೇಕು!!

ಹೃದಯ ಮುಟ್ಟಿದರೆ ಮಾತು
ಮುನಿದರೆ ಹೆದರಿಕೆಯಷ್ಟು ಮೌನ
ಸಂಜೆ ಇಳಿದು ಕತ್ತಲಾಗಿ ಬಾನಲಿ ಚಂದ್ರ ಗೋರಿಕಟ್ಟುವುದರೊಳಗೆ
ಹಲವು ಬಾರಿ ಸತ್ತು ಬದುಕುವ ಜನ್ಮ
ತನ್ನವರಿಗೆ ಅರ್ಪಿಸಿಕೊಳ್ಳುವುದರೊಳಗೆ ಖಾಲಿಯಾಗುವುದೇ ಹೆಣ್ತನ?
ಇಲ್ಲಿಗೆ ಮುಗಿವುದೇ ಅವಳ ಜೀವನ..?

ಸೊಕ್ಕಿ ಉಕ್ಕಿದ ಪೌರುಷಗಳಿಂದ
ಎಲ್ಲದಕ್ಕೂ Adjust ಮಾಡಿಕೋ ಎಂದವರೇ…
ನಿಮಗೆ ಗೊತ್ತೇ?
ಅವಳೊಳಗೂ ಕುದಿವ ಲಾವಾರಸಗಳಿವೆ
ಭೋರ್ಗರೆವ ಜಲಪಾತಗಳಿವೆ
ಅಳುವ ಮೋಡದ ರುಜುಗಳಿವೆ..!!

ಅವಳು ನಕ್ಕರೆ ವಸಂತಗಾಲ
ಅತ್ತರೆ ಮಳೆಗಾಲವೆಂದು
ನಂಬಿಸಿಬಿಟ್ಟಿರಲ್ಲಾ
ಕಾವ್ಯಕಟ್ಟಿ ಹಾಡಿದಿರಲ್ಲಾ…
ಕೊನೆಗೂ ಅವಳಿಗೆ ಪ್ರೀತಿಯ ಹೆಸರೇಳಿ ವಿಷವನ್ನು ಉಣಬಡಿಸಿದರೂ…
ಉಂಡಳು
ತ್ಯಾಗಮಾಡಿದಳು
ಸಹಿಸಿಕೊಂಡಳು
ಖಾಲಿಯಾಗಸವಾದಳು..!!
ಅವಳು ಎಷ್ಟಾದರೂ ಹೆಣ್ಣಲ್ಲವೇ??

ನಿಮ್ಮ ಮೇಲಾಣೆ…
ಹೆಣ್ಣು ಕುಲ ಕರ ಜೋಡಿಸಿ ನಮಸ್ಕರಿಸಬೇಕೆನ್ನಿಸುತ್ತದೆ…
ಯಾರಿಗೆ??? ಎನ್ನುವುದೇ ಪ್ರಶ್ನೆಯಾಗಿ ಉಳಿಯುತ್ತದೆ.


ಜಯಂತಿ ಸುನಿಲ್

3 thoughts on “ಜಯಂತಿ ಸುನಿಲ್ ಕವಿತೆ-ಎಷ್ಟಾದರೂ ಹೆಣ್ಣಲ್ಲವೇ..?

Leave a Reply

Back To Top