ಕಾವ್ಯ ಸಂಗಾತಿ
ಮರೆಯಲೆಂಗ ನಿನ್ನ
ಡಾ ಅನ್ನಪೂರ್ಣ ಹಿರೇಮಠ
ನಿನ್ನ ಗುಂಗ ಹಿಡಿಸಿ ನನ್ನ ಮಂಗ ಮಾಡಿದಿ
ಸಂಘದ ಆಸೆ ತೋರಿಸಿ ಹಿಂದ ಮುಂದ ಸುಳಿದಿ
ದೂರ ಹೋಗಿ ಹಿಂಗ ನೋವ್ಯಾಕ ಕೊಡತಿ
ನಿನ್ನ ಮರಿತೇನ ಅಂತ ನೀ ಹ್ಯಾಂಗ ತಿಳಿದಿ//
ಸನ್ನೇ ಮಾತಿನಾಗ ನೂರು ಪ್ರೇಮ ರಾಗ ಹಾಡಿ
ಹಗಲು ರಾತ್ರಿ ನನ್ನ ಬಿಡದೆ ಕಾಡಿ
ಮುತ್ತಿಟ್ಟು ಸೆಳೆದು ಮೋಡಿ ಮಾಡಿ
ಹೊತ್ತು ಗೊತ್ತಿಲ್ಲದೆ ನನ್ನ ಜೊತೆಗೂಡಿ
ಮಾಡಿಬಿಟ್ಟೆಲ್ಲ ನನ್ನ ಹುಚ್ಚ ಕೊಡಿ//
ಮನದಾಗ ಪ್ರೀತಿಯ ಗೂಡು ಕಟ್ಟಿದಿ
ಗುಬ್ಬಿ ಮರಿಯಂಗ ನನ್ನ ಅಲ್ಲಿ ಬಚ್ಚಿಟ್ಟಿ
ಜೊತೆಯಾಗಿ ಸರಸ ಸಲ್ಲಾಪಿಸಿ
ದೂರಾಗಿ ವಿರಹದಿ ಪುಟ್ಟ ಗೂಡ್ಯಾಕ ಸುಡತಿ,
ದೂರ ದೂರ ನನ್ಯಾಕ ಹಿಂಗ ದೂಡತಿ//
ಒಡಲ ಕಡಲಾಗ ನಿನ್ನ ನೆನಪ ಹಾಡತಾವ
ಮನದ ಗುಡಿಯಾಗ ನಿನ್ನ ಚಿತ್ರ ಕಾಣತವ
ಕಣ್ಣ ತುಂಬೆಲ್ಲ ನಿನ್ನ ಬಿಂಬ ಸುಳಿಯತಾವ
ಭಾವದಲೆಯಾಗ ನಿನ್ನ ಮಾತ ಕೇಳತಾವ
ನೀನಿಲ್ಲದ ಗಳಿಗ್ಯಾಗ ನಿನ್ನ ನೆನಪ ಬಿಡದ ಕಾಡತಾವ//
ನಿನ್ನೊಲವಿನ ಬಂಡಿ ನನ್ನ ಹಿಂಗ ಹಿಂಡಿ
ಸವದೈತಿ ಬೆಸೆದ ಪ್ರೀತಿಯ ಕೊಂಡಿ
ಆಗೈತಿ ಮನ ಅತ್ತು ಅತ್ತು ಕಾಲಿ ಹುಂಡಿ
ತುಸು ಪ್ರೀತಿ ಬಸಿದು ತುಂಬೊದಿಲ್ಲೇನ ಈ ಗಿಂಡಿ
ನನ್ನ ಹೃದಯ ಮಾಡಿಬಿಟ್ಟೆಲ್ಲಾ ಹಲಬುವ ಕಿಂಡಿ//
ಡಾ ಅನ್ನಪೂರ್ಣ ಹಿರೇಮಠ